ಗೋಣಿಕೊಪ್ಪ ವರದಿ, ಏ. 28 : ಯರವ ಸಮಾಜದ ವತಿಯಿಂದ ನಡೆದ ಇಡೆಮಲೆಲಾತ್ಲೇರಂಡ ಆದಿವಾಸಿ ಕ್ರಿಕೆಟ್ ಟೂರ್ನಿಯಲ್ಲಿ ಸ್ಟಾರ್ ಆಫ್ ಕೊಡಗು ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಫೈನಲ್‍ನಲ್ಲಿ ಸೋಲನುಭವಿಸಿದ ಶಶಿ ಫ್ರೆಂಡ್ಸ್ ತಂಡವು ರನ್ನರ್ ಅಪ್‍ಗೆ ತೃಪ್ತಿಪಟ್ಟುಕೊಂಡಿದೆ.ತಿತಿಮತಿ ಪ್ರೌಢಶಾಲಾ ಮೈದಾನದಲ್ಲಿ ನಡೆದ 8 ನೇ ವರ್ಷದ ಕ್ರೀಡಾಕೂಟದ ಫೈನಲ್‍ನಲ್ಲಿ ಸ್ಟಾರ್ ಆಫ್ ಕೊಡಗು ತಂಡವು ಶಶಿ ಫ್ರೆಂಡ್ಸ್ ತಂಡವನ್ನು 11 ರನ್‍ಗಳಿಂದ ಮಣಿಸಿ ಕಪ್ ಗೆದ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಸ್ಟಾರ್ ಆಫ್ ಕೊಡಗು ತಂಡವು ನಿಗಧಿತ 6 ಓವರ್ ಗಳಿಗೆ 56 ರನ್ ಗಳಿಸಿ ಆಲೌಟ್ ಆಯಿತು. ಗುರಿ ಬೆನ್ನತ್ತಿದ ಶಶಿ ತಂಡವು 45 ರನ್‍ಗೆ 8 ವಿಕೆಟ್ ಕಳೆದುಕೊಂಡು ಸೋಲೊಪ್ಪಿ ಕೊಂಡಿತು. ಟೂರ್ನಿ ವಿಶೇಷ ಬಹುಮಾನಗಳು ಪಂದ್ಯ ಪುರುಷ ಪ್ರಶಸ್ತಿಯನ್ನು ಸ್ಟಾರ್ ಆಫ್ ಕೊಡಗು ತಂಡದ ಆಟಗಾರ ಮಂಜು, ಸರಣಿ ಶ್ರೇಷ್ಠ ಅಟಗಾರನಾಗಿ ಶಶಿ ಫ್ರೆಂಡ್ಸ್ ತಂಡದ ಗಣೇಶ್, ಉತ್ತಮ ಕ್ಯಾಚ್ ಆಟಗಾರ ನಾಗಿ ಕುಟ್ಟ ಸಿವೈಸಿ ತಂಡದ ಪ್ರಕಾಶ್, ಉತ್ತಮ ಬೌಲರ್ ಆಟಗಾರನಾಗಿ ಸ್ಟಾರ್ ಅಫ್ ಕೊಡಗು ತಂಡದ ಆಟಗಾರ ಜೀವನ್, ಉತ್ತಮ ಕೀಪರ್ ಆಟಗಾರನಾಗಿ ಶಶಿ ಫ್ರೆಂಡ್ಸ್ ತಂಡದ ಮಲ್ಲಪ್ಪ, ಉತ್ತಮ ಆಲ್‍ರೌಂಡರ್ ಆಟಗಾರನಾಗಿ ಸ್ಟಾರ್ ಆಫ್ ಕೊಡಗು ತಂಡದ ಮಧು, ಶಿಸ್ತಿನ ತಂಡವಾಗಿ ಕಾರೆಕಂಡಿ ತಂಡ (ಬಿ), ಉತ್ತಮ ತಂಡ ಬಹುಮಾನವನ್ನು ಕಾರೆಕಂಡಿ (ಎ) ತಂಡ ಪಡೆದುಕೊಂಡಿತು. ಮಕ್ಕಳಿಗೆ ನಡೆದ ದುಡಿ ಕುಣಿತ ಸ್ಪರ್ಧೆಯಲ್ಲಿ ಬಾಲಕಿಯರಲ್ಲಿ ಧನು ಪ್ರಥಮ, ಪ್ರತ್ವಿ ದ್ವಿತೀಯ, ಬಾಲಕರಲ್ಲಿ ಅಭಿನಂದನ್ ಪ್ರಥಮ, ವನು ದ್ವಿತೀಯ ಸ್ಥಾನ ಪಡೆದುಕೊಂಡರು. ಮಹಿಳೆಯರ ಹಗ್ಗ ಜಗ್ಗಾಟದಲ್ಲಿ ಲೆವೆಂತ್‍ಮೈಲ್ ಬಿ ಪ್ರಥಮ, ಲೆವೆಂತ್‍ಮೈಲ್ ಎ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಸಮಾರೋಪ ಸಮಾರಂಭದಲ್ಲಿ ಯರವ ಸಮಾಜ ಅಧ್ಯಕ್ಷ ಶಾಂತ ಕುಮಾರ್

