ಗೋಣಿಕೊಪ್ಪ ವರದಿ, ಎ. 26 : ಆಂಗ್ಲ ಭಾಷಾ ಸುಧಾರಣೆಯಿಂದ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗ ಸ್ಥಳದಲ್ಲಿ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದು ಬೆಂಗಳೂರು ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್‍ನ ಖಜಾಂಚಿ ಡಾ. ಇಂದುಮತಿ ಅಭಿಪ್ರಾಯಪಟ್ಟರು.

ಹಳ್ಳಿಗಟ್ಟು ಕೂರ್ಗ್ ಇನ್ಸ್‍ಟಿಟ್ಯೂಟ್ ಆಫ್ ಟಿಕ್ನೊಲಜಿ ಕಾಲೇಜುವಿನಲ್ಲಿ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಶನ್‍ನ ಘಟಕ ಅನಾವರಣ ಗೊಳಿಸಿ ಅವರು ಮಾತನಾಡಿದರು.

ವಿದ್ಯಾಸಂಸ್ಥೆಗಳಲ್ಲಿ ಬಳಸುವ ಆಂಗ್ಲಭಾಷೆಯ ಗುಣಮಟ್ಟದಲ್ಲಿ ಸುಧಾರಣೆಗಳನ್ನು ತರಬೇಕಿದೆ. ಆಂಗ್ಲ ಭಾಷಾ ಸುಧಾರಣೆಯಿಂದ ಭವಿಷ್ಯದಲ್ಲಿ ವಿದ್ಯಾರ್ಥಿಗಳಿಗೆ ಉದ್ಯೋಗ ಸ್ಥಳದಲ್ಲಿ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪ್ರತಿಯೊಂದು ತಾಂತ್ರಿಕ ವಿದ್ಯಾಸಂಸ್ಥೆಗಳಲ್ಲಿ ಐಎಸ್‍ಟಿಇ ಘಟಕಗಳನ್ನು ಪ್ರಾರಂಭಿಸುವದು ಬಹಳ ಮುಖ್ಯವಾಗಿದೆ. ವಿದ್ಯಾರ್ಥಿಗಳ ಉತ್ತಮ ಭವಿಷ್ಯದ ಹಿತದೃಷ್ಟಿಯಿಂದ ಬಹಳ ಮುಖ್ಯವಾಗಿದೆ ಎಂದು ಹೇಳಿದರು.

ಉನ್ನತ ಶಿಕ್ಷಣಕ್ಕೆ ತನ್ನದೇ ಆದ ಸವಾಲುಗಳಿವೆ. ವಿದ್ಯಾರ್ಥಿಗಳ ಗಳಿಸುವ ಅಂಕಗಳು ಅವರ ಬುದ್ದಿಶಕ್ತಿಯನ್ನು ಅಳೆಯುವ ಮಾನದಂಡವಾಗಬಾರದು. ಸಿಬ್ಬಂದಿಗೆ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಅವಕಾಶವಿದೆ. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ಏಳಿಗೆ ಉತ್ತಮ ಶಿಕ್ಷಣ ವ್ಯವಸ್ಥೆಗೆ ಮಾದರಿಯಾಗಲಿದೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರು ಸೆಂಟರ್ ಫಾರ್ ನ್ಯಾನೊ ಅಯಿಂಡ್ ಸಾಫ್ಟ್ ಮ್ಯಾಟರ್ ಸೈನ್ಸ್ ಪ್ರೊ. ಕಟ್ಟೇರ ಸುರೇಶ್, ವಿದ್ಯಾರ್ಥಿಗಳ ಬೌದ್ದಿಕ ಸಾಮಥ್ರ್ಯ ಅವರ ಭವಿಷ್ಯದ ಶಿಕ್ಷಣವನ್ನು ನಿರ್ಧರಿಸಬೇಕು ಎಂದರು. ವಿದ್ಯಾರ್ಥಿಗಳ ಸಾಧನೆ ಶಿಕ್ಷಣ ಸಂಸ್ಥೆಯ ಜನಪ್ರಿಯತೆಯನ್ನು ಅಳೆಯಲು ಬಳಸುವ ಮಾನದಂಡ ವಾಗಬೇಕು. ಉತ್ತಮ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿರುವ ವಿದ್ಯಾರ್ಥಿಗಳು ಸಂಸ್ಥೆಗೆ ಗೌರವವನ್ನು ತಂದುಕೊಡುತ್ತಾರೆ ಎಂದರು.

