ಸಿದ್ದಾಪುರ, ಏ. 27: ತಾರಕಕ್ಕೇರಿರುವ ರಣ ಬಿಸಿಲು, ಅರಣ್ಯದಲ್ಲಿರುವ ಜೀವ ಸಂಕುಲಕ್ಕೆ ದೊರಕದ ಮೇವು ಹೀಗೆ ಹಾಡಿಗಳಲ್ಲಿ ವಾಸಿಸುವ ಹಾಡಿಯ ಮುಗ್ದ ಜನರು ಇಂದು ಕುಡಿಯುವ ಹನಿಹನಿ ನೀರಿಗೆ ಪರಿತಪಿಸುವ ಪರಿಸ್ಥಿತಿ ಎದುರಿಸುತ್ತಿರುವದು ಚಿಕ್ಕರೇಷ್ಮೆಯ ಹಾಡಿಯ ನಿವಾಸಿಗಳ ಗೋಳಾಗಿದೆ.

ವೀರಾಜಪೇಟೆ ತಾಲೂಕಿನ ಚೆನ್ನಯ್ಯನಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕರೇಷ್ಮೆಯ ಹಾಡಿಯಲ್ಲಿರುವ ನಿವಾಸಿಗಳಿಗೆ ಸರ್ಕಾರದ ವತಿಯಿಂದ ನಿರ್ಮಿಸಿ ಕೊಟ್ಟಿರುವ 7-8 ಕೊಳವೆ ಬಾವಿ ಮತ್ತು ತೆರೆದ ಬಾವಿಯಿದ್ದು ಅಂತರ್ ಜಲವು ಕುಸಿದಿದೆ. ಹಾಡಿಯಲ್ಲಿ ಸುಮಾರು 30-40 ಕುಟುಂಬಗಳು ವಾಸಿಸುತಿದ್ದು, ಕುಡಿಯುವ ನೀರಿಗೆ ಹಾಹಾಕಾರ ತೆಲೆದೋರಿದೆ. ನೀರಿನ ಬಗ್ಗೆ ಅಸಕ್ತಿ ವಹಿಸಬೇಕಾಗಿದ್ದ ಇಲಾಖೆಯ ಆಧಿಕಾರಿಗಳು ಮೌನಕ್ಕೆ ಶರಣಾಗಿರುವದು ಹಾಡಿ ನಿವಾಸಿಗಳ ಅಕ್ರೋಶಕ್ಕೆ ಗುರಿಯಾಗಿದ್ದಾರೆ. ಸುಡು ಬಿಸಿಲಿನಲ್ಲಿ ಕುಡಿಯುವ ನೀರಿಗಾಗಿ ಮೈಲಿ ದೂರದ ನಡಿಗೆಯ ಮೂಲಕ ನೀರು ಹೊತ್ತು ತರುವ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ನೀರಿನ ಸಮಸ್ಯೆಯಾದರೆ ಮಗದೊಂದೆಡೆ ಕಾಡಾನೆಗಳ ಉಪಟಳದಿಂದ ಹಾಡಿಯಲ್ಲಿ ಜನರು ಭಯದ ನೆರಳಿನಲ್ಲಿ ಬದುಕುವಂತಾಗಿದೆ ಎಂದು ಹಾಡಿಯ ನಿವಾಸಿಗಳು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

ಹಾಡಿಗಳಲ್ಲಿ ವಾಸವಾಗಿರುವ ಮನೆಗಳಿಗೆ ವಿಧ್ಯುತ್ ಸಂಪರ್ಕವಿದ್ದರೂ ಭಾಗಶಃ ಅಪೂರ್ಣಗೊಂಡ ಮನೆಗಳಿದ್ದು ಮುಂದೊಂದು ದಿನ ವಿದ್ಯುತ್ ಅಪಘಡವಾಗುವ ಸಾಧ್ಯತೆಯೂ ಇದೆ. ಗಿರಿಜನ ಯೋಜನಾ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಬೇಕು

