ಗೋಣಿಕೊಪ್ಪ ವರದಿ, ಏ. 25: ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸಿಐಟಿ ಗ್ಲಾಮರ್ ಡೇ ಮಿಸ್ಟರ್ ಅಯಿಂಡ್ ಮಿಸ್ ಹಂಟ್ ಕಾರ್ಯಕ್ರಮದಲ್ಲಿ ಯಾನಾ ಕನ್ನಡ ಸಿನೆಮಾ ನಟಿಯರು ವಿದ್ಯಾರ್ಥಿಗಳೊಂದಿಗೆ ಕುಣಿದು ಸಂಭ್ರಮಿಸಿದರು.

ಯಾನಾ ಕನ್ನಡ ಸಿನೆಮಾ ನಟಿಯರು ಎಂಜಿನಿಯರಿಂಗ್ ವಿದ್ಯಾರ್ಥಿಗಳೊಂದಿಗೆ ಹೆಜ್ಜೆ ಹಾಕುವ ಮೂಲಕ ರ್ಯಾಂಪ್ ವಾಕ್ ಸ್ಪರ್ಧೆಯಲ್ಲಿ ಉತ್ಸಾಹ ಮೂಡಿಸಿದರು. ಇದರೊಂದಿಗೆ ಸಿನೆಮಾದ ಪ್ರಚಾರ ಕೂಡ ನಡೆಸಿದರು.

ಯಾನಾ ಚಿತ್ರ ನಟಿಯರುಗಳಾದ ವೈಭವಿ ಜಗದೀಶ್, ವೈಸಿರಿ ಜಗದೀಶ್ ಹಾಗೂ ವೈನಿಧಿ ಜಗದೀಶ್ ಸಿನೆಮಾದ ಹೆಸರಿರುವ ಬಿಳಿ ಬಟ್ಟೆ ತೊಡುವ ಮೂಲಕ ವಿಶೇಷ ಆಕರ್ಷಣೆ ಮೂಡಿಸಿದರು.

ವಿದ್ಯಾರ್ಥಿಗಳು ಹಲವು ವೇಷಗಳ ಮೂಲಕ ಹೆಜ್ಜೆ ಹಾಕಿದರು. ಸುಮಾರು 30 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡರು. ಕೊಡವ ಸಾಂಪ್ರದಾಯಿಕ ಉಡುಪು, ಕನ್ನಡ ಸೀರೆ, ಮಲಯಾಳಂ ಸೇರಿದಂತೆ ಹಲವು ಬಗೆಯ ಪಂಚೆ ತೊಟ್ಟು ಹೆಜ್ಜೆ ಹಾಕಿದರು. ವಿದ್ಯಾರ್ಥಿಗಳಲ್ಲಿ ಕೌಶಲ್ಯಗಳನ್ನು ಹಾಗೂ ಅವರಲ್ಲಿನ ಆತ್ಮ ವಿಶ್ವಾಸ ಹರಿಯಲು ಒಂದಷ್ಟು ಪ್ರಶ್ನೋತ್ತರ ಕಾರ್ಯಕ್ರಮ ಕೂಡ ನಡೆಯಿತು. ಕಾಲೇಜು ಸಿಬ್ಬಂದಿ ವರ್ಗ ಕೂಡ ರ್ಯಾಂಪ್ ವಾಕ್ ಮೂಲಕ ಗಮನ ಸೆಳೆದರು.

ವಿಜೇತರುಗಳು: ಮಿಸ್ಟರ್ ಸಿಐಟಿ ಪ್ರಶಸ್ತಿಯನ್ನು ಪಂಚೆ ತೊಟ್ಟ ಪ್ರತ್ಯುಶ್ ಪಡೆದುಕೊಂಡರು. ಗೌನ್ ತೊಟ್ಟ ನಾಸಿಯಾ ಮಿಸ್ ಸಿಐಟಿ ಪ್ರಶಸ್ತಿ ಪಡೆದುಕೊಂಡರು. ಕಾವ್ಯ ಬೆಸ್ಟ್ ರ್ಯಾಂಪ್ ವಾಕ್ ಬಹುಮಾನ ಪಡೆದರು. ಚೋಂದಮ್ಮಗೆ ಫೇಷನೇಟ್ ಬಹುಮಾನ, ಬಿಳಿ ಕುಪ್ಯ ತೊಟ್ಟ ಅಕ್ಷಯ್ ಪೇಟೆಂಟ್ ಕಿಂಗ್, ಬ್ಯೂಟಿ ಕ್ಯೂನ್ ಬಹುಮಾನವನ್ನು ಶಿಲ್ಪ, ಬೆಸ್ಟ್ ಎತ್ನಿಕ್ ಬಹುಮಾನವನ್ನು ಅಮೂಲ್ ಪಡೆದುಕೊಂಡರು.

ಉದ್ಘಾಟನೆ ಸಂದರ್ಭ ಪ್ರಾಂಶುಪಾಲ ಡಾ. ಪಿ.ಸಿ. ಕವಿತಾ ಉಪಸ್ಥಿತರಿದ್ದರು.

-ಸುದ್ದಿಪುತ್ರ