ಸಿದ್ದಾಪುರ, ಏ. 29 : ಮಲಯಾಳಂ ಸರ್ಕಾರಿ ಪ್ರಾಥಮಿಕ ಶಾಲೆಯೊಂದು ಇದೀಗ ಮಕ್ಕಳ ಕೊರತೆಯಿಂದಾಗಿ ವಿನೂತನ ರೀತಿಯಲ್ಲಿ ಆಂಗ್ಲ ಮಾಧ್ಯಮ ಶಾಲೆ ತೆರೆಯುವ ಮೂಲಕ ಮಕ್ಕಳನ್ನು ಸೆಳೆಯಲು ಮುಂದಾಗಿದೆ. ಸಿದ್ದಾಪುರ ವ್ಯಾಪ್ತಿಯಲ್ಲಿ ಮಳಿಯಾಳಿ ಭಾಷಿಗರು ಅತ್ಯಧಿಕ ಇರುವ ಹಿನ್ನೆಲೆಯಲ್ಲಿ 1957-58ರಲ್ಲಿ ಸರ್ವೊದಯ ವಾಚನಾಲಯ ಎಂಬ ಹೆಸರಿನಲ್ಲಿ ಶಾಲೆ ಪ್ರಾರಂಭವಾಯಿತು. ಅಂದಿನ ಕಾಲದಲ್ಲಿ ಶಾಲೆ ಪ್ರಾರಂಭವಾದಾಗ ಶಾಲೆಗೆ ಕಟ್ಟಡ ಇರಲಿಲ್ಲ. ಹಿರಿಯರೆಲ್ಲರೂ ಸೇರಿ ಹುಲ್ಲಿನ ಗುಡಿಸಿಲಿನಲ್ಲಿ ಪ್ರಾರಂಭಿಸಿದರು. ನಂತರ 1 ಕೊಠಡಿಯಿಂದ ಪ್ರಾರಂಭವಾದ ಶಾಲೆಯು 4 ತರಗತಿಯವರೆಗೆ ಮುಂದುವರಿಯಿತು. 67 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಶಾಲೆಯಲ್ಲಿ 600ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಸಿದ್ದಾಪುರದ ಸುತ್ತಮುತ್ತಲ ಪ್ರದೇಶಗಳಿಗೆ ಇರುವ ಏಕೈಕ ಮಲಯಾಳಂ ಸರ್ಕಾರಿ ಪ್ರಾಥಮಿಕ ಶಾಲೆಗೆ ಸುತ್ತಮುತ್ತಲಿನ ಮಳಿಯಾಳಿ ಭಾಷಿಗರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದರು. ಇಲ್ಲಿ ವ್ಯಾಸಂಗ ಮಾಡಿದ ಹಲವಾರು ಮಕ್ಕಳು ವಿದೇಶದಲ್ಲಿ ಕೂಡ ಉದ್ಯೋಗದಲ್ಲಿದ್ದಾರೆ. ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ 4ನೇ ತರಗತಿಯಿಂದ 7ನೇ ತರಗತಿಯವರೆಗೆ ಮುಂದುವರಿಯಿತು. 7ನೇ ತರಗತಿಯವರೆಗೆ ಮಲಯಾಳಂ ಶಾಲೆಯಲ್ಲಿ ವ್ಯಾಸಂಗ ಮಾಡಿದ ಮಕ್ಕಳು 8ನೇ ತರಗತಿಗೆ ಬೇರೆ ಶಾಲೆಗಳಿಗೆ ತೆರಳುತ್ತಿದ್ದರು.

ಆದರೆ ವರ್ಷಗಳು ಉರುಳಿದಂತೆ ಹಾಗೂ ಸಿದ್ದಾಪುರ ಪಟ್ಟಣದಲ್ಲಿ ಹಾಗೂ ಸುತ್ತಮುತ್ತಲಿನಲ್ಲಿ ಖಾಸಗಿ ಶಾಲೆಗಳು ಅಧಿಕವಾಗಿದ ಹಿನ್ನೆಲೆಯಲ್ಲಿ ಸರಕಾರಿ ಮಲಯಾಳಂ ಶಾಲೆಯಲ್ಲಿ ಮಕ್ಕಳ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತ ಬಂದಿತ್ತು. ಕಳೆದ ಸುಮಾರು ವರ್ಷಗಳ ಹಿಂದೆ 600ಕ್ಕೂ ಅಧಿಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದ ಶಾಲೆಯಲ್ಲಿ 7ನೇ ತರಗತಿಯವರೆಗೆ ಪಾಠ ಪ್ರವಚನ ನಡೆಯುತ್ತಿದೆ. ಆದರೆ ಇದೀಗ ಮಕ್ಕಳ ಸಂಖ್ಯೆ 25ಕ್ಕೆ ಇಳಿದಿದೆ. ಶಾಲೆಯಲ್ಲಿ ಎಲ್ಲಾ ಸೌಕರ್ಯಗಳು ಇದ್ದು ನುರಿತ ಶಿಕ್ಷಕರು ಇದ್ದಾರೆ. ಆದರೆ ಮಕ್ಕಳ ಸಂಖ್ಯೆ ಮಾತ್ರ ಗಣನೀಯವಾಗಿ ಇಳಿಮುಖಗೊಳ್ಳುತ್ತಿದೆ. ಆಂಗ್ಲ ವ್ಯಾಮೋಹಕ್ಕೆ ಒಳಗಾಗಿರುವ ಪೋಷಕರು ಮಲಯಾಳಂ ಶಾಲೆಗೆ ಮಕ್ಕಳನ್ನು