ಗೋಣಿಕೊಪ್ಪ ವರದಿ, ಏ. 29 : ಅಮ್ಮತ್ತಿ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಂಬೇಡ್ಕರ್ ಸ್ಪೋಟ್ರ್ಸ್, ರಿಕ್ರಿಯೇಷನ್ ಕ್ಲಬ್ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಸೆವೆನ್ ಸೈಡ್ ಮುಕ್ತ ಕಾಲ್ಚೆಂಡು ಪಂದ್ಯಾವಳಿಯಲ್ಲಿ ಸಿವೈಸಿ ಒಂಟಿಯಂಗಡಿ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಅಮ್ಮತ್ತಿ ಚೌಡೇಶ್ವರಿ ರನ್ನರ್ ಅಪ್ ಸ್ಥಾನ ಅಲಂಕರಿಸಿತು.

ಫೈನಲ್ ಮುಖಾಮುಖಿಯಲ್ಲಿ ರೋಚಕ ಆಟ ಪ್ರದರ್ಶನವಾಯಿತು. ಒಂಟಿಯಂಗಡಿ ತಂಡವು ಚೌಡೇಶ್ವರಿ ತಂಡವನ್ನು 9-8 ಗೋಲುಗಳಿಂದ ಗೆಲವು ಪಡೆಯಿತು. ನಿಗಧಿತ ಸಮಯದಲ್ಲಿ ಉಭಯ ತಂಡಗಳು 3-3 ಗೋಲುಗಳ ಮೂಲಕ ಸಮಬಲ ಸಾಧಿಸಿತು. ನಂತರ ನಡೆದ ಟೈಬ್ರೇಕರ್‍ನಲ್ಲಿ ಮತ್ತೆ 5-5 ಗೋಲುಗಳ ದಾಖಲಿಸಿದವು. ನಂತರ ಪೆನಾಲ್ಟಿ ಸ್ಟ್ರೋಕ್‍ನಲ್ಲಿ ಒಂಟಿಯಂಗಡಿ ತಂಡ 1 ಗೋಲು ಬಾರಿಸಿದರೆ, ಚೌಡೇಶ್ವರಿ ತಂಡಕ್ಕೆ ಗೋಲು ದಾಖಲಿಸಲು ಅವಕಾಶವಾಗಲಿಲ್ಲ. ಬಾಲಕಿಯರಿಗೆ ನಡೆದ ಫುಟ್ಭಾಲ್ ಪಂದ್ಯಾವಳಿಯಲ್ಲಿ ಲಯನ್ಸ್ ತಂಡವು ಮೂರ್ನಾಡು ತಂಡವನ್ನು 3-2 ಗೋಲುಗಳಿಂದ ಮಣಿಸಿ ಸಾಧನೆ ಮಾಡಿತು. -ಸುದ್ದಿಪುತ್ರ