ಶ್ರೀಮಂಗಲ, ಏ. 27: ಕೊಡಗಿನ ಗಡಿಯಲ್ಲಿರುವ ಸಂರಕ್ಷಿತ ಮೀಸಲು ಅರಣ್ಯದೊಳಗೆ ಅಕ್ರಮ ಪ್ರವೇಶ ಮಾಡಿ ಪ್ರಾಣಿ ಬೇಟೆ ಮಾಡಿ ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸರು ಈ ಸಂಬಂಧ ಆರು ಮಂದಿಯನ್ನು ಬಂಧಿಸಿ ಮಾಂಸ, ಹತ್ಯಾರು, ವಾಹನ ಸೇರಿದಂತೆ ಒಟ್ಟು ರೂ. 10 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿ ಕೊಂಡಿದ್ದಾರೆ.ಇಂದು ನಸುಕಿನ ವೇಳೆ ಕುಟ್ಟ ವ್ಯಾಪ್ತಿಯ ಮೀಸಲು ಅರಣ್ಯದಲ್ಲಿ ಕಡವೆ ಬೇಟೆಯಾಡಿ ಕೊಂಡು ಮಾಂಸ ಸಾಗಾಟ ಮಾಡುತ್ತಿರುವ ಬಗ್ಗೆ ದೊರೆತ ಸುಳಿವಿನ ಮೇರೆಗೆ ದಾಳಿ ಮಾಡಿದ ಜಿಲ್ಲಾ ಅಪರಾಧ ಪತ್ತೆದಳದ ಪೊಲೀಸರ ತಂಡ ಕುಟ್ಟ-ಇರ್ಪು ಜಂಕ್ಷನ್ ಬಳಿ ಆರೋಪಿಗಳನ್ನು ಮದ್ದು ಗುಂಡು, ಮಾಂಸ, ವಾಹನಗಳ ಸಹಿತ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.ಅರಣ್ಯದೊಳಗೆ ಕಡವೆಯನ್ನು ಬೇಟೆಯಾಡಿ ಕೊಂದು ಅಂದಾಜು 150 ಕೆ.ಜಿ. ಮಾಂಸವನ್ನು ಗೂಡ್ಸ್ ವಾಹನದಲ್ಲಿ ತುಂಬಿಕೊಂಡು, ಮಾರುತಿ ಸೆಲೆರಿಯಾ ಕಾರಿನಲ್ಲಿ ಬೆಂಗಾವಲಿನೊಂದಿಗೆ ಕೊಂಡೊಯ್ಯು ತ್ತಿರುವದು ಪತ್ತೆಯಾಗಿದೆ. ಅಕ್ರಮ ಬೇಟೆಯಲ್ಲಿ ತೊಡಗಿದ್ದ ಪೊನ್ನಂಪೇಟೆ ಬಳಿಯ ಮಾಪಿಳ್ಳೆತೋಡುವಿನ ಕೆ.ಬಿ. ಸಿದ್ದಿಕ್, ಎಂ.ಹೆಚ್. ಸಮೀರ್, ಎ.ಯು. ಸಮೀರ್, ನಾಪೋಕ್ಲು ಬಳಿಯ ಕುಂಜಿಲ ಗ್ರಾಮದ ಕೆ.ಇ. ಇಸ್ಮಾಯಿಲ್, ಕೆ.ಎ. ಯೂಸುಫ್, ಕೆ.ಎ. ಮೊಹಮ್ಮದ್ ಎಂಬವರುಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಂದು ಒಂಟಿ ನಳಿಕೆ ಬಂದೂಕು, ಕತ್ತಿ, ಚಾಕುಗಳು, ಮಾಂಸ, ವಾಹನಗಳು ಸೇರಿದಂತೆ ಒಟ್ಟು ರೂ. 10 ಲಕ್ಷ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿ ಕೊಳ್ಳಲಾಗಿದೆ. ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ರಮ ಬೇಟೆಯಲ್ಲಿ ತೊಡಗಿಸಿ ಕೊಂಡಿರುವ ಈ ತಂಡ ಕಾಡು ಪ್ರಾಣಿಗಳನ್ನು ಬೇಟೆ ಮಾಡಿ ಜಿಲ್ಲೆ ಸೇರಿದಂತೆ ನೆರೆಯ ಕೇರಳದಲ್ಲಿ ಮಾಂಸವನ್ನು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿರುವ ಬಗ್ಗೆ ವಿಚಾರಣೆ ವೇಳೆ ತಿಳಿದು ಬಂದಿದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಸಿಐಬಿ ಇನ್ಸ್‍ಪೆಕ್ಟರ್ ನಾಗೇಶ್, ಸಿಬ್ಬಂದಿಗಳಾದ ಕೆ.ಎಸ್. ಅನಿಲ್ ಕುಮಾರ್, ಬಿ.ಎಲ್. ಯೋಗೇಶ್ ಕುಮಾರ್, ಕೆ.ಆರ್. ವಸಂತ್, ಎಂ.ಎನ್. ನಿರಂಜನ್, ಚಾಲಕ ಕೆ.ಎಸ್. ಶಶಿಕುಮಾರ್, ಸಿಡಿಆರ್ ಸೆಟ್‍ನ ಸಿ.ಕೆ. ರಾಜೇಶ್, ಎಂ.ಎ. ಗಿರೀಶ್ ಪಾಲ್ಗೊಂಡಿದ್ದರು.

