ಕುಶಾಲನಗರ, ಏ. 30: ದ್ವಿಚಕ್ರ ವಾಹನದ ಹೆಲ್ಮೆಟ್ ರಹಿತ ಸವಾರರಿಗೆ ದಂಡ ವಿಧಿಸುವ ಕಾರ್ಯಾಚರಣೆ ಕುಶಾಲನಗರ ಪಟ್ಟಣದಲ್ಲಿ ಮಂಗಳವಾರ ನಡೆಯಿತು. ಏಕಕಾಲದಲ್ಲಿ ಪಟ್ಟಣದ 6 ಕಡೆ ಪೊಲೀಸರ ತಂಡಗಳು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದ ಸವಾರರಿಗೆ ಸ್ಥಳದಲ್ಲಿಯೇ ದಂಡ ವಿಧಿಸುವ ಮೂಲಕ ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಸೂಚನೆ ನೀಡಲಾಯಿತು.
ಪೊಲೀಸ್ ವರಿಷ್ಠಾಧಿಕಾರಿ ಡಿ.ಪಿ.ಸುಮನ, ಡಿವೈಎಸ್ಪಿ ದಿನಕರ ಶೆಟ್ಟಿ ನಿರ್ದೇಶನ ಮೇರೆಗೆ ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ನೇತೃತ್ವದಲ್ಲಿ ನಗರ ಠಾಣೆ, ಗ್ರಾಮಾಂತರ ಠಾಣೆ ಮತ್ತು ಸಂಚಾರಿ ಪೊಲೀಸ್ ಠಾಣಾಧಿಕಾರಿಗಳ ಮತ್ತು ಸಹಾಯಕ ಠಾಣಾಧಿಕಾರಿಗಳ 6 ತಂಡಗಳು ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತ, ಕೊಪ್ಪ ಅರಣ್ಯ ತಪಾಸಣಾ ಗೇಟ್, ಮುಳ್ಳುಸೋಗೆ ಪ್ರವಾಸಿ ಮಂದಿರ ಜಂಕ್ಷನ್, ತಾವರೆಕೆರೆ, ಗುಡ್ಡೆಹೊಸೂರು ವ್ಯಾಪ್ತಿಯಲ್ಲಿ ಬೆಳಗ್ಗೆ 8 ಗಂಟೆಯಿಂದ ಪ್ರಾರಂಭಗೊಂಡು ಸಂಜೆ ತನಕ ಕಾರ್ಯಾಚರಣೆ ನಡೆಸಿದರು.
ಕುಶಾಲನಗರದಲ್ಲಿ ಮಂಗಳವಾರ ಸಂತೆ ದಿನವಾದ ಹಿನ್ನಲೆಯಲ್ಲಿ ಹೆಚ್ಚಿನ ವಾಹನ ಸಂಚಾರ ದಟ್ಟಣೆ ಇದ್ದು ಈ ಸಂದರ್ಭ ನೂರಾರು ದ್ವಿಚಕ್ರ ವಾಹನಗಳ ಸವಾರರು ಆಪರೇಷನ್ ಹೆಲ್ಮೆಟ್ ಕಾರ್ಯಾಚರಣೆಗೆ ಸಿಲುಕಿಕೊಂಡು ದಂಡ ತೆರಬೇಕಾಯಿತು.
ಹೆಲ್ಮೆಟ್ ಧರಿಸದ ಸವಾರರಿಗೆ ರು 100, ದಾಖಲೆ ಇಲ್ಲದೆ ವಾಹನ ಚಲಾಯಿಸಿದಲ್ಲಿ ರು 300, ವಿಮೆ ಇಲ್ಲದ ವಾಹನಗಳಿಗೆ ರು 500 ಅಲ್ಲದೆ ಪಾನಮತ್ತ ಮತ್ತಿತರ ಅಪರಾಧಗಳಿಗೆ ದಂಡ ವಿಧಿಸಿದ ಪೊಲೀಸರು ಕಡ್ಡಾಯವಾಗಿ ಹೆಲ್ಮೆಟ್ ಧರಿಸುವಂತೆ ಅರಿವು ಮೂಡಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿಗಳಾದ ಜಗದೀಶ್, ನಂದೀಶ್, ಸೋಮೇಗೌಡ ಸೇರಿದಂತೆ ಸಹಾಯಕ ಠಾಣಾಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.