ಹಾಡಿಯಲ್ಲಿ ವಾಸವಾಗಿರುವ ಕರಿಯ ಅವರು ಹೇಳುವ ಪ್ರಕಾರ ಕೊಳವೆ ಬಾವಿ ಅಳವಡಿಕೆ ಮಾಡಿದ ಇಲಾಖೆಯು ನಿರ್ವಹಣೆ ಮಾಡುವಲ್ಲಿ ಎಡವಿದೆ. ಕೆಲವು ಕೊಳವೆ ಬಾವಿಗಳು ತುಕ್ಕು ಹಿಡಿದು ಮೂಲೆ ಗುಂಪಾಗಿದೆ. ಕೊಳವೆ ಬಾವಿ ಅಳವಡಿಕೆ ಮಾಡಿದ್ದರು ಕುಡಿಯುವ ನೀರು ಬಾರದಿರುವದ ರಿಂದ ಇಲ್ಲಿನ ಕುಟುಂಬಗಳು ತೆರೆದ ಬಾವಿಯನ್ನು ಅಶ್ರಯಿಸಿವೆ. ಬಾವಿಯಲ್ಲಿ ನೀರಿನ ಮಟ್ಟ ದಿನದಿಂದ ದಿನಕ್ಕೆ ಕುಸಿಯುತಿದ್ದು ಕುಡಿಯುವ ನೀರಿನ ಬವಣೆಯು ತಲೆದೋರಿದೆ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದ್ದಾರೆ.

ಮನೆಯಲ್ಲಿರಿಸಿದ್ದ ಅಕ್ಕಿ ತಿಂದುಹೋದ ಕಾಡಾನೆ !

ಹಾಡಿಯ ನಿವಾಸಿಗಳಿಗೆ ಕೃಷಿ ಮಾಡಲು ಸರ್ಕಾರದಿಂದ ಜಮೀನು ನೀಡಲಾಗಿತ್ತು ಅದರೇ ಇಲ್ಲಿನ ಪರಿಸ್ಥಿತಿಯೇ ಬೇರೆ ಕಾಡಾನೆಗಳು ಅರಣ್ಯದಿಂದ ಮೇವು ಅರಸಿಕೊಂಡು ನಾಡಿಗೆ ಬಂದು ಬೇಸಾಯ ಮಾಡುವ ಗದ್ದೆಗಳಲ್ಲಿ ದಾಳಿ ಮಾಡಿ ಹೊಲಗಳಲ್ಲಿ ಬೆಳೆದ ಫಸಲು ನಾಶ ಮಾಡಿ ಹಿಂದಿರು ಗುವದರಿಂದ ಇಲ್ಲಿನ ನಿವಾಸಿಗಳು ಬೇಸಾಯ ಮಾಡುವದನ್ನು ಮರೆತು ಬಿಟ್ಟಿದ್ದಾರೆ. ಕೂಲಿ ಅವಲಂಬಿಸಿ ಕೊಂಡಿರುವ ಇಲ್ಲಿನ ಕಾರ್ಮಿಕರು ಪಡಿvರ ಅಕ್ಕಿಯನ್ನು ತಂದು ಮನೆ ಯಲ್ಲಿ ಶೇಖರಿಸಿಟ್ಟಿದ್ದರು. ಮನೆಯಿಂದ ತೆರಳಿದ್ದ ಕಾರ್ಮಿಕರು ಮನೆಗೆ ಹಿಂದಿರುಗುವ ಸಮಯ ಮನೆಯ ಕಿಟಕಿಯಿಂದ ಕಾಡಾನೆಯೊಂದು ತನ್ನ ಸೊಂಡಿಲಿನ ಸಹಾಯದಿಂದ ಪಡಿತರ ಅಕ್ಕಿಯನ್ನು ತಿಂದು ಹಾಕಿದೆ. ಎಂದು ಚೆನ್ನಯ್ಯನಕೋಟೆ ಗ್ರಾಮದ ನಿವಾಸಿ ವಾಟೇರಿರ ಸುರೇಶ್ ಸೊಮಯ್ಯ ತಿಳಿಸಿದರು.

ಕೊಡಗಿನಲ್ಲಿ ಬಹುತೇಕ ಹಾಡಿಗಳಲ್ಲಿ ಇಂತಹ ಸಮಸ್ಯೆಗಳು ಎದುರಾಗಿದ್ದು ಚುನಾವಣೆಯ ಸಂದರ್ಭದಲ್ಲಿ ಮತಯಾಚಿಸಿ ಕೊಂಡು ಬರುವ ರಾಜಕೀಯ ಪಕ್ಷಗಳು ಹಾಗೂ ಸ್ಥಳೀಯ ಜನ ಪ್ರತಿನಿದಿಗಳು ಸಮಸ್ಯೆಗಳಿಗೆ ಸ್ಪಂದನೇ ಮಾಡದಿರುವದು ವಿಪರ್ಯಾಸ ವಾಗಿದೆ. ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡಬೇಕೆಂದು ಹಾಡಿಯ ನಿವಾಸಿಗಳು ಒತ್ತಾಯಿಸಿದ್ದಾರೆ.

-ಎ.ಎನ್. ವಾಸು. ಸಿದ್ದಾಪುರ.