ಮಡಿಕೇರಿ, ಏ. 27: ಮಡಿಕೇರಿ ನಗರಸಭೆಯೊಳಗೆ ಎಲ್ಲಾ ಹಣಕಾಸು ವ್ಯವಹಾರವನ್ನು ನಗದು ರಹಿತ ವ್ಯವಸ್ಥೆಯಡಿ ಜಾರಿಗೊಳಿಸಿದ್ದು, ಸಾರ್ವಜನಿಕರು ಯಾವದೇ ಹಣವನ್ನು ನಗದು ರೂಪದಲ್ಲಿ ಸಿಬ್ಬಂದಿ ಮೂಲಕ ನೀಡದಂತೆ ಕಿವಿಮಾತು ಹೇಳಲಾಗುತ್ತಿದೆ. ಬದಲಾಗಿ ತೆರಿಗೆ ಹಣವನ್ನು ಈ ಮಾಸಾಂತ್ಯದೊಳಗೆ ಪಾವತಿಸಿದರೆ ಶೇ. 5ರಷ್ಟು ರಿಯಾಯಿತಿ ಘೋಷಿಸಲಾಗಿದೆ.ಈ ಹಿಂದೆ ಸಾರ್ವಜನಿಕ ತೆರಿಗೆ ಹಣವನ್ನು ನಗದು ರೂಪದಲ್ಲಿ ಪಡೆದಿದ್ದ ಸಿಬ್ಬಂದಿ ವಂಚನೆ ಮಾಡಿರುವ ಪ್ರಕರಣದ ಬೆನ್ನಲ್ಲೇ ನಗರಸಭೆ ಆಡಳಿತ ಎಚ್ಚೆತ್ತುಕೊಂಡಿದೆ. ಅಲ್ಲದೆ ಎಲ್ಲಾ ವ್ಯವಹಾರವನ್ನು ನಗದು ರಹಿತವಾಗಿ ನಡೆಸಲು ಸಂಪೂರ್ಣ ತಯಾರಿ ಮಾಡಿಕೊಂಡಿದೆ. ಹೀಗಾಗಿ ಸಾರ್ವಜನಿಕರು ತಮ್ಮ ಮನೆ ಕಂದಾಯ, ನೀರು, ಅಂಗಡಿ - ಮಳಿಗೆ, ವಾಣಿಜ್ಯ ಸಂಕೀರ್ಣ ಸಹಿತ ಎಲ್ಲವನ್ನು ನಗರಸಭೆಯೊಳಗೆ ಸ್ಥಾಪಿಸಿರುವ ಹೆಚ್.ಡಿ.ಎಫ್.ಸಿ. ಬ್ಯಾಂಕ್ ಉಪಶಾಖೆ ಮೂಲಕ ಪಾವತಿಸಲು ವ್ಯವಸ್ಥೆ ಕಲ್ಪಿಸಲಾಗಿದೆ.ಇಲ್ಲಿ ಯಾವದೇ ವಂಚನೆ - ಸಂಶಯಕ್ಕೆ ಅವಕಾಶವಿಲ್ಲದಂತೆ ಮುಕ್ತ ವ್ಯವಹಾರಕ್ಕೆ ಕ್ರಮ ವಹಿಸಲಾಗಿದೆ. ಈ ವರ್ಷದಲ್ಲಿ ಅತ್ಯಂತ ಕಟ್ಟುನಿಟ್ಟಿನ ನಗದು ರಹಿತ ವ್ಯವಹಾರ ಜಾರಿ ಗೊಂಡಿದೆ. ಹೀಗಾಗಿ ಯಾರಾದರೂ ಸಿಬ್ಬಂದಿ, ಇತರ ಮಧ್ಯವರ್ತಿಗಳ ಮೂಲಕ ಹಣ ನೀಡಿ ಮೋಸ ಹೋದರೆ ಸಂಬಂಧಿಸಿದವರೇ ಹೊಣೆಯಾಗಲಿದ್ದು, ನಗರಸಭೆಯತ್ತ ಬೊಟ್ಟುಮಾಡುವಂತಿಲ್ಲ; ಈ ಮೂಲಕ ಭ್ರಷ್ಟಾಚಾರಕ್ಕೂ ಕಡಿವಾಣ ಬೀಳುವಂತಾಗಿದೆ.

