ವಿಶೇಷ ವರದಿ: ಕೆ.ಕೆ.ಎಸ್. ವೀರಾಜಪೇಟೆ ವೀರಾಜಪೇಟೆ, ಏ. 29: ಭೂಗರ್ಭದಲ್ಲಿ ಅದೆಷ್ಟೋ ದೇವಾಲಯಗಳು ಹುದುಗಿಹೊಗಿದ್ದು, ಕಾಲಚಕ್ರ ಉರುಳಿದಂತೆ ನವಯುಗದಲ್ಲಿ ದೇವಾಲಯದ ಅವಶೇಷಗಳು ನಾಗರಿಕ ಸಮಾಜಕ್ಕೆ ಗೋಚರಿಸುತ್ತಿರುವದು ವಾಸ್ತವಿಕ ಸಂಗತಿಯಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ ಕಂಡಿಮಕ್ಕಿ ದೇವರ ಬನದಲ್ಲಿ ದೇವಾಲಯದ ಕುರುಹು ಕಂಡುಬಂದಿರುವದು ಕೌತುಕದ ವಿಷಯವಾಗಿದೆ.ವೀರಾಜಪೇಟೆಯ ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಾಳುಗೋಡು ಕಿರುಮಕ್ಕಿ ಎಂಬಲ್ಲಿ ದೇವರ ಕಾಡುವಿನ ಮಧ್ಯ ಭಾಗದಲ್ಲಿ ಪುರಾತನವಾದ ಸೂರ್ಯ ದೇವನಿಗೆ ನೇರವಾಗಿ ಬೃಹತ್ ಗಾತ್ರದ ಶಿವ ಲಿಂಗ ಪತ್ತೆಯಾಗಿದೆ. ಬಾಳುಗೋಡು ಕಿರುಮಕ್ಕಿ ಸರ್ವೆ ಸಂಖ್ಯೆ 136,137, ಮತ್ತು 138 ಗಳು ಹೊಂದಿಕೊಂಡಿರುವಂತೆ ಕುಪ್ಪಂಡ ಮತ್ತು ಕರ್ತಮಾಡ ಕುಟುಂಬಕ್ಕೆ ಸೇರಿದ ತೋಟಗಳ ಸನಿಹದಲ್ಲಿ ದೇವರಕಾಡು ಇದೆ. ಪತ್ತೆಯಾದ ಶಿವಲಿಂಗವು ನೆಲದಿಂದ ಮೂರು ಅಡಿಯಿದ್ದು ಲಿಂಗದ ಮೇಲೆ ಸೂರ್ಯನಿಗೆ ದೃಷ್ಟಿ ನೀಡುವಂತೆ ತ್ರಿಕೋನ ಆಕೃತಿಯಲ್ಲಿ ಗೆರೆಯನ್ನು ರಚಿಸಲಾಗಿದೆ. ಲಿಂಗದ ಯಾವದೇ ಭಾಗಗಳು ಹಾನಿಗೊಳಗಾಗದೆ ಸುಸ್ಥಿತಿಯಲ್ಲಿದೆ. ಲಿಂಗದ ಸುತ್ತಳತೆಯಲ್ಲಿ ದೇವಾಲಯ ಕಟ್ಟಡದ ಕಲ್ಲುಗಳು ಅಲ್ಲಲ್ಲಿ ಕಾಣಸಿಗುತ್ತದೆ. ದೇವಾಲಯವು ಇದ್ದ ಸ್ಥಳವು ಸಂಪೂರ್ಣವಾಗಿ ಕಾಡು ಬೆಳೆದು ಗಿಡಗಂಟಿಗಳಿಂದ ಸುತ್ತುವರೆದಿದೆ. ಲಿಂಗದ ಸನೀಹದಲ್ಲೇ ಬೃಹತ್ ಗಾತ್ರದ ಹುತ್ತ ಬೆಳೆದಿದ್ದು ಹುತ್ತದಲ್ಲಿ ನೆಲೆನಿಂತ ಸರ್ಪವು ಲಿಂಗವನ್ನು ಕಾವಲು ಕಾಯುತ್ತಿದೆ. ಸರ್ಪವು ಹರಿದಾಡುತ್ತಿರುವ ಮಾರ್ಗವೂ ಕಂಡುಬಂದಿದೆ.