(ಮೊದಲ ಪುಟದಿಂದ) ಮಾತನಾಡಿ, ಸರ್ಕಾರ ನಮ್ಮ ಕ್ರೀಡಾಕೂಟಕ್ಕೆ ಅನುದಾನ ನೀರುವ ಮೂಲಕ ಪ್ರೋತ್ಸಾಹಿಸಬೇಕಿದೆ ಎಂದರು. ಶಾಸಕ ಕೆ. ಜಿ. ಬೋಪಯ್ಯ ಮಾತನಾಡಿ, ಮೂಲ ಸಂಸ್ಕøತಿ ಬಿಟ್ಟು ಅತಿಯಾಸೆಗೆ ಮತಾಂತರದ ಜನಾಂಗದವರು ಮಕ್ಕಳ ಶಿಕ್ಷಣ ವಂಚಿತರಾಗದಂತೆ ಜವಬ್ದಾರಿ ವಹಿಸಬೇಕು. ಪದವಿ ಶಿಕ್ಷಣ ನೀಡುವಷ್ಟು ಛಲ ಪೋಷಕರಲ್ಲಿರಬೇಕು ಎಂದರು.

ತಾ. ಪಂ ಸದಸ್ಯ ಪ್ರಕಾಶ್ ಮಾತನಾಡಿ, ಅಧಿಕಾರಿಗಳು ಆದಿವಾಸಿಗಳತ್ತ ಬಂದು ಅಭಿವೃದ್ಧಿಯ ಅಂಕಿ ಅಂಶ ಪಡೆದುಕೊಂಡು ಹೋದ ನಂತರ ಯೋಜನೆ ಅನುಷ್ಠಾನಗೊಳಿಸುತ್ತಿಲ್ಲ. ಇಲಾಖೆ ಕಚೇರಿಗಳಿಗೆ ತೆರಳಿದರೆ ನಮಗೆ ಅಧಿಕಾರಿಗಳಿಂದ ಸಹಕಾರ ದೊರೆಯುತ್ತಿಲ್ಲ. ಇದರಿಂದಾಗಿ ಆದಿವಾಸಿಗಳ ಅಭಿವೃದ್ಧಿಗೆ ಬರುವ ಯೋಜನೆಗಳಿಂದ ವಂಚಿತರಾಗುತ್ತಿದ್ದೇವೆ. ಇದರ ವಿರುದ್ಧ ಹೋರಾಟ ನಡೆಸಲು ಕ್ರೀಡೆಗೆ ಒಗ್ಗಟ್ಟಿನ ಪ್ರೋತ್ಸಾಹ ನೀಡುವ ಜನಾಂಗದವರು ಸವಲತ್ತು ಪಡೆಯಲು ಕೂಡ ಹೋರಾಟಕ್ಕೆ ಇಳಿಯಬೇಕು ಎಂದರು.

ಈ ಸಂದರ್ಭ ಆರ್‍ಎಂಸಿ ನಿರ್ದೇಶಕ ಕಿಲನ್ ಗಣಪತಿ, ಟ್ರೋಫಿ ದಾನಿ ಉಂಬಾಯಿ, ಉರಗ ಪ್ರೇಮಿ ಶರತ್‍ಕಾಂತ್, ಕಾರ್ಯದರ್ಶಿ ಸಂಜೀವ ಹಾಗೂ ಸಂಚಾಲಕ ಸಿದ್ದಪ್ಪ ಬಹುಮಾನ ವಿತರಿಸಿದರು. - ಸುದ್ದಿಪುತ್ರ