ಮಡಿಕೇರಿ, ಏ. 29: ಮಂಗಳಾದೇವಿ ನಗರದ ಶ್ರೀ ಆದಿಪರಾಶಕ್ತಿ ದೇವಿಯ 54ನೇ ವರ್ಷದ ವಾರ್ಷಿಕ ಆರಾಧನೋತ್ಸವ ಮೇ 9 ರಿಂದ 15 ರವರೆಗೆ ವರ್ಷಾವಧಿ ಮಹೋತ್ಸವ ಶ್ರೀ ಆದಿಪರಾಶಕ್ತಿ ಶ್ರೀ ಮುನೇಶ್ವರ ದೇವರ ಸನ್ನಿಧಿಯಲ್ಲಿ ಜರುಗಲಿದೆ.
ಮೇ 9 ರಂದು ರಾತ್ರಿ 10 ಗಂಟೆಯಿಂದ ಮೊದಲ್ಗೊಂಡು ಹೂ ವರ ಕೇಳುವದು, 12 ಗಂಟೆಗೆ ಶ್ರೀ ಮುನೇಶ್ವರ ದೇವರ ಪೂಜೆ, ದೈವಗಣಗಳಿಗೆ ಆಹಾರ ತರ್ಪಣೆ ಸಲ್ಲಿಕೆ ನಂತರ ಅಗ್ನಿ ಚಟ್ಟಿಯಲ್ಲಿ ಅಗ್ನಿ ದೇವರನ್ನು ಪ್ರತಿಷ್ಠಾಪಿಸುವದರ ಮೂಲಕ ಉತ್ಸವಕ್ಕೆ ಚಾಲನೆ ನೀಡಲಾಗುವದು.
ಮೇ 10 ರಂದು ಬೆಳಿಗ್ಗೆ 9 ಗಂಟೆಗೆ ಶ್ರೀ ಗಣಪತಿ ಹೋಮ, ಹವನ, ಶ್ರೀ ದೇವಿಯ ಧ್ವಜಾರೋಹಣ ವಿಶೇಷ ಪೂಜೆ ಮತ್ತು ಅಗ್ನಿಕರಗದ ಪೂಜೆ ನಡೆಯಲಿದೆ. ಮೇ 11 ರಂದು ಶ್ರೀ ದೇವಿಗೆ ಅಲಂಕೃತ ಪೂಜೆ ಮತ್ತು ಅಗ್ನಿಕರಗದ ನಗರ ಪ್ರದಕ್ಷಿಣೆ ನಡೆಯಲಿದೆ. ಮೇ 12 ರಂದು ಶ್ರೀ ದೇವಿಯ ವಿಶೇಷ ಪೂಜೆ ಮತ್ತು ಅಗ್ನಿಕರಗದ ನಗರ ಪ್ರದಕ್ಷಿಣೆ ನಡೆಯಲಿದೆ.
ಮೇ 13 ರಂದು ಸಂಜೆ 7 ಗಂಟೆಗೆ ಮಡಿಕೇರಿ ಪಂಪು ಕೆರೆಯಿಂದ ಮುಖ್ಯ ಬೀದಿಗಾಗಿ ಶ್ರೀ ಆದಿಪರಾಶಕ್ತಿ ದೇವಾಲಯಕ್ಕೆ ಶ್ರೀ ದೇವಿಯ ಕಲಶ ತೀರ್ಥ, ಪಡಕಲಂ, ಹೂವಿನ ಕರಗ, ಅಗ್ನಿಕರಗ ಮತ್ತು ವಿದ್ಯುತ್ ಅಲಂಕೃತ ಮಂಟಪ ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆ ನಡೆಯಲಿದೆ.
ಮೇ 14 ರಂದು ಬೆಳಿಗ್ಗೆ ಶ್ರೀ ದೇವಿಯ ಸನ್ನಿಧಿಯಲ್ಲಿ ಪೊಂಗಲ್ ಹಾಗೂ ತಂಬಿಟ್ಟು, ದೀಪ ಕಲಶಗಳ ಉತ್ಸವ, 12 ಗಂಟೆಗೆ ಮಹಾಪೂಜೆ ನಂತರ ಭಕ್ತಾದಿಗಳಿಗೆ ಪ್ರಸಾದ ಹಾಗೂ ಅನ್ನಸಂರ್ಪಣೆ ನೆರವೇರಲಿದೆ. ಮೇ 15 ರಂದು ಅಪರಾಹ್ನ 3 ಗಂಟೆಗೆ ಓಕುಳಿ, ಸಂಜೆ 7 ಗಂಟೆಗೆ ಶ್ರೀ ದೇವಿಯ ಶಾಂತಿ ಪೂಜೆಯೊಂದಿಗೆ ಶ್ರೀ ದೇವಿಯ ಧ್ವಜಾ ಅವರೋಹಣ ನಡೆಯಲಿದೆ ಎಂದು ದೇವಾಲಯ ಆಡಳಿತ ಮಂಡಳಿ ಪ್ರಕಟಣೆ ತಿಳಿಸಿದೆ.