ಕುಶಾಲನಗರ, ಏ. 24: ಮಕ್ಕಳು ಬಾಲ್ಯದಲ್ಲಿಯೇ ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಬೇಕು ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಂಚಾಲಕ ಎಂ.ಎನ್. ಚಂದ್ರಮೋಹನ್ ತಿಳಿಸಿದರು.
ಕುಶಾಲನಗರದಲ್ಲಿ ಟೀಂ ಆಟಿಟ್ಯೂಡ್ ಡ್ಯಾನ್ಸ್ ಸ್ಟುಡಿಯೋ ಆಶ್ರಯದಲ್ಲಿ ಮಕ್ಕಳಿಗೆ ಏರ್ಪಡಿಸಿದ್ದ ಬೇಸಿಗೆ ಶಿಬಿರದಲ್ಲಿ ಪರಿಸರ ಮತ್ತು ಜಲಮೂಲಗಳ ಬಗ್ಗೆ ಅರಿವು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಪ್ರತಿಯೊಬ್ಬರೂ ತಮ್ಮ ಹುಟ್ಟುಹಬ್ಬವನ್ನು ಗಿಡ ನೆಡುವ ಮೂಲಕ ಆಚರಿಸಬೇಕೆಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಂಗವಾಗಿ ಕಾವೇರಿ ಬಡಾವಣೆ ಉದ್ಯಾನವನದಲ್ಲಿ ಗಿಡಗಳನ್ನು ನೆಡುವ ಮೂಲಕ ಮಕ್ಕಳಲ್ಲಿ ಪರಿಸರ ಜಾಗೃತಿ ಮೂಡಿಸಲಾಯಿತು. ಈ ಸಂದರ್ಭ ಮಾತನಾಡಿದ ಸಂಸ್ಥೆಯ ಮುಖ್ಯಸ್ಥರಾದ ಕೆ.ಜಿ. ಕಿರಣ್, 20 ದಿನಗಳ ಕಾಲ ಮಕ್ಕಳಿಗೆ ಶಿಬಿರದಲ್ಲಿ ಜಾಗತಿಕ ತಾಪಮಾನ, ಪರಿಸರ ಪ್ರಜ್ಞೆ, ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವದರೊಂದಿಗೆ ಯೋಗ, ನೃತ್ಯ ಮತ್ತಿತರ ಚಟುವಟಿಕೆಗಳನ್ನು ನಡೆಸಲಾಗುವದು ಎಂದರು. ಇದೇ ಸಂದರ್ಭ ಶಿಬಿರಾರ್ಥಿಗಳು ಪರಿಸರ ಜಾಗೃತಿ ಬಗ್ಗೆ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಂಸ್ಥೆಯ ತರಬೇತುದಾರರಾದ ಮನೀಶ್, ಪವನ್ ಮತ್ತು ಪೋಷಕರು ಇದ್ದರು.