ಮಡಿಕೇರಿ, ಏ. 27: ಕೇರಳ ಜೈಲಿನಲ್ಲಿರುವ ಬಂಧಿತ ಶಂಕಿತ ನಕ್ಸಲ್ ನಾಯಕ ರೂಪೇಶ್‍ನನ್ನು ಇಂದು ನಗರದ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿದ್ದು, ಮೇ.22 ಕ್ಕೆ ವಿಚಾರಣೆ ಮುಂದೂಡಲಾಗಿದೆ.

ರೂಪೇಶ್ ವಿರುದ್ಧ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದಲ್ಲಿ ನಕ್ಸಲ್ ಚಟುವಟಿಕೆಯಲ್ಲಿ ಪಾಲ್ಗೊಂಡಿರುವ ಆರೋಪಗಳಿವೆ. 2010 ರಲ್ಲಿ ಭಾಗಮಂಡಲದ ಮುಂಡ್ರೋಟು ಮತ್ತು 2013 ರಲ್ಲಿ ಕಾಲೂರು ಗ್ರಾಮದಲ್ಲಿ ಪ್ರತ್ಯಕ್ಷನಾಗಿದ್ದ ಎನ್ನುವ ಆರೋಪ ಈತನ ಮೇಲಿದೆ. ಕಾಲೂರಿನ ನಿವಾಸಿಯೊಬ್ಬರ ಮನೆಗೆ ನುಗ್ಗಿ ಪಡಿತರ ತೆಗೆದುಕೊಂಡು ಹೋಗಿದ್ದು, ಗ್ರಾಮಸ್ಥರಿಗೆ ಬೆದರಿಕೆ ಒಡ್ಡಿರುವ ಬಗ್ಗೆಯೂ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ದಂತೆ ಈತನನ್ನು ನ್ಯಾಯಾಲಯಕ್ಕೆ ವಿಚಾರಣೆಗೆಂದು ಹಾಜರು ಪಡಿಸಲಾಗಿತ್ತು.

ಬಿಗಿಬಂದೋಬಸ್ತ್ ನಡುವೆ ಬಂದ ಶಂಕಿತ ನಕ್ಸಲ್ ವಾದಿ ರೂಪೇಶ್ ಕೋರ್ಟ್ ಪ್ರವೇಶಿಸುವಾಗ ನಕ್ಸಲ್ ಪರ ಘೋಷಣೆ ಕೂಗಿದ.

ನಕ್ಸಲ್ ನಿಗ್ರಹ ಪಡೆ, ಕೊಡಗು ಜಿಲ್ಲಾ ಪೊಲೀಸ್ ಹಾಗೂ ಕೇರಳ ರಾಜ್ಯ ಪೊಲೀಸರ ಬಿಗಿಬಂದೋ ಬಸ್ತ್‍ನಲ್ಲಿ ರೂಪೇಶ್‍ನನ್ನು ನ್ಯಾಯಾಲ ಯಕ್ಕೆ ಹಾಜರುಪಡಿಸಲಾಗಿತ್ತು.