ಮಡಿಕೇರಿ, ಏ. 27: ಇಲ್ಲಿನ ಇಸ್ಕಾನ್ ಬಳಗದಿಂದ 12ನೇ ವಾರ್ಷಿಕೋತ್ಸವದೊಂದಿಗೆ ಅದ್ಧೂರಿಯಾಗಿ ಶ್ರೀ ಜಗನ್ನಾಥ ಯಾತ್ರೆಯು ನಗರದ ಮುಖ್ಯ ಬೀದಿಗಳಲ್ಲಿ ನೆರವೇರಿತು. ವಾರ್ಷಿಕೋತ್ಸವ ಪ್ರಯುಕ್ತ ಶ್ರೀಕೃಷ್ಣ- ಜಗನ್ನಾಥ ಸಹಿತ ಪರವಾರ ದೇವತೆಗಳಿಗೆ ಕಾಲೇಜು ರಸ್ತೆಯ ಮಂದಿರದಲ್ಲಿ ವಿಶೇಷ ಅಲಂಕಾರ ಪೂಜೆ ಏರ್ಪಡಿಸಲಾಗಿತ್ತು.ಸಂಜೆ ವಿವಿಧೆಡೆಗಳಿಂದ ಆಗಮಿಸಿದ ಇಸ್ಕಾನ್ ಬಳಗದ ಭಜನಾ ತಂಡಗಳಿಂದ ಸಾಮೂಹಿಕ ಸಂಕೀರ್ತನೆ ನಡುವೆ ಜಗನ್ನಾಥ ರಥಯಾತ್ರೆಗೆ ಚಾಲನೆ ದೊರೆಯಿತು. ಕಾಲೇಜು ರಸ್ತೆಯಿಂದ ಚೌಕ್, ಗಣಪತಿಬೀದಿ, ಮಹದೇವಪೇಟೆ, ಬನ್ನಿಮಂಟಪದಿಂದ ಮರಳಿ ಮುಖ್ಯಬೀದಿಗಳಲ್ಲಿ ಗಾಂಧಿಮೈದಾನಕ್ಕೆ ಸಂಚರಿಸಿದ ಯಾತ್ರೆ ಅಲ್ಲಿ ಸಂಪನ್ನಗೊಂಡಿತು.ಈ ಪ್ರಯುಕ್ತ ವಿಶೇಷ ಸಾಂಸÀ್ಕøತಿಕ ಕಾರ್ಯಕ್ರಮಗಳೊಂದಿಗೆ ಪ್ರವಚನ, ಪ್ರಸಾದ ವಿನಿಯೋಗ ನಡೆಯಿತು. ಮಡಿಕೇರಿ ಮಾತ್ರವಲ್ಲದೆ ಕರ್ನಾಟಕ ಹಾಗೂ ಮಹಾರಾಷ್ಟ್ರ, ಚೆನ್ನೈನ ಇಸ್ಕಾನ್ ಪ್ರಮುಖರು ಭಾಗವಹಿಸಿದ್ದರು.
ಆ ಮುನ್ನ ನಡೆದ ಸಭೆಯಲ್ಲಿ ಭಾಗವಹಿಸಿದ್ದ ಇಸ್ಕಾನ್ ಚೆನ್ನೈ ಶಾಖೆಯ ಅಧ್ಯಕ್ಷ ಸುಮಿತ್ರ ಕೃಷ್ಣಪ್ರಭು, ಸ್ಥಳೀಯ ವೈದ್ಯ ಡಾ.ಬಿ.ಸಿ. ನವೀನ್ ಅವರುಗಳು ಪಾಲ್ಗೊಂಡು ಆಶಯ ನುಡಿಯಾಡಿದರು. ಪೇಟೆ ಶ್ರೀರಾಮ ಮಂದಿರ ಎದುರಿನಿಂದ ಅಲಂಕೃತ ರಥದೊಂದಿಗೆ ಭಕ್ತರು ರಥ ಎಳೆಯುವ ಮೂಲಕ ಚಾಲನೆ ನೀಡಿದರು.