ಪೊನ್ನಂಪೇಟೆ, ಏ. 24: ಸರಕಾರಿ ಕಚೆÉೀರಿಗಳು ಎಂದಾಕ್ಷಣ ನಿಮ್ಮ ಸುಪ್ತ ನೆನಪಿನ ಆಳಕ್ಕೆ ಸಹಜವಾಗಿಯೇ ಮೂಡಿಬರುವ ಕಲ್ಪನೆ ಅವರೆಲ್ಲ ಭ್ರಷ್ಟರು, ದುಷ್ಟರು, ಅಹಂಕಾರಿಗಳು ಎನ್ನುವದಾದರೆ ಅದು ಸುಳ್ಳು ಎನ್ನುವಂತಹ ಘಟನೆ ಯೊಂದಕ್ಕೆ ಇಂದು ವೀರಾಜಪೇಟೆಯ ನೂತನ ತಾಲೂಕು ಕಚೇರಿಯ ಕಟ್ಟಡ ಹಾಗೂ ಅಲ್ಲಿದ್ದ ನಾನೂ ಪ್ರತ್ಯಕ್ಷ ಸಾಕ್ಷಿಯಾದೆವು.
ಓರ್ವ ಇಳಿವಯಸ್ಸಿನ ತನ್ನ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡು ಜೀವನದ ಅಷ್ಟೂ ಕಷ್ಟಗಳು ದೇವರು ಆತನಿಗೆ ಕೊಟ್ಟಿರುವನೇನೊ ಎನ್ನುವಂತೆ ಕಾಣಿಸುತ್ತಿದ್ದ ಅಮ್ಮತ್ತಿ ಹೋಬಳಿಯ ಕಳತ್ಮಾಡು ನಿವಾಸಿ ವಿಶೇಷಚೇತನನೊಬ್ಬ ತೆವಳುತ್ತಾ ವೀರಾಜಪೇಟೆಯ ತಾಲೂಕು ಕಚೇರಿಯ ಮೆಟ್ಟಿಲುಗಳನ್ನು ಪ್ರಯಾಸದಿಂದ ಹತ್ತಿಕೊಂಡು ಹೊರಗಿನ ಅಷ್ಟೂ ಬಿಸಿಲನ್ನು ಹೊತ್ತುಕೊಂಡಂತೆ ಒಳಗೆ ಬೆವರ ಹನಿಗಳೊಂದಿಗೆ ತಲುಪುತ್ತಾನೆ. ಆ ದೇವರು ಎಷ್ಟು ನಿಷ್ಕರುಣಿ ಎನಿಸಿ ಬಿಡುವಷ್ಟು ನನಗೆ ಬೇಸರ ಉಂಟಾಗಿ ಹೋದ ಕೆಲಸ ಆ ಕ್ಷಣಕ್ಕೆ ಮರೆತು ಹೋಗಿ ನಾನು ಆ ದೇವರ ಅವಕೃಪೆಗೆ ಪಾತ್ರನಾದಂತೆ ಕಾಣಿಸುತ್ತಿದ್ದ ಆ ಸಂಧ್ಯಾಕಾಲದ ನೊಂದ ಜೀವವನ್ನೇ ನೋಡಿ ನಿಂತಿದ್ದೆ.
ಅದೇ ಕಚೆÉೀರಿಯ ಎದುರು ಕೋಣೆಯ ಒಂದು ಬದಿಯಲ್ಲಿ ಕುಳಿತು ತದೇಕ ಚಿತ್ತವಾಗಿ ಹಾಳೆಗಳೊಂದಿಗೆ ನಿರತನಾಗಿದ್ದ ಕಚೇರಿಯ ಗುಮಾಸ್ತ ಶರಣು ಈ ವಿದ್ಯಮಾನವನ್ನು ನೋಡಿ ಅದೇನನಿಸಿತೋ.. ತನ್ನ ಎಲ್ಲಾ ಕೆಲಸವನ್ನು ಅಲ್ಲಿಗೆ ಬಿಟ್ಟು ಗಡಿಬಿಡಿಯಿಂದ ಎದ್ದು ಓಡಿ ಆ ನೊಂದ ಜೀವದ ಬಳಿ ಹೋಗಿ ತೀರ ಅವರ ಪಕ್ಕಕ್ಕೆ ನಿಂತು ಅಲ್ಲೇ ಅವರ ಎತ್ತರಕ್ಕೆ ಬಾಗಿ .. “ಏನಜ್ಜ.? ಏನಾಗ್ಬೇಕಿತ್ತು ನಿಮಗೆ, ಯಾಕೆ ಒಬ್ಬರೆ ಬಂದಿದ್ದೀರಾ? ಅಂತ ವಿಚಾರಿಸಿದಾಗ .. ‘ತನಗೆ ತನ್ನ ಜಾಗದ ಎಂಸಿ ಕಾಪಿ ಹಾಗೂ ತನ್ನ ಬಳಿ ಇರುವ ಹಳೆಯ ಆರ್‍ಟಿಸಿಯ ಬದಲು ನೂತನ ಆರ್‍ಟಿಸಿ. ಬೇಕೆಂದು.. ತನ್ನೊಂದಿಗೆ ಯಾರು ಬಂದಿಲ್ಲವೆಂದು ತಾನೊಬ್ಬ; ತನ್ನ ಕೆಲಸಕಾರ್ಯಗಳಿಗೆ ಜೊತೆಗಾರರಾರು ಇಲ್ಲವೆಂದು ಹೇಳುವಷ್ಟರಲ್ಲಿ ಆತನ ಕಂಗಳಲ್ಲಿ ಆತನ ಅಷ್ಟೂ ಸಂಕಷ್ಟಗಳು ಮೂಡಿದಂತಿತ್ತು... ಆತನ ಅಳಲನ್ನು ಆಲಿಸಿದ ಗುಮಾಸ್ತ ಶರಣು ಕೆಲಕಾಲ ಸ್ಥಬ್ಧವಾದಂತೆ ನಿಂತು ಆ ವೃದ್ಧನ ಕೈಯಿಂದ ಹಳೆಯ ದಾಖಲೆಪತ್ರವನ್ನು ತೆಗೆದುಕೊಂಡು ಏಕಾ ಏಕಿ ಅಲ್ಲಿಂದ ಓಡಿದಂತೆ ನಡೆದು ಕಚೇರಿಯ ‘ಜನಸ್ನೇಹಿ’ ಕೇಂದ್ರದ ಕೌಂಟರನ್ನು ತಲುಪಿ ಅಲ್ಲಿ ಈತನಿಗೆ ಬೇಕಿದ್ದ ಅಗತ್ಯ ದಾಖಲೆಗಳಿಗಾಗಿ ತೆರಬೇಕಾದ ಸುಂಕವನ್ನು ಸ್ವತಃ ತಾನೇ ಪಾವತಿಸಿದರು. ಒಂದೆರಡು ನಿಮಿಷಗಳಲ್ಲಿ ಆತನಿಗೆ ಅಗತ್ಯವಿದ್ದ ಎಂಸಿಯ ಪ್ರತಿಯನ್ನು ಹಾಗೂ ನೂತನ ಆರ್‍ಟಿಸಿ ಯನ್ನು ಹೊತ್ತು ತಂದು ಆ ವೃದ್ಧ ವಿಶೇಷಚೇತನನಿಗೆ ಕೊಟ್ಟು ಹಾಗೆ ನಿಂತಿದ್ದ. ಆ ವೃದ್ಧ ಶರಣನನ್ನೇ ನೋಡಿ ಆ ನೋಟದಲ್ಲೇ ಭಾವುಕನಾಗಿ ಸಾವಿರ ಕೃತಜ್ಞತೆಯನ್ನು ಸಲ್ಲಿಸಿ ತೆವಳಿಕೊಂಡು ಬಂದಂತಯೇ ಅಲ್ಲಿಂದ ಹೊರಡುವ ಸಂದರ್ಭ ಶಿರಸ್ತೆದಾರ್ ಪ್ರವೀಣ್ ಅಲ್ಲಿ ನಡೆದ ವಿದ್ಯಾಮಾನವನ್ನು ವಿಚಾರಿಸಿ ಆ ವೃದ್ಧನನ್ನು ಅಲ್ಲಿಂದ ಗೌರವ ಪೂರ್ವಕವಾಗಿ ಕಳುಹಿಸಿಕೊಟ್ಟರು.
ನಾನು ಈ ವಿದ್ಯಮಾನಗಳಿಗೆ ಮೂಕ ಪ್ರೇಕ್ಷಕನಾಗಿ ನಿಂತು ಸರಕಾರಿ ನೌಕರರ ಮೇಲಿರುವ ಜನ್ಮತಃ ಆರೋಪಗಳಿಗೆ ಅಲ್ಲಿ ಕಾರ್ಯನಿರ್ವ ಹಿಸುತ್ತಿರುವ ಎಲ್ಲರೂ ಭಾಗಿಯಾಗದೆ, ಎಲ್ಲಾ ಕಚೆÉೀರಿಗ¼ಲ್ಲೂ ಶರಣು ಹಾಗೂ ಪ್ರವೀಣ್ ತಂಡದವರು ಇರಲಿ ಎಂದು ಹಾರೈಸಿದೆ.
-ಶ್ರೀಧರ್ ನೆಲ್ಲಿತ್ತಾಯ.