ಮಡಿಕೇರಿ, ಏ. 28: ಕೊಡಗಿನ ಸೇನಾನಿಗಳು ಸೇನೆಯ ವಿವಿಧ ವಿಭಾಗಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಜಿಲ್ಲೆಗೆ ಕೀರ್ತಿಯನ್ನು ತಂದಿದ್ದಾರೆ ಮತ್ತು ಗೌರವ ಮೂಡಿಸಿದ್ದಾರೆ. ಈ ಪರಂಪರೆ ಮುಂದುವರಿಯಬೇಕಾದರೆ ಇಂದಿನ ಯುವ ಸಮೂಹ ಹೆಚ್ಚು, ಹೆಚ್ಚು ಸಂಖ್ಯೆಯಲ್ಲಿ ಸೇನೆಗೆ ಸೇರ್ಪಡೆಗೊಳ್ಳ ಬೇಕೆಂದು ಜಿಲ್ಲೆಯ ನಿವೃತ್ತ ಸೇನಾಧಿಕಾರಿಗಳು ಕರೆ ನೀಡಿದ್ದಾರೆ.

ಕೊಡವ ಮಕ್ಕಡ ಕೂಟದ 25ನೇ ಪ್ರಕಟಣೆಯಾಗಿ ಆಂಗ್ಲ ಭಾಷೆಯಲ್ಲಿ ಹೊರ ತಂದಿರುವ ‘ದಿ ಮೇಜರ್ ಹೂ ಕೆಪ್ಟ್ ಹಿಸ್ ಕೂಲ್’ ಕೃತಿಯನ್ನು ನಗರದ ಪತ್ರಿಕಾಭವನ ಸಭಾಂಗಣದಲ್ಲಿ ಲೋಕಾರ್ಪಣೆಗೊಳಿಸಿ ಮಾತನಾಡಿದ ನಿವೃತ್ತ ಏರ್‍ಮಾರ್ಷಲ್ ಕೊಡಂದೇರ ಸಿ. ಕಾರ್ಯಪ್ಪ ಅವರು, ಲೆಫ್ಟಿನೆಂಟ್ ಕರ್ನಲ್ ಪುಟ್ಟಿಚಂಡ ಎಸ್.ಗಣಪತಿ ಅವರ ಪ್ರಾಮಾಣಿಕ ಸೇವೆ ಮತ್ತು ಶಿಸ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಇವರ ಸೇನಾ ಸಾಧನೆಯ ಪುಸ್ತಕವನ್ನು ಹೊರತಂದಿರುವದು ಸ್ವಾಗತಾರ್ಹ. ಗಣಪತಿ ಅವರ ಐಪಿಕೆಎಫ್ ನಲ್ಲಿನ ಸಾಹಸಗಾತೆಯ ಕುರಿತು ಮಾಹಿತಿ ಸಂಗ್ರಹಿಸಿದಾಗ ಅವರು ಮಹಾವೀರಚಕ್ರ ಪ್ರಶಸ್ತಿಯ ಗೌರವಕ್ಕೆ ಅತ್ಯಂತ ಅರ್ಹರು ಎನ್ನುವದು ತಿಳಿದು ಬಂತು. ಲೇಖಕ ಮೂಕೊಂಡ ನಿತಿನ್ ಕುಶಾಲಪ್ಪ ಗಣಪತಿ ಅವರ ಜೀವನ ಮತ್ತು ವ್ಯಕ್ತಿತ್ವಕ್ಕೆ ತಮ್ಮ ಪುಸ್ತಕದಲ್ಲಿ ನ್ಯಾಯ ಒದಗಿಸಿದ್ದಾರೆ ಎನ್ನುವ ವಿಶ್ವಾಸವಿದೆ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಲೆಫ್ಟಿನೆಂಟ್ ಜನರಲ್ ಡಾ. ಬಿಎನ್‍ಬಿಎಂ ಪ್ರಸಾದ್, ಸೇನೆಯಲ್ಲಿ ಕೊಡಗಿನ ಸೇನಾಧಿಕಾರಿಗಳಿಗೆ ವಿಶೇಷ ಗೌರವವಿದ್ದು, ಕೊಡವರ ಸೇವೆಯ ಕೊಡುಗೆ ಮತ್ತಷ್ಟು ಹೆಚ್ಚಾಗಬೇಕು. ಇದಕ್ಕೆ ಹೆಚ್ಚು, ಹೆಚ್ಚು ಸಂಖ್ಯೆಯಲ್ಲಿ ಯುವ ಸಮೂಹ ಸೇನೆಗೆ ಸೇರ್ಪಡೆಗೊಳ್ಳಬೇಕೆಂದು ಕರೆ ನೀಡಿದರು.

ಧೈರ್ಯ, ಶಿಸ್ತು ಮತ್ತು ನಾಯಕತ್ವದ ಗುಣಗಳಿಂದಲೇ ಕೊಡವರು ಇಂದು ಸೇನಾ ಕ್ಷೇತ್ರದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಲು ಸಾಧ್ಯವಾಗಿದೆ ಮತ್ತು ಇದೇ ಕಾರಣಕ್ಕೆ ವಿಶೇಷವಾದ ಗೌರವ ಸಿಗುತ್ತಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಕೊಡವರು ಕಾವೇರಿ ತಾಯಿ ಹಾಗೂ ಪ್ರಕೃತಿಯನ್ನು ಹೆಚ್ಚು ಆರಾಧಿಸುತ್ತಾರೆ, ಇದೇ ಮಾದರಿಯಲ್ಲಿ ಕೊಡಗಿನ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕಾಗಿದೆ. ಎಲ್ಲದಕ್ಕಿಂತ ಹೆಚ್ಚಾಗಿ ರಾಷ್ಟ್ರ ಮೊದಲು ಎನ್ನುವ ಅಭಿಮಾನ ಮೂಡಿಸಿ ಕೊಳ್ಳಬೇಕಾಗಿದೆ ಎಂದು ಪ್ರಸಾದ್ ಹೇಳಿದರು.

ಕೊಡಗು ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ಮೇಜರ್ ಜನರಲ್ ಬಾಚಮಂಡ ಎ.ಕಾರ್ಯಪ್ಪ ಅವರು ಮಾತನಾಡಿ, ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ಮತ್ತು ಸೇರ್ಪಡೆ ಗೊಳ್ಳಲು ಆಸಕ್ತಿ ಹೊಂದಿರುವವರು ಸೇನೆಯ ಉನ್ನತ ಹುದ್ದೆಗಳನ್ನು ಅಲಂಕರಿಸುವ ಗುರಿ ಹೊಂದಬೇಕೆಂದು ಸಲಹೆ ನೀಡಿದರು.

ದೇಶಕ್ಕಾಗಿಯೇ ತಮ್ಮನ್ನು ಮುಡಿಪಾಗಿಟ್ಟಿರುವ ಸೇನಾನಿಗಳು ನಿವೃತ್ತಿಯಾಗಿ ಬಂದ ನಂತರ ಸಮಾಜದಲ್ಲಿ ಅಗತ್ಯ ಗೌರವ ದೊರೆಯುತ್ತಿಲ್ಲ. ಸರ್ಕಾರಿ ಕಚೇರಿಗಳಲ್ಲಿ ನಿವೃತ್ತ ಸೈನಿಕರನ್ನು ನಿರ್ಲಕ್ಷಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇಂದಿನ ರಾಜಕಾರಣಿಗಳು ದೇಶದ ಗಡಿ ಕಾಯುವ ಸೈನಿಕರ ಬಗ್ಗೆ ಅಗೌರವದಿಂದ ಮಾತನಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಇತ್ತೀಚೆಗೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆಯನ್ನು ಖಂಡಿಸುವದಾಗಿ ಹೇಳಿದರು.

ನಿವೃತ್ತ ಸೈನಿಕರಿಗೆ ಜಮೀನು ಸೇರಿದಂತೆ ಯಾವದೇ ಸೌಲಭ್ಯಗಳನ್ನು ನೀಡದೆ ರಾಜ್ಯ ಸರ್ಕಾರ ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ ಅವರು, ಪ್ರಧಾನಿ ನರೇಂದ್ರಮೋದಿ ಅವರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.

ಫೀಲ್ಡ್ ಮಾರ್ಷಲ್ ಕಾರ್ಯಪ್ಪ-ಜನರಲ್ ತಿಮ್ಮಯ್ಯ ಫೋರಂನ ಅಧ್ಯಕ್ಷÀ ಕರ್ನಲ್ ಕಂಡ್ರತಂಡ ಸಿ. ಸುಬ್ಬಯ್ಯ ಮಾತನಾಡಿ, ಸೇನಾ ಸಾಧಕರ ಪುಸ್ತಕಗಳು ಹೆಚ್ಚು, ಹೆಚ್ಚು ಪ್ರಕಟಗೊಳ್ಳುವ ಮೂಲಕ ಯುವಜನತೆಗೆ ಪ್ರೇರಣೆಯನ್ನು ನೀಡಬೇಕು ಎಂದು ಸಲಹೆ ನೀಡಿದರು.

