ಕೂಡಿಗೆ, ಮೇ 2 : ಕರ್ನಾಟಕ ರಾಜ್ಯದಲ್ಲೇ ಪ್ರಥಮವಾಗಿ ಪ್ರಾರಂಭಗೊಂಡ ಕೂಡಿಗೆಯ ಕ್ರೀಡಾ ಪ್ರೌಢಶಾಲೆಗೆ ರಾಜ್ಯದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಕೆ.ಶ್ರೀನಿವಾಸ್ ಅವರು ಭೇಟಿ ನೀಡಿ, ಶಾಲೆಯ ವ್ಯವಸ್ಥೆಗಳನ್ನು ಹಾಗೂ ಹಾಕಿ ಟರ್ಫ್ ಕಾಮಗಾರಿಯನ್ನು ಪರಿಶೀಲಿಸಿದರು.

ಟರ್ಫ್ ಕಾಮಗಾರಿಯನ್ನು ಗುತ್ತಿಗೆಪಡೆದಿರುವ ಗುತ್ತಿಗೆದಾರನಿಗೆ ಇಲಾಖೆಯ ವತಿಯಿಂದ ಹಂತ ಹಂತವಾಗಿ ಹಣ ನೀಡಲಾಗಿದೆ. ಈಗ ಹಾಕಿರುವ ಟರ್ಫ್ ಗಾಳಿಗೆ ಹಾರಿಹೋಗಿರುವದನ್ನು ಮತ್ತು ಇನ್ನಿತರ ಆಗಬೇಕಾದ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಿ, ಮುಂದಿನ 2019-20ನೇ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕ್ರೀಡಾಶಾಲೆಯಲ್ಲಿ ಈಗಾಗಲೇ ಇರುವ ಸಿಂಥೆಟಿಕ್ ಟ್ರಾಕ್‍ನ ಮಾರ್ಕ್ ಅಳಿಸಿಹೋಗಿದ್ದು, ಮತ್ತು ಅಳತೆಯ ಬಗ್ಗೆ ಅಂತರರಾಷ್ಟ್ರೀಯ ಮಟ್ಟದ ಇಂಜಿನಿಯರ್‍ಗಳನ್ನು ಇಲಾಖೆಯ ವತಿಯಿಂದ ಕರೆಸಿ ಟ್ರಾಕ್‍ನೊಳಗೆ ನೀರು ನಿಲ್ಲದ ಹಾಗೆ ಮತ್ತು ನೂತನ ಮಾದರಿಯಲ್ಲಿ ನಿರ್ಮಿಸಲು ಟೆಂಡರ್ ಪ್ರಕ್ರಿಯೆಯನ್ನು ಪ್ರಾರಂಭಿಸುವಂತೆ ರಾಜ್ಯದ ನಿರ್ದೇಶಕರಿಗೆ ಸೂಚನೆ ನೀಡಿದರು.

ಒಳಾಂಗಣ ಕ್ರೀಡಾಂಗಣಕ್ಕೆ ಭೇಟಿ ನೀಡಿ ಮೇಲ್ಚಾವಣಿಯಿಂದ ನೀರು ಸೋರುವಿಕೆ ಮತ್ತು ವಾಲ್‍ಬಾರ್ ಅಳವಡಿಕೆ, ಒಳಕ್ರೀಡಾಂಗಣಕ್ಕೆ ಕಡಿಮೆ ವೆಚ್ಚದಲ್ಲಿ ಹೆಚ್ಚು ಬೆಳಕು ನೀಡುವ ನೂತನ ತಾಂತ್ರಿಕ ವ್ಯವಸ್ಥೆಯ ವಿದ್ಯುತೀಕರಣವನ್ನು ಅಳವಡಿಸುವಂತೆ ಸೂಚಿಸಿದರು. ಕ್ರೀಡಾಶಾಲೆಗೆ ಸೇರಿದ ಜಾಗದಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ದೃಷ್ಟಿಯಿಂದ ಬಾಲಕ ಮತ್ತು ಬಾಲಕಿಯರಿಗೆ ವಸತಿ ನಿಲಯಗಳನ್ನು ತೆರೆಯುವ ಬಗ್ಗೆ ಜಾಗವನ್ನು ಪರಿಶೀಲಿಸಿದರು.

ಈಗಿರುವ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳಿಗೆ ಬೇಟಿ ನೀಡಿ, ನಿಲಯಗಳಲ್ಲಿ ಶೌಚಾಲ ಯದ ವ್ಯವಸ್ಥೆಯನ್ನು ಆಧುನೀಕರಿಸು ವಿಕೆ ಮತ್ತು ವಿದ್ಯಾರ್ಥಿಗಳಿಗೆ ಬೇಕಾಗುವ ಸೌಕರ್ಯಗಳನ್ನು ಒದಗಿಸಲು ಮುಂದಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭ ಸುದ್ದಿಗಾರ ರೊಂದಿಗೆ ಮಾತನಾಡಿದ ಆಯುಕ್ತರು, ಹಾಕಿ ಟರ್ಫ್ ಕಾಮಗಾರಿಯು ಕೆಲ ಕಾಲ ವಿಳಂಬವಾದರೂ ವಿದ್ಯಾರ್ಥಿಗಳ ಸುರಕ್ಷತಾ ದೃಷ್ಟಿಯಿಂದ ಅಂತರರಾಷ್ಟ್ರೀಯ ಮಟ್ಟದ ವ್ಯವಸ್ಥೆಯಡಿ ಕಾಮಗಾರಿಯನ್ನು ಪೂರ್ಣಗೊಳಿಸಲು ಎಲ್ಲಾ ರೀತಿಯ ಕ್ರಮಕೈಗೊಳ್ಳಲಾಗಿದೆ. ವಾಲಿಬಾಲ್ ಮತ್ತು ಜಿಮ್ನಾಸ್ಟಿಕ್ ಕ್ರೀಡಾಂಗಣದ ವ್ಯವಸ್ಥೆಗೆ ಹಣವನ್ನು ಬಿಡುಗಡೆ ಮಾಡಲಾಗುವದು.

ಈ ಸಂದರ್ಭ ಕರ್ನಾಟಕ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ನಿರ್ದೇಶಕ ಡಾ.ಜಿಥೇಂದ್ರಶೆಟ್ಟಿ, ಕೊಡಗು ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಜಯಲಕ್ಷ್ಮಿಬಾಯಿ, ಕೂಡಿಗೆ ಕ್ರೀಡಾಶಾಲೆಯ ಪ್ರಾಂಶುಪಾಲೆ ಕುಂತಿಬೋಪಯ್ಯ, ಕ್ರೀಡಾ ತರಬೇತುದಾರರಾದ ಡಾ. ವಸಂತ್‍ಕುಮಾರ್, ಅಂತೋಣಿ, ವೆಂಕಟೇಶ್, ಬಿಂದು ಸೇರಿದಂತೆ ವಿವಿಧ ಕ್ರೀಡಾ ತರಬೇತಿದಾರರು ಇದ್ದರು.