ಸುಂಟಿಕೊಪ್ಪ, ಏ. 25: ನಬಾರ್ಡ್ (ರಾಷ್ಟ್ರೀಯ ಕೃಷಿ ಗ್ರಾಮೀಣಾಭಿವೃದ್ಧಿ ಬ್ಯಾಂಕ್) ಕೊಡಗು ಇದರ ಪ್ರಾಯೋಜಕತ್ವದಲ್ಲಿ ದ ಕೂರ್ಗ್ ಫೌಂಡೇಷನ್, ಪಾಲಿಬೆಟ್ಟ. ಮತ್ತು ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರ ಸುಂಟಿಕೊಪ್ಪ ಇವರ ಸಹಭಾಗಿತ್ವದಲ್ಲಿ ಜೇನು ಕೃಷಿ, ತೋಟಗಾರಿಕೆ ಮತ್ತು ಲ್ಯಾಂಡ್ ಸ್ಕೇಪಿಂಗ್ (ಭೂದೃಶ್ಯ) ಕುರಿತು ವಿಶೇಷಚೇತನರಿಗೆ ಸ್ವ-ಉದ್ಯೋಗ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಸ್ವಸ್ಥ ಶಾಲೆಯ ಸಭಾಂಗಣದಲ್ಲಿ ನಡೆಯಿತು.
ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪೊನ್ನಂಪೇಟೆಯ ಡಿ.ಎಸ್.ಟಿ. ಯಂಗ್ ಸೈಂಟಿಸ್ಟ್, ಫಾರೆಸ್ಟ್ರೀ ಕಾಲೇಜು ಸಂಶೋಧಕರಾದ ಡಾ. ಕಾವೇರಿ ದೇವಯ್ಯ, ಮಾತನಾಡಿ, ನಮ್ಮ ಕಾಲೇಜು ವಿಶೇಷಚೇತನರಿಗೆ ಸಹಾಯ ಹಸ್ತ ನೀಡಲು ಸದಾ ಸಿದ್ಧವಿದೆ ಎಂದರು.
ಜೇನುಕೃಷಿ ತರಬೇತುದಾರ ಕೆ. ರಾಜು ಮಾತನಾಡಿ, ಶಿಬಿರದಲ್ಲಿ ಸ್ವಸ್ಥ ಶಾಲೆಯ ವೃತ್ತಿಪರ ತರಬೇತಿಯ ವಿಶೇಷಚೇತನ ಮಕ್ಕಳು ಬಹಳ ಉತ್ಸಾಹದಿಂದ ಭಾಗವಹಿಸಿ ತರಬೇತಿಯನ್ನು ಪಡೆದುಕೊಂಡಿದ್ದಾರೆ ಎಂದರು. ಮತ್ತೊಬ್ಬ ತರಬೇತುದಾರ ಮಂಜುನಾಥ್ ಈ ಹಿಂದೆ ಜೇನು ಕೃಷಿಯನ್ನು ಪ್ರಾರಂಭಿಸಿ ಯಶಸ್ಸನ್ನು ಕಂಡಿರುವ ವಿದ್ಯಾರ್ಥಿಗಳ ಬಗ್ಗೆ ಮಾಹಿತಿಯಿತ್ತರು.
ಅಧ್ಯಕ್ಷತೆ ವಹಿಸಿದ್ದ ಸ್ವಸ್ಥ ಶಾಲೆಯ ನಿರ್ದೇಶಕಿ ಆರತಿ ಸೋಮಯ್ಯ ಮಾತನಾಡಿದರು. ಕಾರ್ಯಕ್ರಮದಲ್ಲಿ ಶಿಬಿರದ ಬಗ್ಗೆ ಶಿಕ್ಷಕ ಮಂಜುನಾಥ್ ಪ್ರಾಸ್ತವಿಕ ನುಡಿಯಾಡಿದರು. ಶಿಕ್ಷಕಿ ಪವಿತ್ರ ಸ್ವಾಗತಿಸಿದರು, ಸಿ.ಬಿ.ಆರ್. ಸಂಯೋಜಕ ಮುರುಗೇಶ್ ನಿರೂಪಿಸಿ, ವಿದ್ಯಾರ್ಥಿನಿ ಪುಷ್ಪಲತಾ ಪ್ರಾರ್ಥಿಸಿದರು, ಶಿಕ್ಷಕಿ ಶೀತಲ್ ವಂದಿಸಿದರು.