ಸುಂಟಿಕೊಪ್ಪ, ಏ.29: ಕರ್ನಾಟಕ ರಾಜ್ಯ ಲಾಟರಿ ನಿಷೇಧಿಸಲಾಗಿದೆ. ಆದರೆ ಲಾಟರಿ ದಂದೆ ಮಾತ್ರ ನಿಂತಿಲ್ಲ ಲಾಟರಿ ಪ್ರಿಯರಿಗೆ ಕೇರಳ ರಾಜ್ಯ ಸರಕಾರದ ಲಾಟರಿ ಟಿಕೇಟು ಯಥೇಚ್ಛವಾಗಿ ಲಭಿಸುತ್ತಿದೆ. ಲಾಟರಿಯಿಂದ ಕಳಕೊಂಡವರು ಬಹುಮಾನ ಗಿಟ್ಟಿಸಿಕೊಂಡವರು ಟಿಕೇಟಿನ ಹಿಂದೆ ಬಿದ್ದಿದ್ದಾರೆ.

ಸುಂಟಿಕೊಪ್ಪದಲ್ಲಿ ಕೇರಳ ರಾಜ್ಯದ ಲಾಟರಿ ಟಿಕೇಟು ತಂದು ಮಾರಾಟ ಮಾಡುವವರ ತಂಡವೇ ಇದೆ. ಸುಂಟಿಕೊಪ್ಪ, 7ನೇ ಹೊಸಕೋಟೆ, ಕೊಡಗರಹಳ್ಳಿ, ಕಂಬಿಬಾಣೆ, ಗುಡ್ಡೆಹೊಸೂರು, ಕೆದಕಲ್, ಹರದೂರು ಗ್ರಾಮದವರೆಗೆ ಕೇರಳ ಲಾಟರಿ ಅಕ್ರಮವಾಗಿ ಮಾರಾಟವಾಗುತ್ತಿದೆ. ಯುವಕರು ವೃದ್ಧರು ಕೇರಳ ರಾಜ್ಯದ ಲಾಟರಿ ಟಿಕೇಟನ್ನು ತಲಚೇರಿ ಹಾಗೂ ವೀರಾಜಪೇಟೆಯ ದಂಧೆಕೋರರಿಂದ ತಂದು ಮಾರಾಟ ಮಾಡುತ್ತಿದ್ದಾರೆ.

ಸುಂಟಿಕೊಪ್ಪದಲ್ಲಿ ಕೆಲ ತಿಂಗಳ ಹಿಂದೆ ಆಕ್ರಮವಾಗಿ ಕೇರಳ ಟಿಕೇಟ್‍ನ್ನು ಮಾರಾಟ ಮಾಡಲು ದಾಸ್ತಾನಿಟ್ಟಿದ್ದನ್ನು ಹಾಗೂ ನಗದನ್ನು ಜಿಲ್ಲಾ ಅಪರಾಧ ವಿಭಾಗದ ಪೊಲೀಸರು ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದರು. ಈಗ ಮತ್ತೆ ದಂಧೆ ಗೋಚರಿಸುವಂತಾಗಿದೆ.