ಸೇರ್ಪಡೆಗೊಳಿಸುತ್ತಿಲ್ಲ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ. ಸರಕಾರಿ ಮಲಯಾಳಂ ಶಾಲೆಯಾಗಿದ್ದರೂ ಕೂಡ ಖಾಸಗಿ ಶಾಲೆಯಷ್ಟೇ ಉತ್ತಮ ರೀತಿಯಲ್ಲಿ ಪಾಠ ಪ್ರವಚನ ನಡೆಯುತ್ತಿದೆ. ಶಾಲೆಯಲ್ಲಿ ವಿಶಾಲ ಮೈದಾನ, ಕೊಠಡಿಗಳು ಇದ್ದರೂ ಕೂಡ ಮಕ್ಕಳಿಲ್ಲದೆ ಸಮಸ್ಯೆಯಾಗಿದೆ. ಶಾಲೆಗಳಿಗೆ ಮಕ್ಕಳನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಮಕ್ಕಳನ್ನು ಹೆಚ್ಚಿಸಲು ಶಾಲಾಭಿವೃದ್ಧಿ ಆಡಳಿತ ಮಂಡಳಿ ಹಾಗೂ ಶಿಕ್ಷಕರು ಶತಾಯಗತಾಯ ಪ್ರಯತ್ನಿಸುತ್ತಿದ್ದಾರೆ. ಆದರೂ ಕೂಡ ಆಂಗ್ಲ ವ್ಯಾಮೋಹಕ್ಕೆ ಸಿಲುಕಿರುವ ಪೋಷಕರು ಮಲಯಾಳಂ ಶಾಲೆಗಳಿಗೆ ವ್ಯಾಸಂಗಕ್ಕೆ ಕಳಿಸಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಈ ನಿಟ್ಟಿನಲ್ಲಿ ಶಾಲಾಭಿವೃದ್ಧಿ ಸಮಿತಿಯ ಸಭೆ ಕರೆದು ಮಕ್ಕಳ ಕೊರತೆ ಇರುವ ಹಿನ್ನೆಲೆಯಲ್ಲಿ ಸರ್ಕಾರಿ ಮಲಯಾಳಂ ಶಾಲೆಯಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಆಂಗ್ಲ ಮಾಧ್ಯಮವನ್ನು ಪ್ರಾರಂಭಿಸುವ ಬಗ್ಗೆ ಆಡಳಿತ ಮಂಡಳಿ ಚಿಂತಿಸಿದೆ. ಅಲ್ಲದೆ ಎಲ್ಲ ಸಿದ್ದತೆಗಳನ್ನು ಕೈಗೊಂಡಿರುತ್ತದೆ. ಸಂಬಂಧಪಟ್ಟ ಶಿಕ್ಷಣ ಇಲಾಖೆಯ ಗಮನಕ್ಕೆ ತರುವ ಮೂಲಕ ವಿನೂತನ ರೀತಿಯಲ್ಲಿ ಸರ್ಕಾರಿ ಮಲಯಾಳಂ ಶಾಲೆಯಲ್ಲಿ ಆಂಗ್ಲ ಮಾಧ್ಯಮ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಪೋಷಕರ ಹಾಗೂ ಆಡಳಿತ ಮಂಡಳಿಯವರ ಆಪೇಕ್ಷೆ ಮೇರೆಗೆ ಆಂಗ್ಲ ಮಾಧ್ಯಮವನ್ನು ಪ್ರಾರಂಭಿಸಿ ಅದರೊಂದಿಗೆ ಕನ್ನಡ ಹಾಗೂ ಮಲಯಾಳಂ ಪಠ್ಯಗಳನ್ನು ಕೂಡ ಮುಂದುವರೆಸುವ ಉದ್ದೇಶವಾಗಿದೆ. ಗುಣಮಟ್ಟದ ಶಿಕ್ಷಣ ನೀಡುವ ಗುರಿಯನ್ನು ಶಾಲೆಯು ಹೊಂದಿಕೊಂಡಿದೆ. ಒಟ್ಟಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಖಾಸಗಿ ಶಾಲೆಗಳ ಪೈಪೋಟಿಯಿಂದ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಗಣನೀಯವಾಗಿ ಕುಂಠಿತಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸರಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಬೆನ್ನಲ್ಲೇ ಸಿದ್ದಾಪುರದ ಮಲಯಾಳಂ ಶಾಲೆಯು ವಿನೂತನವಾಗಿ ಕೈಗೊಂಡಿರುವ ನಿರ್ಧಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ಸಿದ್ದಾಪುರದ ಸರಕಾರಿ ಮಲಯಾಳಂ ಶಾಲೆಯು ಮಾದರಿ ಶಾಲೆಯಾಗಿ ರೂಪುಗೊಳ್ಳುವ ಸಾಧ್ಯತೆ ಕಂಡು ಬಂದಿದೆ.

-ವಾಸು ಎ. ಎನ್.