*ಗೋಣಿಕೊಪ್ಪಲು, ಏ. 26 : ಮೈಸೂರು ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ರಾಜಗಾಂಭೀರ್ಯದಿಂದ ಗಮನ ಸೆಳೆಯುತ್ತಿದ್ದ, 37 ವರ್ಷದ ದ್ರೋಣ ಕೊನೆಯುಸಿರೆಳೆದಿದ್ದಾನೆ.

ತಿತಿಮತಿ, ನಾಗರಹೊಳೆ ಅಭಯಾರಣ್ಯದ ಮತ್ತಿಗೋಡು ಆನೆ ಶಿಬಿರದಲ್ಲಿ ಕಳೆದ 6 ವರ್ಷಗಳಿಂದ ವಾಸವಾಗಿದ್ದ ದ್ರೋಣ ಶುಕ್ರವಾರ ಬೆಳಿಗ್ಗೆ ಶಿಬಿರದ ನೀರಿನ ತೊಟ್ಟಿಯಲ್ಲಿ ದಾಹ ನೀಗಿಸಿಕೊಂಡ ನಂತರ ಅಸ್ವಸ್ಥಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ.

2014ರಲ್ಲಿ ನಾಗರಹೊಳೆ ಅಭಯಾರಣ್ಯದ ಹಾಸನ ಜಿಲ್ಲೆಯ ಆಲೂರು ವ್ಯಾಪ್ತಿಯಲ್ಲಿ ಪುಂಡಾಟದಿಂದ ದಾಂದಲೆ ನಡೆಸಿದ ದ್ರೋಣನನ್ನು ಸೆರೆ ಹಿಡಿದು ಮತ್ತಿಗೋಡು ಆನೆ ಶಿಬಿರಕ್ಕೆ ಕರೆತರಲಾಗಿತ್ತು. ನಂತರ ಕ್ರಾಲ್‍ನಲ್ಲಿ ಬಂಧಿಸಿ ಸಂಯಮದ ತರಬೇತಿ ನೀಡಿ ದ್ರೋಣನನ್ನು ಪಳಗಿಸಲಾಗಿತ್ತು. ದ್ರೋಣನನ್ನು ರವಿ ಮತ್ತು ಗುಂಡು ಎಂಬ ಮಾವುತ, ಕಾವಾಡಿಗಳು ಆರೈಕೆ ಮಾಡುತ್ತಿದ್ದರು. ಹೀಗೆ ಕ್ರಾಲ್‍ನಲ್ಲಿ ಪಳಗಿದ ದ್ರೋಣ ನಂತರ ಶಿಬಿರದ ಖಾಯಂ ನಿವಾಸಿಯಾಗಿದ್ದ. ಕಳೆದ ಬಾರಿ ಮೈಸೂರು ದಸರಾ ಮೆರವಣಿಗೆಯ ಜಂಬೂ ಸವಾರಿಯ ಆಕರ್ಷಕನಾಗಿ ಗಮನ ಸೆಳೆದಿದ್ದ. ಶುಕ್ರವಾರ ಬೆಳಿಗ್ಗೆ ದಿಢೀರನೆ ಅಸ್ವಸ್ಥಗೊಂಡು ಮೃತಪಟ್ಟಿದಾನೆ ಮೇಲ್ನೋಟಕ್ಕೆ ದ್ರೋಣ ಹೃದಯಾಘಾತದಿಂದ ಸಾವನ್ನಪ್ಪಿರುವದಾಗಿ ಕಂಡು ಬರುತ್ತಿದೆಯಾದರೂ, ಮರಣೋತ್ತರ ಪರೀಕ್ಷಾ ವರದಿ ಬಂದÀ ಬಳಿಕವೆ ಈ ಬಗ್ಗೆ ಖಚಿತಗೊಳ್ಳಬೇಕಿದೆ ಎಂದು ವೈದ್ಯರಾದ ಡಾ|| ನಾಗರಾಜ್ ತಿಳಿಸಿದ್ದಾರೆ.

- ಎನ್.ಎನ್. ದಿನೇಶ್