ಇತ್ತೀಚೆಗೆ ಬಾಳುಗೋಡು ಸಮೀಪದ ಇತಿಹಾಸ ಪ್ರಸಿದ್ಧವಾದ ಕಂಡಿಮಕ್ಕಿ ಮೂರ್ತಿ ದೇವರ ತೆರೆ ಮಹೋತ್ಸವದ ಸಂದÀರ್ಭದಲ್ಲಿ ದೇವತಾ ಪೂಜೆಗೆ ಕಾಡು ದೂಪ ತರಲೆಂದು ಗ್ರಾಮದ ಯುವಕರಾದ ಜಗನ್ ಪಿ.ಕೆ. ಮತ್ತು ಪಾಡೆಯಂಡ ಸುರೇಶ್ ಎಂಬವರು ದೇವರ ಕಾಡಿಗೆ ತೆರಳಿದ್ದರು. ದೇವರಕಾಡುವಿನಲ್ಲಿ ದೂಪದ ಮರ ಅರಸಿಕೊಂಡು ಹೋಗುವ ಸಂದÀರ್ಭದಲ್ಲಿ ದಣಿವು ನೀಗಿಸಲು ಸ್ಥಳದಲ್ಲಿ ವಿಶ್ರಾಂತಿ ಪಡೆಯಲು ಕುಳಿತಿದ್ದಾರೆ. ಇವರು ಕುಳಿತಿರುವದು ಕಲ್ಲಿನ ಮೇಲೆ ಎಂದು ತಿಳಿದು ಸುಮ್ಮನಾಗಿದ್ದಾರೆ. ಕೆಲವು ನಿಮಿಷಗಳ ನಂತರ ಶರೀರಕ್ಕೆ ರೂಮಾಂಚನಗೊಳ್ಳುವಂತಹ ಅನುಭವವಾಗಿದೆ.
(ಮೊದಲ ಪುಟದಿಂದ) ಕಲ್ಲಿನ ಮೇಲೆ ಇದ್ದ ಕಾಡು ಎಲೆಗಳು ಮತ್ತು ಕಸ ಕಡ್ಡಿಗಳನ್ನು ಸರಿಸಿ ಮಣ್ಣು ಅಗೆದಾಗ ಮೂರು ಅಡಿಯ ಲಿಂಗವು ಗೋಚರಿಸಿದೆ ಎಂದು ಸ್ಥಳಕ್ಕೆ ತೆರಳಿದ ಜಗನ್ ಅವರು ಪತ್ರಿಕೆಯೊಂದಿಗೆ ಅನುಭವ ಹಂಚಿಕೊಂಡರು.
ಲಿಂಗ ದರ್ಶನವಾದ ಅನುಭವವನ್ನು ತಮ್ಮ ಮನೆಯವರಿಗೆ ಹಾಗೂ ಗ್ರಾಮಸ್ಥರಿಗೆ ಯುವಕರು ತಿಳಿಸಿದ ನಂತರ ಇದೀಗ ಕೌತುಕದ ವಿಷಯವನ್ನು ತಿಳಿದುಕೊಳ್ಳಲು ಪುರಾತನವಾದ ಶಿವಲಿಂಗ ದರ್ಶನ ಮಾಡಲು ತಂಡೋಪತಂಡವಾಗಿ ಆಗಮಿಸಿ ನಮ್ಮನ್ನು ಹರಸುವಂತೆ ಭಕ್ತಿಯಿಂದ ನಮಿಸಿ ತೆರಳುತ್ತಿದ್ದಾರೆ.
