ಶನಿವಾರಸಂತೆ, ಏ. 25: ದುಂಡಳ್ಳಿ ಗ್ರಾ.ಪಂ. ವ್ಯಾಪ್ತಿಯ ಚಿಕ್ಕಕೊಳತ್ತೂರು ಗ್ರಾಮದ ಜನವಸತಿ ಪ್ರದೇಶದಲ್ಲಿ 10 ಅಡಿ ಅಗಲ, ಸುಮಾರು 100 ಅಡಿ ಆಳದ ಸೇದುವ ಬಾವಿ ಹಲವು ವರ್ಷಗಳಿಂದ ಇದ್ದು, ಬಾವಿ ಪಕ್ಕದಲ್ಲಿ ರಸ್ತೆ ಹಾದು ಹೋಗುತ್ತದೆ. ಈ ರಸ್ತೆಯಲ್ಲಿ ಶಾಲೆಯ ಮಕ್ಕಳು, ಊರಿನ ಜನರು ಹೆಚ್ಚಾಗಿ ತಿರುಗಾಡುತ್ತಾರೆ. ಹೆಚ್ಚಾಗಿ ಮಕ್ಕಳು ಬಾವಿಯ ಪಕ್ಕದಲ್ಲಿ ಆಟವಾಡುತ್ತಿರುತ್ತಾರೆ.
ಈ ಬಾವಿಗೆ ಯಾವದೇ ರೀತಿಯ ಭದ್ರತೆಯೂ ಇಲ್ಲ. ಬಾವಿಯ ಸುತ್ತ ಕಬ್ಬಿಣದ ಮೆಸ್ ಅಳವಡಿಸಿ ಸುರಕ್ಷಿತ ಕ್ರಮ ಅನುಸರಿಸಬೇಕು. ಅನಾಹುತ ಸಂಭವಿಸಿದರೆ ಇದಕ್ಕೆ ದುಂಡಳ್ಳಿ ಗ್ರಾ.ಪಂ. ಹೊಣೆಯಾಗುತ್ತದೆ. 15 ದಿನಗಳ ಒಳಗಾಗಿ ಸೂಕ್ತ ಕ್ರಮಕೈಗೊಳ್ಳಬೇಕು. ಇಲ್ಲದಿದ್ದಲ್ಲಿ ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ಮಾಡಲಾಗುವದು ಎಂದು ಶಿವರಾಮೇಗೌಡರ ಕರ್ನಾಟಕ ರಕ್ಷಣಾ ವೇದಿಕೆ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಪ್ರಾನ್ಸಿಸ್ ಡಿಸೋಜ, ತಾಲೂಕು ಕಾರ್ಯದರ್ಶಿ ಪ್ರವೀಣ್ ಕುಮಾರ್, ಶನಿವಾರಸಂತೆ ಹೋಬಳಿ ಅಧ್ಯಕ್ಷ ಆನಂದ, ಕಾರ್ಯಕರ್ತರ ರಂಜನ್ ಎಚ್ಚರಿಸಿದ್ದಾರೆ.