ಶಿಕ್ಷಣದಲ್ಲಿ ಉತ್ತೇಜನದ ಅವಶ್ಯಕತೆಯಿದೆ. ಶೈಕ್ಷಣಿಕ ಹಂತದಲ್ಲಿ ಪ್ರೇರಣೆಯ ಕೊರತೆಯಿಂದ ವಿದ್ಯಾರ್ಥಿಗಳು ಉದ್ಯೋಗ ಕಂಡುಕೊಂಡ ನಂತರದ ವರ್ಷಗಳಲ್ಲಿ ಆಸಕ್ತಿ ಕಳೆದುಕೊಳ್ಳುತ್ತಾರೆ ಎಂದು ಹೇಳಿದರು. ವಿದ್ಯಾರ್ಥಿಗಳ ಪ್ರತಿಭೆಗೆ ಅನುಗುಣವಾಗಿ ಉನ್ನತ ಶಿಕ್ಷಣವನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಮುಕ್ತವಾಗಿ ನೀಡಿದರೆ ಮಾತ್ರ ಅವರಿಗೆ ಉತ್ತಮ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಹೇಳಿದರು. ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಇಲ್ಲ ವಿದ್ಯಾರ್ಥಿಗಳ ಮನಸ್ಥಿತಿ ಬದಲಾಗಬೇಕಿದೆ ಅಷ್ಟೆ ಎಂದು ಹೇಳಿದರು. ಉದ್ಯಮಿ ಕೇಟೋಳಿರ ಅಪ್ಪಯ್ಯ ಮಾತನಾಡಿ, ತಾಂತ್ರಿಕ ವಿದ್ಯಾರ್ಥಿಗಳು ಮಾಡುವ ಹೊಸ ಆವಿಷ್ಕಾರಗಳು ಜನರ ಮೇಲೆ ಪರಿಣಾಮವನ್ನು ಬೀರಬೇಕು. ಆವಿಷ್ಕಾರಗಳ ಬಗ್ಗೆ ಚಿಂತನೆ ಉದ್ಯೋಗ ಅರಸುವ ಮುನ್ನವೇ ಚಿಗುರೊಡೆ ಯಬೇಕು ಎಂದು ಹೇಳಿದರು.

ವಿದ್ಯಾಸಂಸ್ಥೆಯ ವಾರ್ಷಿಕ ಪುರವಣಿಯನ್ನು ಅತಿಥಿಗಳು ಅನಾವರಣಗೊಳಿಸಿದರು. ಪ್ರಾಂಶು ಪಾಲೆ ಡಾ. ಪಿ.ಸಿಕವಿತಾ ವಾರ್ಷಿಕ ವರದಿಯನ್ನು ವಾಚಿಸಿದರು. ಹಳೆಯ ವಿದ್ಯಾರ್ಥಿಗಳಾದ ಕೇಟೋಳಿರ ಅಪ್ಪಯ್ಯ, ವಿವೇಕ್ ನಾರಾಯಣ್ ಹಾಗೂ ಡಾಕ್ಟರೇಟ್ ಪದವಿ ಪಡೆದ ಪ್ರಾಂಶುಪಾಲ ಡಾ. ಪಿ. ಸಿ ಕವಿತಾ ಹಾಗೂ ಡಾ. ದಿವಾಕರ್ ಅವರುಗಳನ್ನು ಸನ್ಮಾನಿಸಲಾಯಿತು.

ಕೊಡವ ಎಜುಕೇಷನ್ ಸೊಸೈಟಿ ಅಧ್ಯಕ್ಷ ಸಿ. ಪಿ ಬೆಳ್ಯಪ್ಪ, ಉಪಾಧ್ಯಕ್ಷ ಡಾ. ಎಂ. ಸಿ ಕಾರ್ಯಪ್ಪ ಕಾರ್ಯ ದರ್ಶಿ ರಾಕೇಶ್ ಪೂವಯ್ಯ, ಖಜಾಂಜಿ ಉತ್ತಪ್ಪ, ಜಂಟಿ ಕಾರ್ಯದರ್ಶಿ ರಾಜಾ ನಂಜಪ್ಪ ಇದ್ದರು. - ಸುದ್ದಿಪುತ್ರ