ಮಡಿಕೇರಿ, ಏ. 26: ಹ್ಯುಮಾನಿಟಿ ಫಸ್ಟ್ ಇಂಡಿಯಾ ಸಂಸ್ಥೆ ವತಿಯಿಂದ ನಗರದ ಹೊರ ವಲಯದ ಕರ್ಣಂಗೇರಿ ಗ್ರಾಮದಲ್ಲಿ ಕೊರೆಯಲಾದ ಕುಡಿಯುವ ನೀರಿನ ಕೊಳವೆ ಬಾವಿ ಹಾಗೂ ನೀರಿನ ಟ್ಯಾಂಕ್ ಅನ್ನು ಸಾರ್ವಜನಿಕ ಬಳಕೆಗೆ ಲೋಕಾರ್ಪಣೆ ಮಾಡಲಾಯಿತು.
ಈ ಸಂಬಂಧ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಹ್ಯುಮಾನಿಟಿ ಫಸ್ಟ್ ಇಂಡಿಯಾ ಸಂಸ್ಥೆಯ ದಕ್ಷಿಣ ಕರ್ನಾಟಕ ವಲಯದ ಉಸ್ತುವಾರಿ ಜಿ.ಎಂ. ಮಹಮ್ಮದ್ ಶರೀಫ್ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಹ್ಯೂಮಾನಿಟಿ ಫಸ್ಟ್ ಇಂಡಿಯಾ ಸಂಸ್ಥೆಯು ಜಾಗತಿಕ ಅಹ್ಮದಿಯಾ ಮುಸ್ಲಿಮ್ ಜಮಾಅತ್ನ ಸಹೋದರಿ ಸಂಸ್ಥೆಯಾಗಿದ್ದು, ಭಾರತದಲ್ಲೂ ಇದು ನೋಂದಾಯಿತ ಸಂಸ್ಥೆಯಾಗಿದೆ. ಈ ಸಂಸ್ಥೆಯ ಮುಖ್ಯ ಉದ್ದೇಶ ಪ್ರಕೃತಿ ವಿಕೋಪದ ಸಂತ್ರಸ್ತರಿಗೆ ಸಹಾಯ ಹಾಗೂ ಪರಿಹಾರವನ್ನು ಯಾವದೇ ಜಾತಿ, ಧರ್ಮ, ಬಣ್ಣ ಹಾಗೂ ರಾಜಕೀಯದ ಭೇದಭಾವವಿಲ್ಲದೆ ಒದಗಿಸುವದಾಗಿದೆ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವದು, ಆರೋಗ್ಯ ಹಾಗೂ ಪ್ರಾಣ ರಕ್ಷಣೆ, ಕುಡಿಯುವ ನೀರಿನ ವ್ಯವಸ್ಥೆ, ಬಡತನ ನಿರ್ಮೂಲನೆ ಇವುಗಳು ನಮ್ಮ ಸಂಸ್ಥೆಯ ಇನ್ನಿತರ ಮುಖ್ಯ ಕೆಲಸ ಕಾರ್ಯವಾಗಿದೆ ಎಂದು ಹೇಳಿದರು.
ಕಳೆದ ಆಗಸ್ಟ್ನಲ್ಲಿ ಕೊಡಗಿನಲ್ಲಿ ನಡೆದ ಭೀಕರ ಪ್ರಕೃತಿ ದುರಂತದ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಮಡಿಕೇರಿಯ ಕೂರ್ಗ್ ಕಮ್ಯುನಿಟಿ ಹಾಲ್ನಲ್ಲಿ ನಿರಾಶ್ರಿತರಿಗೆ ಪರಿಹಾರ ಕೇಂದ್ರ ತೆರೆದು 250ಕ್ಕೂ ಅಧಿಕ ನಿರಾಶ್ರಿತರಿಗೆ 14 ದಿನಗಳ ಕಾಲ ಊಟ, ವಸತಿ ಹಾಗೂ ಪರಿಹಾರ ಒದಗಿಸಿದ ಬಗ್ಗೆ ಹಾಗೂ ಮಡಿಕೇರಿ ನಗರದಲ್ಲಿ ಕುಸಿದ 15ಕ್ಕೂ ಅಧಿಕ ಮನೆಗಳನ್ನು ಸಂಸ್ಥೆಯ ವತಿಯಿಂದ ದುರಸ್ಥಿ ಮಾಡಿದ ಬಗ್ಗೆ ವಿವರಿಸಿದರು.
