ಶನಿವಾರಸಂತೆ, ಏ. 30: ನಿಡ್ತ ಪಂಚಾಯಿತಿ ವ್ಯಾಪ್ತಿಯ ಚೌಡನಹಳ್ಳಿ ಗ್ರಾಮದ ಕಾಫಿತೋಟದಲ್ಲಿ ಒಣಗಿದ ಬೀಟೆ ಮರವೊಂದನ್ನು ಕಡಿದು 5 ನಾಟಗಳನ್ನಾಗಿ ಪರಿವರ್ತಿಸಿ 4-5 ಮಂದಿ ಆರೋಪಿಗಳು ಸಾಗಾಟ ಮಾಡಲು ಯತ್ನಿಸಿದ್ದು, ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಶನಿವಾರಸಂತೆ ಅರಣ್ಯ ವಲಯಾಧಿಕಾರಿ ಕೆ. ಕೊಟ್ರೇಶ್ ತಮ್ಮ ಸಿಬ್ಬಂದಿಗಳೊಂದಿಗೆ ಇಂದು ಬೆಳಗಿನ ಜಾವ ದಾಳಿ ನಡೆಸಿದ್ದಾರೆ. ಬೀಟೆ ನಾಟ ಹಾಗೂ ವಾಹನ ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಚೌಡನಹಳ್ಳಿ ಬಸವಲಿಂಗಯ್ಯ ಎಂಬವರಿಗೆ ಸೇರಿದ ಕಾಫಿತೋಟದಲ್ಲಿ ಆರೋಪಿಗಳು ಬೀಟೆ ಮರವನ್ನು ಕಡಿದು ಬುಡದ ಭಾಗವನ್ನು ಕೊಂಡೊಯ್ದಿದ್ದರು. ಈ ಬಗ್ಗೆ ಅರಣ್ಯ ಇಲಾಖೆಗೆ ದೊರೆತ ಪುಕಾರಿನ ಮೇರೆ ಬಾಕಿ ಉಳಿದ 5 ನಾಟಗಳನ್ನು ಆರೋಪಿಗಳು ತೆಗೆದುಕೊಂಡು ಹೋಗಲು ಬರಬಹುದು ಎಂದು ಹೊಂಚು ಹಾಕಿ ಇಂದು ಬೆಳಗ್ಗಿನ ಜಾವ ದಾಳಿ ನಡೆಸಿದ್ದರು. ಆರೋಪಿಗಳು ಮಾರುತಿ ಕಾರಿನೊಂದಿಗೆ (ಕೆ.ಎ. 02 ಎಂ. 1917, ಕೆ.ಎ. 02 ಎನ್. 634) ಬೀಟೆನಾಟಗಳನ್ನು ತುಂಬಿಸುತ್ತಿದ್ದರು. ಅಲ್ಲದೆ ತಮ್ಮ ವಾಹನವನ್ನು ಸ್ಥಳದಲ್ಲೇ ಬಿಟ್ಟು ಕಾಫಿ ತೋಟದೊಳಗಡೆ ಪರಾರಿಯಾದರು. ಪರಾರಿಯಾದ ಆರೋಪಿಗಳಲ್ಲಿ ಗುಂಡೂರಾವ್ ಬಡಾವಣೆಯ ಜೈಸನ್ ಹಾಗೂ ಹೊಸೂರು ಅಣ್ಣಯ್ಯ ಎಂದು ಗುರುತಿಸಲಾಗಿದೆ. 5 ಬೀಟೆ ನಾಟ ಹಾಗೂ 2 ಮಾರುತಿ ಕಾರು ಸೇರಿದಂತೆ ಮೌಲ್ಯ ರೂ. 2.50 ಲಕ್ಷದ ಸ್ವತ್ತನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಶನಿವಾರಸಂತೆ ಉಪ ವಲಯ ಅರಣ್ಯಾಧಿಕಾರಿ ಹೆಚ್.ಎಸ್. ಶಿವಕುಮಾರ್, ಅರಣ್ಯ ರಕ್ಷಕರಾದ ಲೋಹಿತ್, ಡಿ.ಎಸ್. ಜಯಕುಮಾರ್, ರಮೇಶ್, ಚಾಲಕರಾದ ಹರೀಶ್ ಕುಮಾರ್, ಭರತ್, ನವೀನ್, ಶೇಖರ್ ಪಾಲ್ಗೊಂಡಿದ್ದರು.