(ಮೊದಲ ಪುಟದಿಂದ) ರಿಯಾಯಿತಿ : ಇದುವರೆಗೆ ಲೋಕಸಭಾ ಚುನಾವಣೆಯಲ್ಲಿ ತೊಡಗಿಸಿಕೊಂಡಿದ್ದ ನಗರಸಭಾ ಸಿಬ್ಬಂದಿ ಕಚೇರಿಗಳಲ್ಲಿ ಬಿರುಸಿನ ಚಟುವಟಿಕೆಯೊಂದಿಗೆ ಸಾರ್ವಜನಿಕ ತೆರಿಗೆ ವಸೂಲಿಯಲ್ಲಿ ನಿರತರಾಗಿದ್ದಾರೆ. ಹಾಗೆಯೇ ಈ ತಿಂಗಳ ಕೊನೆಯೊಳಗೆ ಆಸ್ತಿ ತೆರಿಗೆ ಇತ್ಯಾದಿ ಸಲ್ಲಿಸಿದರೆ ಶೇ.5 ರಿಯಾಯಿತಿ ಪ್ರಕಟಿಸಲಾಗಿದೆ.

ಇನ್ನುಳಿದಂತೆ ಮೇ ತಿಂಗಳಿನಲ್ಲಿ ಪಾವತಿಸಿದರೆ ಈ ರಿಯಾಯಿತಿ ಅಥವಾ ಯಾವದೇ ದಂಡ ಪಾವತಿಸಬೇಕಿಲ್ಲ; ಸರಕಾರದ ನಿಯಮದಂತೆ ನಗರಸಭೆಗೆ ಸಲ್ಲಿಸಬೇಕಿರುವ ಯಾವದೇ ತೆರಿಗೆ ಅಥವಾ ಶುಲ್ಕಗಳನ್ನು ನಿಗಧಿತ ಮೊತ್ತದಷ್ಟು ಪಾವತಿಸುವದಷ್ಟೇ ಸಾರ್ವಜನಿಕರ ಹೊಣೆಗಾರಿಕೆ ಯಾಗಲಿದೆ.

ಬದಲಾಗಿ ಜೂನ್ ಮಾಸದಿಂದ ಅವಧಿ ಮೀರಿ ಚಾಲ್ತಿ ತೆರಿಗೆಯನ್ನು ಪಾವತಿಸುವಂತಾದರೂ ಕೂಡ ಪ್ರತಿ ತಿಂಗಳು ಶೇ.2ರಷ್ಟು ಬಡ್ಡಿ ಸಹಿತ ಕಟ್ಟಬೇಕಿದೆ. ಹೀಗಾಗಿ ಈಗ ಕಲ್ಪಿಸಿರುವ ವಿನಾಯಿತಿ ಅಥವಾ ಮೇ ಅಂತ್ಯದೊಳಗೆ ಪಾವತಿಸುವದು ಎಲ್ಲರಿಗೆ ಅನುಕೂಲವಾಗಲಿದೆ.

ಈ ವ್ಯವಸ್ಥೆಯಡಿ ನಗದು ರಹಿತ ವ್ಯವಹಾರದಿಂದ ಉತ್ತಮ ವಾತಾ ವರಣದೊಂದಿಗೆ, ಪ್ರಸಕ್ತ ಸುಮಾರು ರೂ. 50 ಲಕ್ಷ ಆಸ್ತಿ ತೆರಿಗೆ ಸಂಗ್ರಹವಾ ಗಿದೆ ಎಂದು ನಗರಸಭೆ ಮೂಲ ಗಳಿಂದ ‘ಶಕ್ತಿ’ಗೆ ಮಾಹಿತಿ ಲಭಿಸಿದೆ.