ಶಕ್ತಿವಂತ ದೇವರು: ಭೂಗರ್ಭದಿಂದ ಮೇಲೆ ಎದ್ದು ಬಂದ ಶಿವಲಿಂಗದ ವಿಷಯಕ್ಕೆ ಕಾಕತಾಳಿಯವೆಂಬಂತೆ ಕಂಡಿಮಕ್ಕಿ ಮೂರ್ತಿ ದೇವರ ದÀರ್ಶನಿಕನಾದ ನಾನು ಪ್ರತಿದಿನ ಮನೆಯಲ್ಲಿ ಶಿವನನ್ನು ಪೂಜೆ ಮತ್ತು ಆರಾದನೆ ಮಾಡುತ್ತಾ ಬರುತ್ತಿದ್ದೇನೆ. ವಾರ್ಷಿಕ ತೆರೆ ಮಹೋತ್ಸವ ಆಚರಿಸುವ ಕೆಲವು ದಿನಗಳ ಹಿಂದೆ ಎಂದಿನಂತೆ ರಾತ್ರಿ ನಿದ್ದೆಗೆ ಜಾರಿದ್ದೆ. ಅಂದು ಕನಸಿನಲ್ಲಿ ಕಾಡು ಬನಗಳಿಂದ ಆವರಿಸಿದ ದೇವಾಲಯ, ಅಲ್ಲಲಿ ಬಿದ್ದಿರುವ ದೇವಾಲಯದ ಅವಶೇಷಗಳು; ಪೂರ್ಣವಾದ ತೆಜಸ್ಸುವಿನಿಂದ ಕಂಗೊಳಿಸುತ್ತಿರುವ ಶಿವಲಿಂಗ; ಶಿವಲಿಂಗವನ್ನು ಎಂದಿಗೂ ಕಾಯುತ್ತಿರುವ ನಾಗ ಸರ್ಪ, ಸ್ಥಳದ ಅನತಿ ದೂರದಲ್ಲಿ ಸುಂದರವಾದ ಕೆರೆ ಕಂಡಿತ್ತು. ಅಣ್ಣನಾದ ಜಗನ್ ವಿಷಯ ತಿಳಿಸಿದರು. ನಂತರದಲ್ಲಿ ಗ್ರಾಮದವರು ಮತ್ತು ಇತರರೊಂದಿಗೆ ಸ್ಥಳಕ್ಕೆ ತರಳಿ ಲಿಂಗವನ್ನು ಭಯ ಭಕ್ತಿಯಿಂದ ಸ್ಪರ್ಶಮಾಡಿದೆ. ನಾನು ಧರಿಸಿದ್ದ ಕೈಬಳೆಯು ವೃತ್ತಾಕಾರದಲ್ಲಿ ತಿರುಗಿ ನಿಂತಿತ್ತು. ಇಲ್ಲಿರುವದು ಶಕ್ತಿವಂತ ಶ್ರಿ ದೇವರು ಎಂದು ಭಾವಿಸಿ ಗ್ರಾಮಸ್ಥರಿಗೆ ವಿಷಯ ತಿಳಿಸಿದೆ ಎಂದು ವಿನೋದ್ ಪತ್ರಿಕೆಯೊಂದಿಗೆ ತಮ್ಮ ಅನುಭವವನ್ನು ತಿಳಿಸುತ್ತಾರೆ.
ಗ್ರಾಮಸ್ಥರಾದ ಬಿ.ವಿ. ಹೇಮಂತ್, ಬಿ.ಜಿ. ನಾಗೇಶ್ ಮತ್ತು ಸ್ಥಳೀಯರಾದ ನಂಬುಡುಮಾಡ ಪವನ್ ಅವರು ಹೇಳುವಂತೆ ಲಿಂಗ ಗೋಚರಿಸಿದ ಸ್ಥಳವು ದಶಕಗಳ ಹಿಂದಿನಿಂದ ದೇವರ ಕಾಡು, ಮಹದೇವರ ಬನ,ಮತ್ತು ಈಶ್ವರಕಾಡು ಎಂದು ಪ್ರತೀತಿಯಲ್ಲಿತ್ತು. ದೇವರ ಕಾಡು ಎಷ್ಟು ವಿಸ್ತೀರ್ಣವಿದೆ ಎಂದು ಯಾರಿಗೂ ತಿಳಿದಿರುವದಿಲ್ಲ. ಕೊಡಗಿನ ಯಾವದೇ ಭಾಗದಲ್ಲಿ ಅತಿ ಎತ್ತರವಾದ ಶಿವಲಿಂಗ ಕಂಡು ಬಂದಿರುವದಿಲ್ಲ. ದೇವಾಲಯವು ಸುಮಾರು 500 ವರ್ಷಗಳ ಹಿಂದೆ ಸ್ಥಳದಲ್ಲಿ ಇದ್ದಿರಬಹುದು. ಭೂಗರ್ಭ ಇಲಾಖೆ ಮತ್ತು ಪುರಾತತ್ವ ಇಲಾಖೆಯು ಈ ಸ್ಥಳವನ್ನು ಪರಿಶೋಧನೆ ಮಾಡಿ ಇಲ್ಲಿನ ರಹಸ್ಯ ತಿಳಿಯಬೇಕು, ಗ್ರಾಮಸ್ಥರ ನೆರವು ಪಡೆದು ದೇಗುಲವನ್ನು ಪುನರ್ ನಿರ್ಮಾಣ ಮಾಡಬೇಕೆಂದು ನಮ್ಮ ಕಲ್ಪನೆಯಾಗಿದೆ ಎಂದು ಹೇಳಿದರು.