ಕುಶಾಲನಗರ, ಏ. 25: ಕುಶಾಲನಗರ ಪಟ್ಟಣದ ಸಮರ್ಪಕ ಸಂಚಾರಿ ವ್ಯವಸ್ಥೆಗೆ ಕಾಯಕಲ್ಪ ಕಲ್ಪಿಸಲು ಪೊಲೀಸ್ ಇಲಾಖೆ ಕೆಲವು ಯೋಜನೆಗಳನ್ನು ರೂಪಿಸಿದೆ. ಪಟ್ಟಣದಲ್ಲಿ ವಾಹನಗಳ ಸಾಂದ್ರತೆ ಅಧಿಕವಾಗುವದರೊಂದಿಗೆ ವಾಹನ ಅಪಘಾತಗಳ ಸಂಖ್ಯೆ ಏರಿಕೆಯಾಗುತ್ತಿರುವದು ಇತ್ತೀಚಿನ ಬೆಳವಣಿಗೆಯಾಗಿದ್ದು ಈ ನಿಟ್ಟಿನಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಕುಶಾಲನಗರ ಡಿವೈಎಸ್ಪಿ ದಿನಕರ ಶೆಟ್ಟಿ ಮತ್ತು ಪೊಲೀಸ್ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಯೋಜನೆಗಳನ್ನು ರೂಪಿಸಿದ್ದಾರೆ.
ಪಟ್ಟಣದ ಗಣಪತಿ ದೇವಾಲಯ ಮತ್ತು ಐಬಿ ಬಳಿ ಮಸೀದಿ ವ್ಯಾಪ್ತಿಯ ವೃತ್ತಗಳಲ್ಲಿ ಸಂಚಾರಿ ಪೊಲೀಸರಿಗೆ ಕರ್ತವ್ಯ ನಿರ್ವಹಿಸಲು ಚೌಕಿಗಳನ್ನು ನಿರ್ಮಿಸಲಾಗುತ್ತಿದೆ. ಪಟ್ಟಣದಲ್ಲಿ ಹೆದ್ದಾರಿ ರಸ್ತೆ ಬದಿಯಲ್ಲಿ ಸಮರ್ಪಕ ವಾಹನ ನಿಲುಗಡೆಗೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿರುವ ವೃತ್ತ ನಿರೀಕ್ಷಕ ದಿನೇಶ್ ಕುಮಾರ್, ಪಟ್ಟಣವನ್ನು ಅಪರಾಧ ಮತ್ತು ಅಪಘಾತ ಮುಕ್ತವಾಗಿಸಲು ದಿನದ 24 ಗಂಟೆಗಳ ಕಾಲ ಪೊಲೀಸರನ್ನು ನಿಯೋಜಿಸಲಾಗುತ್ತದೆ ಎಂದಿದ್ದಾರೆ.
ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ರಹಿತವಾಗಿ ಚಾಲನೆ ಮಾಡಿದಲ್ಲಿ ಕ್ರಮಕ್ಕೆ ಮುಂದಾಗುವದರೊಂದಿಗೆ ಅವರಿಗೆ ಕಡ್ಡಾಯವಾಗಿ ಹೆಲ್ಮೆಟ್ ಧರಿಸಲು ಹಲವು ರೀತಿಯಲ್ಲಿ ಅರಿವು ಮೂಡಿಸಲಾಗಿದೆ. ಪ್ರಾರಂಭದಲ್ಲಿ ಹೆಲ್ಮೆಟ್ ಧರಿಸದೆ ಚಾಲನೆ ಮಾಡುತ್ತಿದ್ದ ದ್ವಿಚಕ್ರ ವಾಹನದ ಮಾಲೀಕರಿಗೆ ಚಾಕಲೆಟ್ ನೀಡುವ ಮೂಲಕ ಅರಿವು ಮೂಡಿಸಲಾಗಿತ್ತು. ಹೆದ್ದಾರಿ ಬದಿಯಲ್ಲಿ ನಿಯಮಬಾಹಿರವಾಗಿ ತಳ್ಳುವ ಗಾಡಿಗಳನ್ನು ನಿಲ್ಲಿಸುವದರ ಬಗ್ಗೆ ಈಗಾಗಲೆ ಪ.