ಅಪರಾದ ಪತ್ತೆದಳದ ನಿರೀಕ್ಷಕ ಕೆ. ನಾಗೇಶ್ ಪ್ರಕರಣವನ್ನು ಕುಟ್ಟ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದು ಪ್ರಕರಣದ ಬಗ್ಗೆ ಕುಟ್ಟ ವೃತ್ತ ನಿರೀಕ್ಷಕ ವಸಂತ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ. ಯಾವ ಜಾಗದಲ್ಲಿ ಕಡವೆಯನ್ನು ಬೇಟೆ ಯಾಡಲಾಗಿದೆ ಹಾಗೂ ಯಾರು ಗುಂಡು ಹೊಡೆದಿದ್ದಾರೆ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

ಪ್ರಾಥಮಿಕ ತನಿಖೆಯಲ್ಲಿ ಆರೋಪಿಗಳಾದ ನಾಪೋಕ್ಲು ವ್ಯಾಪ್ತಿಯ ಕೆ.ಇ. ಇಸ್ಮಾಯಿಲ್, ಕೆ.ಎ. ಯೂಸಪ್, ಕೆ.ಎ. ಮೊಹಮದ್ ಅವರು ಸೆಲೇರಿಯೋ ಕಾರಿನಲ್ಲಿ ಶುಕ್ರವಾರ ರಾತ್ರಿ ಸುಮಾರು 10 ಗಂಟೆಯ ನಂತರ ಪೊನ್ನಂಪೇಟೆ ಸಮೀಪ ಬೇಗೂರಿಗೆ ಆಗಮಿಸಿ ಬೇಗೂರಿನಿಂದ ಜೀತೋ ಗೂಡ್ಸ್ ವಾಹನದೊಂದಿಗೆ ಕೆ.ಬಿ. ಸಿದ್ದಿಕ್, ಎಂ.ಹೆಚ್. ಸಮೀರ್, ಎ.ಯು. ಸಮೀರ್ ಅವರೊಂದಿಗೆ ಕುಟ್ಟ ವ್ಯಾಪ್ತಿಯ ಮೀಸಲು ಅರಣ್ಯಕ್ಕೆ ಬೇಟೆಗೆ ತೆರಳಿರುವ ಬಗ್ಗೆ ಮಾಹಿತಿ ದೊರೆತಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸುಮನ್ ಡಿ.ಪಿ. ಶ್ರೀಮಂಗಲ ಠಾಣೆಗೆ ಆಗಮಿಸಿ ಅಪರಾಧದ ಬಗ್ಗೆ ಮಾಹಿತಿ ಪಡೆದರು. ಕಾರ್ಯಾ ಚರಣೆಯನ್ನು ಪ್ರಶಂಶಿಸಿ ಜಿಲ್ಲಾ ಅಪರಾದ ಪತ್ತೆದಳದ ತಂಡಕ್ಕೆ ರೂ. 10 ಸಾವಿರ ಬಹುಮಾನ ಘೋಷಿಸಿದರು.