ಗೋಣಿಕೊಪ್ಪಲು.ಏ.30: ಕೊಡಗಿನ ಗಡಿಯಲ್ಲಿರುವ ಸಂರಕ್ಷಿತ ಮೀಸಲು ಅರಣ್ಯದಲ್ಲಿ ಪ್ರಾಣಿ ಬೇಟೆ ಮಾಡಿ ಮಾರಾಟ ಮಾಡುತ್ತಿದ್ದ ಆರು ಮಂದಿ ಆರೋಪಿಗಳಿಗೆ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ಕುಟ್ಟ ವ್ಯಾಪ್ತಿಯ ಅರಣ್ಯದಲ್ಲಿ ಕಡವೆ ಬೇಟೆಯಾಡಿ ಮಾಂಸ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಜಿಲ್ಲಾ ಅಪರಾಧ ಪತ್ತೆ ದಳದ ತಂಡ ಕುಟ್ಟದ ಇರ್ಪು ಸಮೀಪ ಆರೋಪಿಗಳ ಸಮೇತ ಮದ್ದು ಗುಂಡು, ಮಾಂಸ, ವಾಹನ ಸೇರಿದಂತೆ ಒಟ್ಟು 10 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡು, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಸಂದರ್ಭ ಆರೋಪಿಗಳನ್ನು ನ್ಯಾಯಾಂಗ ಬಂಧÀನಕ್ಕೆ ಒಳಪಡಿಸಲಾಗಿತ್ತು. ಈ ಪ್ರಕರಣದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಪೊನ್ನಂಪೇಟೆ ನ್ಯಾಯಾಧೀಶರು ಎಲ್ಲಾ ಆರೋಪಿಗಳಿಗೆ 50 ಸಾವಿರ ಬಾಂಡ್ ಸಮೇತ ಹಲವು ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರವಾಗಿ ವಕೀಲ ಡಿ.ಸಿ. ಧ್ರುವ, ಗಿರೀಶ್ ಅಣ್ಣಯ್ಯ ವಕಾಲತ್ತು ವಹಿಸಿದ್ದರು.