ಸಿದ್ದಾಪುರ, ಏ. 25 : ಕೊಡಗು ಚಾಂಪಿಯನ್ಸ್ ಲೀಗ್ ನ ನಾಲ್ಕನೇ ಆವೃತಿಯ ಪಂದ್ಯಾಟ ತಾ.27 ರಿಂದ (ನಾಳೆಯಿಂದ) ಆರಂಭವಾಗಲಿದೆ.

ಸಿದ್ದಾಪುರದ ಸಿಟಿ ಬಾಯ್ಸ್ ಯುವಕ ಸಂಘವು ಕಳೆದ ಮೂರು ವರ್ಷಗಳ ಹಿಂದೆ ಐ.ಪಿ.ಎಲ್ ಮಾದರಿಯ ಕ್ರಿಕೆಟ್ ಪಂದ್ಯಾವಳಿಯನ್ನು ನಡೆಸಿಕೊಂಡು ಬರುತ್ತಿದ್ದು, ನಾಲ್ಕನೇ ಆವೃತ್ತಿಯ ಪಂದ್ಯಾವಳಿಯು ಸಿದ್ದಾಪುರದ ಕರಡಿಗೋಡು ಗ್ರಾಮದ ಕುಕ್ಕನೂರು ಪಿ ಪುರುಷೋತ್ತಮ ಹಾಗೂ ದೇವಪ್ರಕಾಶ್ ಅವರ ಮೈದಾನದಲ್ಲಿ ತಾ.27 ರಿಂದ ಮೇ 2ರವರೆಗೆ ನಡೆಯಲಿದೆ. ಪಂದ್ಯಾವಳಿಗಾಗಿ ಅಂತಿಮ ಸಿದ್ದತೆಗಳು ಭರದಿಂದ ಸಾಗಿವೆ.

ತಾ.27 ರಂದು ಬೆಳಗ್ಗೆ 9 ಗಂಟೆಗೆ ಪಂದ್ಯಾವಳಿ ಉದ್ಘಾಟನೆಗೊಳ್ಳಲಿದ್ದು, ಅಂತರಾಷ್ಟ್ರೀಯ ಅಥ್ಲೀಟ್, ತೀತಮಾಡ ಅರ್ಜುನ್ ದೇವಯ್ಯ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ಸಿ.ಎಲ್ ಅಧ್ಯಕ್ಷ ರೆಜಿತ್ ಕುಮಾರ್ ಗುಹ್ಯ ವಹಿಸಲಿದ್ದು, ಶ್ರೀ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಮಾಜ ಸೇವಕ ಸಂಕೇತ್ ಪೂವಯ್ಯ, ಕೊಡಗು ಪ್ರೆಸ್‍ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕರಾದ ಬಿ.ಜಿ. ಅನಂತಶಯನ, ನೋಟರಿ ವಕೀಲರಾದ ಎಂ.ಎಸ್ ವೆಂಕಟೇಶ್, ಗ್ರಾ.ಪಂ ಅಧ್ಯಕ್ಷ ಮಣಿ, ಪಾಲಿಬೆಟ್ಟ ಗ್ರಾ.ಪಂ ಅಧ್ಯಕ್ಷ ಪುಲಿಯಂಡ ಬೋಪಣ್ಣ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಮೈದಾನಕ್ಕೆ ಕುಕ್ಕುನೂರು ದಿವಂಗತ ಬಾಲಕೃಷ್ಣ ಹಾಗೂ ದಿವಂಗತ ಚೇತನ್ ಸ್ಮರಣಾರ್ಥ ಮೈದಾನ ಎಂದು ನಾಮಕರಣ ಮಾಡಲಾಗಿದೆ.

ಸುಮಾರು 8 ಭಾಷೆಗಳಲ್ಲಿ ವೀಕ್ಷಕ ವಿವರಣೆ ನೀಡುತ್ತಿರುವದು ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಲ್ಲಿ (ಕೆ.ಎಸ್.ಸಿ.ಎ) ನೊಂದಾಯಿತ ಅನುಭವಿ ತೀರ್ಪುಗಾರರು ಹಾಗೂ ಸ್ಕೋರರ್‍ಗಳು ಪಂದ್ಯಾವಳಿಯಲ್ಲಿ ಕಾರ್ಯನಿರ್ವಹಿಸುತ್ತಿರುವದು ಪಂದ್ಯಾವಳಿಯ ವಿಶೇಷತೆಯಾಗಿದೆ.

4ನೇ ಆವೃತಿಯ ತಂಡಗಳು

ನಾಲ್ಕನೇ ಅವೃತಿಯ ಪಂದ್ಯಾವಳಿಯಲ್ಲಿ ಒಟ್ಟು 14 ತಂಡಗಳು ಭಾಗವಹಿಸುತಿದ್ದು, ನೆಲ್ಯಹುದಿಕೇರಿಯ ಝಲ್ಲಾ ಕ್ರಿಕೆಟರ್ಸ್, ಗ್ರೀನ್ಸ್ ಕ್ರಿಕೆಟರ್ಸ್, ರೇಂಬೋ ಕ್ರಿಕೆಟರ್ಸ್, ಗೋಣಿಕೊಪ್ಪಲುವಿನ ಬ್ಲ್ಯಾಕ್ ತಂಡರ್, ಆಶ್ಯಸ್, ಕರಡಿಗೋಡುವಿನ ರಾಯಲ್ ಕುಕ್ಕುನೂರು, ಸಿದ್ದಾಪುರದ ಟೀಮ್ ಕೂಲ್, ಫಯರ್ ಟೈಗರ್, ಮಡಿಕೇರಿಯ ಸ್ಪೋಟ್ರ್ಸ್ ವಲ್ರ್ಡ್, ತ್ಯಾಗ್ ಬಾಯ್ಸ್, ಕಳತ್‍ಮಾಡುವಿನ ವಿರಾಟ್ ಕ್ರಿಕೆಟರ್ಸ್, ಬೆಟ್ಟದಕಾಡಿನ ಬ್ಲ್ಯಾಕ್ ವಾರಿಯರ್ಸ್, ತ್ಯಾಗತ್ತೂರುವಿನ ಕೂರ್ಗ್ ಫ್ರೆಂಡ್ಸ್, ಮೂರ್ನಾಡುವಿನ ಎಸ್.ಆರ್.ಎಸ್ ತಂಡಗಳು ಭಾಗವಹಿಸಲಿವೆ.

-ವಾಸು