ಪುಸ್ತಕದ ಕೇಂದ್ರ ಬಿಂದು ಮಹಾವೀರ ಚಕ್ರ ಪುರಸ್ಕøತ ಲೆಫ್ಟಿನೆಂಟ್ ಕರ್ನಲ್ ಪುಟ್ಟಿಚಂಡ ಎಸ್.ಗಣಪತಿ ಅವರು ಮಾತನಾಡಿ, ಸೇನೆಯ ಉನ್ನತ ಹುದ್ದೆಗಳನ್ನು ಅಲಂಕರಿಸಿದ ಸೇನಾಧಿಕಾರಿಗಳನ್ನು ನೀಡಿದ ಕೊಡಗಿನಲ್ಲಿ ಸೈನಿಕ ಶಾಲೆಯೂ ಇದ್ದು, ಸ್ಥಳೀಯರು ಇದರ ಲಾಭ ಪಡೆದುಕೊಳ್ಳುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ಇಡೀ ದೇಶದಲ್ಲಿ 28 ಸೈನಿಕ ಶಾಲೆಗಳಿದ್ದು, ಅವುಗಳಲ್ಲಿ ಕೊಡಗಿಗೂ ಒಂದನ್ನು ನೀಡಲಾಗಿದೆ. ಈ ಶಾಲೆಯಲ್ಲಿ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಸೇನಾಕ್ಷೇತ್ರದ ಸೇವೆ ಹೆಚ್ಚು ಸುಲಭವಾಗಲಿದೆ ಮತ್ತು ಉನ್ನತ ಹುದ್ದೆಗೇರಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.

ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ದೇಶವನ್ನು ಕಾಯುವ ಸೈನಿಕರ ಹೆಸರಿನಲ್ಲಿ ಇಂದು ರಾಜಕಾರಣ ಮಾಡುತ್ತಿರುವದು ವಿಷಾದನೀಯವೆಂದರು.

‘ದಿ ಮೇಜರ್ ಹೂ ಕೆಪ್ಟ್ ಹಿಸ್ ಕೂಲ್’ ಪುಸ್ತಕ ರಚನೆಕಾರ ಮೂಕೊಂಡ ನಿತಿನ್ ಕುಶಾಲಪ್ಪ ಮಾತನಾಡಿ, ಇದು ತಾವು ರಚಿಸಿರುವ ಐದನೇ ಪುಸ್ತಕವಾಗಿದ್ದು, ಲೆಫ್ಟಿನೆಂಟ್ ಕರ್ನಲ್ ಪುಟ್ಟಿಚಂಡ ಎಸ್.ಗಣಪತಿ ಅವರ ಸೇನಾ ಸಾಧನೆ ಯುವ ಸಮೂಹಕ್ಕೆ ಸ್ಫೂರ್ತಿ ತುಂಬಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಹಾವೀರ ಚಕ್ರ ಪುರಸ್ಕøತ ಲೆಫ್ಟಿನೆಂಟ್ ಕರ್ನಲ್‍ಪುಟ್ಟಿಚಂಡ ಎಸ್.ಗಣಪತಿ ಹಾಗೂ ಲೇಖಕÀ ಮೂಕೊಂಡ ನಿತಿನ್ ಕುಶಾಲಪ್ಪ ಅವರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪುಸ್ತಕ ಸಮಿತಿ ಸಂಚಾಲಕÀ ಬಿ.ಸಿ. ದಿನೇಶ್ ಉಪಸ್ಥಿತರಿದ್ದರು.

ಬಾಳೆಯಡ ದಿವ್ಯಾ ಮಾದಪ್ಪ ನಿರೂಪಿಸಿ, ಚೊಟ್ಟಂಡ ನಿಶಿತಾ ದೇಚಮ್ಮ ಪ್ರಾರ್ಥಿಸಿದರು. ಪತ್ರಕರ್ತ ಕಿಶೋರ್ ರೈ ವಂದಿಸಿದರು.