ಸಿದ್ದಾಪುರ, ಏ. 29: ಖಾಸಗಿ ಕಾಫಿ ತೋಟ ಒಂದರಲ್ಲಿ ಅಕ್ರಮವಾಗಿ ತೇಗದ ಮರ ಕಳ್ಳತನ ಮಾಡಿ ತಲೆಮರಿಸಿಕೊಂಡಿದ್ದ ಅರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.
ವೀರಾಜಪೇಟೆ ವಲಯ ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಡುವ ಅಮ್ಮತ್ತಿ ಸಮೀಪದ ಹೊಸಕೋಟೆ ಹಫೀಜ್ ಖಾನ್ ಎಂಬವರ ಕಾಫಿ ತೋಟದಲ್ಲಿ ಇತ್ತೀಚೆಗೆ ತೇಗದ ಮರಗಳನ್ನು ಆರೋಪಿಗಳು ಅಕ್ರಮವಾಗಿ ಕಡಿದು ಕಾರಿನಲ್ಲಿ ಸಾಗಾಟ ಮಾಡಿದ್ದರು. ಇದು ಗ್ರಾಮದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಅರಣ್ಯ ಇಲಾಖೆಯ ಸಿಬ್ಬಂದಿಗಳು ತನಿಖೆ ನಡೆಸಿದ್ದು ಮರ ಕಳ್ಳತನಕ್ಕೆ ಸಹಕಾರ ನೀಡಿದ ತೋಟದ ರೈಟರ್ ವೀರಾಜಪೇಟೆ ನಗರದ ವಿದ್ಯಾನಗರದ ನಿವಾಸಿ ಸೈಯದ್ ಮನ್ಸೂರ್ ಹಾಗೂ ಮಗ್ಗುಲ ಗ್ರಾಮದ ನಿವಾಸಿ ಧನೇಂದ್ರ ಅಲಿಯಾಸ್ ಧನು ಎಂಬವರನ್ನು ಬಂಧಿಸಿ ಮರ ಸಾಗಾಟಕ್ಕೆ ಬಳಸಿದ್ದ ಮಾರುತಿ ಅಲ್ಟೋ ಕಾರು (ಕೆಎ-12-7605) ವಶಪಡಿಸಿಕೊಂಡಿದ್ದಾರೆ. ಕಳ್ಳತನ ಮಾಡಿದ ಮರದ ಮೌಲ್ಯ 1.50 ಲಕ್ಷ ಎಂದು ಅಂದಾಜಿಸಲಾಗಿದೆ ಆರೋಪಿ ಧನೇಂದ್ರ ನೀಡಿದ ಮಾಹಿತಿ ಮೇರೆಗೆ ತೋಟದ ರೈಟರ್ ಸೈಯದ್ ಮನ್ಸೂರ್ ಕಳ್ಳತನ ಮಾಡಲು ಪ್ರೇರಣೆ ನೀಡಿದ ಎಂದು ವಿಚಾರಣೆಯ ವೇಳೆಯಲ್ಲಿ ತಿಳಿಸಿದ್ದಾನೆ. ಆರೋಪಿಗಳನ್ನು ನ್ಯಾಯಾಧೀಶರ ಬಳಿ ಹಾಜರುಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ವೀರಾಜಪೇಟೆ ತಾಲೂಕು ಡಿ.ಸಿ.ಎಫ್ ಮರೀಯ ಕ್ರಿಸ್ತರಾಜ್, ಎ.ಸಿ.ಎಫ್ ರೊಶಿನಿ ಅರ್.ಎಫ್.ಒ ಗೋಪಾಲ್ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಧಿಕಾರಿ ಕಳ್ಳೀರ ದೇವಯ್ಯ, ಅರುಣ ಹಾಗೂ ಆರ್ಆರ್ಟಿ ತಂಡದ ಸಿಬ್ಬಂದಿಗಳು ಭಾಗವಹಿಸಿದ್ದರು.
-ವಾಸು