ಗೋಣಿಕೊಪ್ಪ ವರದಿ, ಏ. 26 : ಹೆಗ್ಗಡೆ ಜನಾಂಗಳ ನಡುವೆ ನಡೆಯುವ ಕ್ರೀಡಾಕೂಟವು ಮೇ 1 ರಿಂದ ಮೂರು ದಿನಗಳ ಕಾಲ ಹಾತೂರು ಫೀಲ್ಡ್ ಮಾರ್ಷಲ್ ಕೆ. ಎಂ. ಕಾರ್ಯಪ್ಪ ಮೈದಾನದಲ್ಲಿ ನಡೆಯಲಿದೆ ಎಂದು ಕೊಡಗು ಹೆಗ್ಗಡೆ ಸಮಾಜ ಉಪಾಧ್ಯಕ್ಷ ಕೊರಕುಟ್ಟೀರ ಸರಾ ಚೆಂಗಪ್ಪ ತಿಳಿಸಿದ್ದಾರೆ.

18 ನೇ ವರ್ಷದ ಕ್ರೀಡಾಕೂಟವಾಗಿ ಈ ಬಾರಿ ಆಚರಿಸಲಾಗುತ್ತಿದ್ದು, ಮೇ 3 ರವರೆಗೆ ಕ್ರೀಡಾಕೂಟ ನಡೆಯಲಿದೆ. ಪುರುಷರಲ್ಲಿ ಹಿರಿಯರಿಗೆ ಹಾಗೂ ಕಿರಿಯರಿಗೆ ಪ್ರತ್ಯೇಕ ಕ್ರಿಕೆಟ್ ಪಂದ್ಯಾವಳಿ, ಮಹಿಳೆಯರಿಗೆ ಥ್ರೋಬಾಲ್ ಕ್ರೀಡೆ ನಡೆಸಲಾಗುವದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸುಮಾರು 62 ಕುಟುಂಬ ಕ್ರಿಕೆಟ್ ಹಾಗೂ ಥ್ರೋಬಾಲ್ ಕ್ರೀಡೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು. ಈಗಾಗಲೇ ಕ್ರಿಕೆಟ್‍ಗೆ 9 ವಲಯಗಳಲ್ಲಿ 22 ತಂಡಗಳು ಹೆಸರು ನೋಂದಾಯಿಸಿಕೊಂಡಿವೆ. ಪಾನಿಕುಟ್ಟೀರ ಕುಟುಂಬ ಟ್ರೋಫಿ ದಾನಿಯಾಗಿ ಪ್ರೋತ್ಸಾಹ ನೀಡುತ್ತಿದೆ ಎಂದರು.

ಅಂದು ಬೆಳಿಗ್ಗೆ 10 ಗಂಟೆಗೆ ಕ್ರೀಡಾಕೂಟವನ್ನು ಉದ್ಘಾಟಿಸಲಾಗುತ್ತಿದೆ. ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಪಡಿಞರಂಡ ಜಿ. ಚೆಂಗಪ್ಪ ಉದ್ಘಾಟಿಸಲಿದ್ದಾರೆ. ಈ ಸಂದರ್ಭ ಕೊಡಗು ಹೆಗ್ಗಡೆ ಸಮಾಜ ಅಧ್ಯಕ್ಷ ಪಡಿಞರಂಡ ಜಿ. ಅಯ್ಯಪ್ಪ, ನಿವೃತ್ತ ಪೊಲೀಸ್ ಅಧಿಕಾರಿ ಪಂದಿಕಂಡ ಸಿ. ಗಣಪತಿ, ಕುಟುಂಬದ ಹಿರಿಯರಾದ ಪಾನಿಕುಟ್ಟೀರ ಸೋಮಯ್ಯ ಪಾಲ್ಗೊಳ್ಳಲಿದ್ದಾರೆ.

ಮೇ 3 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಅಂತರಾಷ್ಟ್ರೀಯ ಕಿರಿಯ ಅಥ್ಲೆಟ್ ಸಾಧಕ ಕಾಕೇರ ಪ್ರಜ್ವಲ್ ಮಂದಣ್ಣ ಅವರನ್ನು ಸನ್ಮಾನಿಸಲಾಗುತ್ತಿದೆ. ಎಸೆಸೆಲ್ಸಿ, ಪಿಯುಸಿ ಹಾಗೂ ಪದವಿ ಶಿಕ್ಷಣದಲ್ಲಿ ಹೆಚ್ಚು ಅಂಕ ಗಳಿಸಿದ ಜನಾಂಗದ ವಿದ್ಯಾರ್ಥಿಗಳಿಗೆ ಸ್ಕಾಲರ್‍ಶಿಪ್ ನೀಡಲಾಗುವದು ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಸಮಾಜದ ಕಾರ್ಯದರ್ಶಿ ಚಂಗಚಂಡ ಕಟ್ಟಿ ಕಾವೇರಪ್ಪ, ಕ್ರೀಡಾ ಸಮಿತಿ ಸಂಚಾಲಕ ಪಡಿಂಞರಂಡ ಪ್ರಭಕುಮಾರ್ ಉಪಸ್ಥಿತರಿದ್ದರು.