ಕೆ.ನಿಡುಗಣೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೀಟಾ ಮುತ್ತಣ್ಣ ಮಾತನಾಡಿ, ಮಾನವರಲ್ಲಿ ಎರಡೇ ಜಾತಿ; ಒಂದು ಹೆಣ್ಣು ಇನ್ನೊಂದು ಗಂಡು ಆರಾಧನೆ ಯಾವ ರೀತಿ ಮಾಡಿದರೂ ತಲಪುವದು ಒಂದೇ ಭಗವಂತನಿಗೆ. ಕುಡಿಯುವ ನೀರು ಒದಗಿಸುವದಕ್ಕಿಂತ ಶ್ರೇಷ್ಠ ಕೆಲಸ ಬೇರೆ ಇಲ್ಲ. ಹ್ಯುಮಾನಿಟಿ ಫಸ್ಟ್ ಇಂಡಿಯಾ ಸಂಸ್ಥೆಯ ವತಿಯಿಂದ ಮಾಡುತ್ತಿರುವ ಈ ಕೆಲಸ ಬಹಳ ಉತ್ತಮವಾದ ಕೆಲಸ; ಇದನ್ನು ಮುಂದುವರೆಸಿಕೊಂಡು ಹೋಗುವಂತೆ ಹೇಳಿದರು. ಗ್ರಾಮ ಪಂಚಾಯಿತಿ ಸದಸ್ಯ ಜಾನ್ಸನ್ ಪಿಂಟೋ ಮಾತನಾಡಿ, ಕಳೆದ ವರ್ಷ ಆದ ಪ್ರಾಕೃತಿಕ ದುರಂತದಿಂದ ನೀರಿನ ಮೂಲಗಳು ಬದಲಾವಣೆಗೊಂಡು ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ದಾನಿಗಳಾದ ವಿ.ಜೆ. ನಜೀರ್ ಅಹ್ಮದ್ ಅವರು ಹ್ಯುಮಾನಿಟಿ ಫಸ್ಟ್ ಇಂಡಿಯಾ ಸಂಸ್ಥೆಯ ಮುಖಾಂತರ ಮಾಡುತ್ತಿರುವ ಈ ಕೆಲಸ ಬಹಳ ಉತ್ತಮವಾಗಿದ್ದು, ಇನ್ನಷ್ಟು ದಾನಿಗಳು ಕುಡಿಯುವ ನೀರಿನ ಬವಣೆ ನೀಗಿಸಲು ಮುಂದೆ ಬರಲೆಂದು ಆಶಿಸಿದರು.
ಅಹ್ಮದಿಯಾ ಮುಸ್ಲಿಮ್ ಜಮಾಅತ್ನ ಅಧ್ಯಕ್ಷ ಎಂ.ಬಿ. ಝಹೀರ್ ಅಹ್ಮದ್ ಮಾತನಾಡಿ, ಕೊಡಗಿನಲ್ಲಿ ನಡೆದ ಪ್ರಕೃತಿ ದುರಂತದ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಕೈಗೊಂಡ ಪರಿಹಾರ ಕಾರ್ಯವನ್ನು ನೆನಪಿಸಿದರು. ಇಂತಹ ಕುಡಿಯುವ ನೀರಿನ ಘಟಕ ಇನ್ನಷ್ಟು ಮಾಡಲು ಸಾಧ್ಯವಾಗಲಿ ಎಂದು ಆಶಿಸಿದರು.
ನಂತರ ರಿಬ್ಬನ್ ಕಟ್ಮಾಡಿ ಮಹಿಳೆಯೊಬ್ಬರಿಗೆ ಬಿಂದಿಗೆ ನೀರನ್ನು ಕೊಡುವ ಮುಖಾಂತರ ಸಾರ್ವಜನಿಕ ಬಳಕೆಗೆ ಬಿಟ್ಟುಕೊಡಲಾಯಿತು. ಈ ಸಂದರ್ಭ ಗ್ರಾ.ಪಂ. ಸದಸ್ಯರಾದ ದೇವಕಿ ದಿನೇಶ್, ಪ್ರೇಮ್ ಕುಮಾರ್, ಸಂಸ್ಥೆಯ ಕಾರ್ಯಕರ್ತರು, ಗ್ರಾಮಸ್ಥರು ಹಾಜರಿದ್ದರು. ಕೆ.ಎಂ. ಇಬ್ರಾಹಿಂ ನಿರೂಪಿಸಿದರು.