ಪಂ. ಅಧಿಕಾರಿಗಳಿಗೆ ಪತ್ರ ಬರೆದು ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ. ಪಟ್ಟಣದ ಹೃದಯ ಭಾಗದಲ್ಲಿ ರಸ್ತೆಯಲ್ಲಿ ನೀರು ನಿಲ್ಲದಂತೆ ಸಮರ್ಪಕ ಚರಂಡಿ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಸಂತೆ ದಿನ ಮಾರುಕಟ್ಟೆ ರಸ್ತೆ ವ್ಯಾಪ್ತಿಯಲ್ಲಿ ಸಮರ್ಪಕ ಸಂಚಾರಿ ವ್ಯವಸ್ಥೆಗೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಸರಕಾರಿ ಬಸ್ ನಿಲ್ದಾಣದ ಸಮೀಪ ನಿಯಮಬಾಹಿರವಾಗಿ ಖಾಸಗಿ ಮ್ಯಾಕ್ಸಿ ಕ್ಯಾಬ್ ವಾಹನಗಳ ನಿಲುಗಡೆ ನಿರ್ಬಂಧಿಸಲು ಜಿಲ್ಲಾಧಿಕಾರಿಗಳಿಗೆ ಇಲಾಖೆ ಮೂಲಕ ಮನವಿ ಸಲ್ಲಿಸಲಾಗಿದೆ ಎಂದು ದಿನೇಶ್ಕುಮಾರ್ ತಿಳಿಸಿದ್ದಾರೆ. ಪಟ್ಟಣದ ವರ್ತಕರು ಕಡ್ಡಾಯವಾಗಿ ತಮ್ಮ ಅಂಗಡಿ ಮುಂಗಟ್ಟುಗಳಿಗೆ ಸಿಸಿ ಕ್ಯಾಮೆರಾ ಅಳವಡಿಸುವ ಮೂಲಕ ಸಂಭಾವ್ಯ ಅಪರಾಧಗಳನ್ನು ತಡೆಗಟ್ಟಲು ಸಾಧ್ಯ ಅಲ್ಲದೆ ಎಲ್ಲಾ ದೇವಾಲಯ ಮಂದಿರ, ಚರ್ಚ್ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಸೂಚಿಸಲಾಗುವದು ಎಂದು ತಿಳಿಸಿದ್ದಾರೆ. ಕುಶಾಲನಗರದ ಕೆಲವು ರಸ್ತೆಗಳನ್ನು ಏಕಮುಖ ರಸ್ತೆಗಳನ್ನಾಗಿ ಪರಿವರ್ತಿಸಲು ಜಿಲ್ಲಾಧಿಕಾರಿಗಳಿಂದ ನೋಟಿಫಿಕೇಷನ್ ಜಾರಿಯಾಗಲಿದ್ದು ಇದನ್ನು ಕಟ್ಟುನಿಟ್ಟಾಗಿ ಅನುಸರಿಸಲು ಕ್ರಮಕೈಗೊಳ್ಳಲಾಗುವದು. ದಿನದಲ್ಲಿ ಬಿಸಿಲಿಗೆ ಮೈಯೊಡ್ಡಿ ನಿಲ್ಲಬೇಕಾದ ಸಂಚಾರಿ ಪೊಲೀಸರಿಗೆ ನೆರಳಿಗಾಗಿ ಕುಶಾಲನಗರ ಪಟ್ಟಣದಲ್ಲಿ ದಾನಿಗಳ ಸಹಕಾರದೊಂದಿಗೆ ಎರಡು ಕಡೆ ಚೌಕಿಗಳನ್ನು ನಿರ್ಮಿಸಲಾಗುತ್ತಿದೆ ಎಂದು ದಿನೇಶ್ಕುಮಾರ್ ಮಾಹಿತಿ ನೀಡಿದ್ದಾರೆ.