ಮಡಿಕೇರಿ, ಏ. 26: ಮುಕ್ಕೋಡ್ಲು ಗ್ರಾಮದ ಮಾನಡ್ಕ ಸೋಮಣ್ಣ ಎಂಬವರ ಮನೆಯ ಹಿಂಬಾಗಿಲ ಬಳಿಯಲ್ಲೆ ನಿನ್ನೆ ಸಂಜೆ 4.30 ರ ವೇಳೆಯಲ್ಲಿ ಕಾಳಿಂಗ ಸರ್ಪವೊಂದು ಪ್ರತ್ಯಕ್ಷಗೊಂಡಿದೆ. ಶ್ವಾನಗಳು ವಿಚಿತ್ರ ಧ್ವನಿಯಲ್ಲಿ ಒಂದೇ ಸಮನೆ ಬೊಗಳುತ್ತಿರುವದನ್ನು ಗಮನಿಸಿದ ಮಾನಡ್ಕ ಸೋಮಣ್ಣ ಮತ್ತು ಮನೆಯವರು ಬಂದು ನೋಡಿದಾಗ ಹಿಂಬಾಗಿಲ ಬಳಿಯಲ್ಲೆ ಬೃಹದಾಕಾರದ ಹಾವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ನಂತರ ಅಕ್ಕಪಕ್ಕದ ಕುಟುಂಬಸ್ಥರಿಗೆ ಕರೆ ಮಾಡಿ ವಿಷಯ ತಿಳಿಸಿದಾಗ ಕುಟುಂಬಸ್ಥರೂ ಸಹ ಈ ಬೃಹತ್ ಹಾವನ್ನು ಕಂಡು ಭಯಭೀತರಾಗಿ ಗೋಣಿಕೊಪ್ಪಲುವಿನ ಉರಗ ತಜ್ಞ ಸ್ನೇಕ್ ಶರತ್ ಅವರನ್ನು ಸಂಪರ್ಕಿಸಿದ್ದಾರೆ. ದೂರವಾಣಿ ಕರೆಗೆ ಸ್ಪಂದಿಸಿದ ಸ್ನೇಕ್ ಶರತ್ ಕೂಡಲೇ ಮುಕ್ಕೋಡ್ಲುವಿನತ್ತ ಪ್ರಯಾಣ ಬೆಳೆಸಿದರು. ದೂರ ಪ್ರಯಾಣದ ಹಾದಿ ಕ್ರಮಿಸಿ ಮುಕ್ಕೋಡ್ಲು ತಲಪುವಷ್ಟರಲ್ಲಿ ಮುಸ್ಸಂಜೆ ಸಮಯ 6.40 ಆಗಿತ್ತು. ಅಲ್ಲಿಯವರೆಗೂ ಮನೆ ಸನಿಹದ ಬಾಳೆ ಪೊದೆ ಸೇರಿದ್ದ ಕಾಳಿಂಗ ಸರ್ಪವನ್ನು ನೋಡಲು ಬಂದಿದ್ದ ಕುಟುಂಬಸ್ಥರು 2 ತಾಸಿಗೂ ಅಧಿಕ ಚಲನವಲನವನ್ನು ಗಮನಿಸುತ್ತಾ ಕಾದಿದ್ದರು. ಕತ್ತಲಾಗುವ ಸಮಯವಾದ್ದರಿಂದ ಕುರುಚಲು ಪೊದೆ ಸೇರಲು ತವಕಿಸುತ್ತಿದ್ದ

(ಮೊದಲ ಪುಟದಿಂದ) ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆಹಿಡಿಯುವಲ್ಲಿ ಸ್ನೇಕ್ ಶರತ್ ಸಫಲರಾದರು.

ವಿಷಯ ತಿಳಿಯುತ್ತಿದ್ದಂತೆಯೇ ಹಾವನ್ನು ವೀಕ್ಷಿಸಲು ಪುಟ್ಟ ಮಕ್ಕಳು, ಹೆಂಗಳೆಯರು, ವಯೋವೃದ್ಧರು ಸೇರಿದಂತೆ ಗ್ರಾಮಸ್ಥರ ದಂಡೇ ಹರಿದು ಬಂದಿತ್ತು. ಸೆರೆಸಿಕ್ಕ ಹಾವನ್ನು ಗದ್ದೆ ಬಯಲಿಗೆ ತಂದು ನೆರೆದಿದ್ದ ಜನರಿಗೆ ಕಾಳಿಂಗ ಸರ್ಪದ ನಿಜ ರೂಪವನ್ನು ತೋರಿಸಿ ಹಾವಿನ ಕುರಿತು ಕಿರು ಮಾಹಿತಿಯನ್ನೂ ಸ್ನೇಕ್ ಸತೀಶ್ ನೀಡಿದರು. ಮಾನವರ ವಾಸಸ್ಥಳಕ್ಕೆ ಬಂದಿದ್ದ ಬೃಹತ್ ಕಾಳಿಂಗ ಸರ್ಪವನ್ನು ಸೆರೆಹಿಡಿದು ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಮರಳಿ ಬಿಡಲು ಕೊಂಡೊಯ್ಯುತ್ತಿದ್ದಂತೆ ಭಯಭೀತರಾಗಿದ್ದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಯಿತು. ಗೋಣಿಕೊಪ್ಪಲುವಿನಿಂದ ಆಗಮಿಸಿದ ಉರಗ ತಜ್ಞ ಸ್ನೇಕ್ ಶರತ್‍ರಿಗೆ ಗ್ರಾಮಸ್ಥರಿಂದ ಕೃತಜ್ಞತೆಗಳು ಹರಿದು ಬಂದವು.