ಸಿದ್ದಾಪುರ, ಏ. 25: ಕಾಡಾನೆಗಳು ಮನೆಯ ಅಂಗಳದಲ್ಲಿ ಬೀಡು ಬಿಟ್ಟು ಆತಂಕ ಸೃಷ್ಟಿಸುತ್ತಿರುವ ಘಟನೆ ಸಿದ್ದಾಪುರದ ಹೊರವಲಯದಲ್ಲಿ ನಡೆದಿದೆ.

ಸಿದ್ದಾಪುರ ಸಮೀಪದ ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ಕಳೆದ ಐದು ದಿನಗಳ ಹಿಂದೆ ಕಾಡಾನೆಗಳ ಹಿಂಡು ಕಾಫಿ ತೋಟಗಳಲ್ಲಿ ಬೀಡು ಬಿಟ್ಟು ದಾಂದಲೆ ನಡೆಸಿ ಬೆಳೆ ನಷ್ಟ ಮಾಡಿವೆ. ಅರಣ್ಯ ಇಲಾಖೆಗೆ ಗ್ರಾಮಸ್ಥರು ದೂರು ನೀಡಿದ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಆರ್.ಆರ್.ಟಿ. ತಂಡವು ಕಾರ್ಯ ಚರಣೆ ನಡೆಸಿ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಮರಿಯಾನೆಗಳು ಸೇರಿದಂತೆ ಒಟ್ಟು 24 ಕಾಡಾನೆಗಳನ್ನು ಸಿಡಿ ಮದ್ದು ಸಿಡಿಸುವ ಮೂಲಕ ದುಬಾರೆ ಅರಣ್ಯಕ್ಕೆ ಅಟ್ಟಿಸಿದರು. ಆದರೆ. ಆಹಾರ ಅರಸಿಕೊಂಡು ಕಾಡಾನೆಗಳ ಹಿಂಡು ಇದೀಗ ಮತ್ತೊಮ್ಮೆ ನಾಡಿನತ್ತ ಲಗ್ಗೆ ಇಡುತ್ತಾ ಮನೆಯ ಕಿಟಕಿಯ ಬಳಿ ಗೀಳುಡುತ್ತಿದೆ ಎಂದು ವಾಲ್ನೂರು ಗ್ರಾ.ಪಂ. ಅಧ್ಯಕ್ಷೆ ನಾಗರತ್ನಮ್ಮ ‘ಶಕ್ತಿ’ಗೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರ ಜೀವನ ದುಸ್ತರವಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.