ಮಡಿಕೇರಿ, ಏ. 28: ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ನಾತಂಗಾಲ ಸಂರಕ್ಷಿತ ಅರಣ್ಯದೊಳಗೆ ಅಕ್ರಮ ಪ್ರವೇಶಿಸಿ ಕಡವೆಯನ್ನು ಬೇಟೆಯಾಡಿ ಕೊಂದು ಮಾಂಸ ಮಾರಾಟಕ್ಕೆ ಮುಂದಾಗಿದ್ದ ಆರು ಮಂದಿ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ನಿನ್ನೆ ಕುಟ್ಟ ಸಮೀಪದ ಇರ್ಪುವಿನಲ್ಲಿ ಸೆರೆ ಸಿಕ್ಕಿರುವ ಆರೋಪಿಗಳಾದ ಎ.ಯು. ಸಮೀರ್, ಕೆ.ಬಿ. ಸಿದ್ಧಿಕ್, ಎಂ.ಹೆಚ್. ಸಮೀರ್, ಕೆ.ಇ. ಇಸ್ಮಾಯಿಲ್, ಕೆ.ಎ. ಯೂಸೂಪ್, ಕೆ.ಎ. ಮಹಮ್ಮದ್ ಈ ಆರು ಮಂದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸು ವದರೊಂದಿಗೆ; ನ್ಯಾಯಾಧೀಶರು 15 ದಿನಗಳ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಅಕ್ರಮ ಬೇಟೆಯೊಂದಿಗೆ ನಾತಂಗಾಲ ಅರಣ್ಯದೊಳಗೆ ಕೃತ್ಯ ಎಸಗಿದ ಜಾಗದ ಮಹಜರು ನಡೆಸಿರುವ ಪೊಲೀಸರು, ಕಡವೆಯನ್ನು ಕೊಂದು ಹಾಕಿದ ಸ್ಥಳದಿಂದ ಖಾಲಿ ಮದ್ದುಗುಂಡು, ರಕ್ತಸಿಕ್ತ ಮಣ್ಣು ಇತ್ಯಾದಿ ಸ್ವಾಧೀನಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.