ವೀರಾಜಪೇಟೆ: ಹೆಗ್ಗಳ ಗ್ರಾಮದಲ್ಲಿರುವ ಅಯ್ಯಪ್ಪ ಮತ್ತು ಭಗವತಿ ದೇವಾಲಯದ ವಾರ್ಷಿಕ ಉತ್ಸವ ತಾ. 13 ರಿಂದ ಪ್ರಾರಂಭಗೊಂಡು ತಾ. 20 ರಂದು ಪಟ್ಟಣಿ ತಾ. 21 ರಂದು ದೇವರ ದೊಡ್ಡ ಹಬ್ಬ ಆಚರಿಸಲಾಯಿತು.
ಶತಮಾನಗಳ ಹಿಂದೆ, ಸುಮಾರು 103 ಎಕರೆ ವಿಸ್ತೀರ್ಣ ಇರುವ ದೇವರ ಕಾಡಿನಲ್ಲಿ ಬಂದು ನೆಲೆಗೊಂಡಿರುವ ಅಯ್ಯಪ್ಪ ದೇವರಿಗೆ, ಉತ್ಸವ ದಿನದಂದು ವಿಶೇಷ ಪೂಜೆಗಳು, ಅಭಿಷೇಕ, ಮಹಾಪೂಜಾ ಸೇವೆ ನಂತರ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಈ ಸಂದರ್ಭ ಅಯ್ಯಪ್ಪ ಮತ್ತು ಭಗವತಿ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರುಗಳು ಹಾಜರಿದ್ದರು. ಉತ್ಸವದಲ್ಲಿ ಆರ್ಜಿ, ಬೇಟೋಳಿ, ಹೆಗ್ಗಳ ಗ್ರಾಮಸ್ಥರು ಸೇರಿದಂತೆ ಇತರೆಡೆಗಳಿಂದಲೂ ಭಕ್ತಾದಿಗಳು ಆಗಮಿಸಿದ್ದರು.
ದಂಡಿನ ಮಾರಿಯಮ್ಮ
ವೀರಾಜಪೇಟೆ ಶಿವಕೇರಿಯಲ್ಲಿರುವ ಶ್ರೀ ಅದಿ ದಂಡಿನ ಮಾರಿಯಮ್ಮ ದೇವಿ ಮತ್ತು ಚೌಂಡಿ ದೇವಿಯ ವಾರ್ಷಿಕ ಮಹೋತ್ಸವವು ತಾ. 30ರಂದು ಗಣಪತಿ ಹೋಮ, ಕಲಶ ಪೂಜೆ, ಮಧ್ಯಾಹ್ನ ಮಹಾಪೂಜೆ ಮತ್ತು ಮಂಗಳಾರತಿ, ಅನ್ನಸಂತರ್ಪಣೆ, ನಂತರ ಶ್ರೀ ದೇವಿಯು ಪಲ್ಲಕ್ಕಿ ಅಲಂಕೃತ ಮಂಟಪದೊಂದಿಗೆ ಮುಖ್ಯಬೀದಿಗಳಲ್ಲಿ ಸಂಚರಿಸಿ ದೇವಾಲಯಕ್ಕೆ ತಲುಪಲಿದೆ. ಅಂದು ರಾತ್ರಿ ತಳಿಗೆ ಪ್ರಸಾದ, ಆರತಿ ಪೂಜೆ ಮಹಾಪೂಜೆ ಮತ್ತು ದೇವಿಗೆ ಮಹಾಮಂಗಳಾರತಿ ನಡೆಯಲಿದೆ. ಮೇ 1 ರಂದು ದೇವಿಗೆ ವಿಶೇಷ ಪೂಜೆ ಮಧ್ಯಾಹ್ನ ನೈವೇದ್ಯ ಅನ್ನ ಸಂತರ್ಪಣೆ ಜರುಗುವದು, ಮೇ 3ರಂದು ದೇವಿ ವಿಶೇಷ ಪೂಜೆ, ಮಧ್ಯಾಹ್ನ ದೇವಿಗೆ ಮಹಾಪೂಜೆ ಮಂಗಳಾರತಿ ಮತ್ತು ಪ್ರಸಾದ ವಿತರಣೆ ನಡೆಯಲಿದೆ.
ಶನಿವಾರಸಂತೆ: ಸಮೀಪದ ಮನೆಹಳ್ಳಿ ತಪೋವನದಲ್ಲಿ ಶ್ರೀಗುರು ಸಿದ್ಧವೀರೇಶ್ವರ ಸ್ವಾಮಿಯ ಬ್ರಹ್ಮ ತಥೋತ್ಸವ ತಾ. 21 ರಂದು ರಾತ್ರಿ ಶ್ರದ್ಧಾಭಕ್ತಿಯಿಂದ ವಿಜೃಂಭಣೆಯಿಂದ ನೆರವೇರಿತು. ತಪೋವನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಈ ಸಂದರ್ಭ ವೀರಾಜಪೇಟೆ ಅರಮೇರಿ ಕಳಂಚೇರಿ ಮಠಾಧಿಪತಿ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ನೂರಾರು ಸ್ಪರ್ಧೆಗಳ ಇತಿಹಾಸವಿರುವ ಶ್ರೀಗುರು ಸಿದ್ಧವೀರೇಶ್ವರ ಸ್ವಾಮಿಯ ಸನ್ನಿದಾನದಲ್ಲಿ ಪ್ರತಿವರ್ಷ ಏಪ್ರಿಲ್ ತಿಂಗಳ ಹುಣ್ಣಿಮೆಯ 3ನೇಯ ದಿನದಲ್ಲಿ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ನೆರವೇರುತ್ತದೆ. 3 ದಿನಗಳಲ್ಲಿ ವಿಶೇಷ ರೀತಿಯ ಪೂಜಾ ಕಾರ್ಯಕ್ರಮಗಳು ಜರಗುತ್ತಿದ್ದು, ಭಕ್ತಾದಿಗಳು ಇಷ್ಟಾರ್ಥ ಸಿದ್ಧಿಸುವ ಶಕ್ತಿಯನ್ನು ಈ ಪುಣ್ಯ ಕ್ಷೇತ್ರ ಹೊಂದಿದೆ ಎಂದರು. ಜಾತ್ರಾ ಮಹೋತ್ಸವದ ಮುಖಂಡ ರಮೇಶ್ ಮಾತನಾಡಿ, ದಟ್ಟ ಅರಣ್ಯದ ಮಧ್ಯ ಭಾಗದಲ್ಲಿರುವ ತಪೋವನಕ್ಕೆ ಭಕ್ತರು ಹಿಂದೆ ಕಾಲುದಾರಿಯ ಮೂಲಕ ಆಗಮಿಸಿ ಪೂಜೆ ಪುರಸ್ಕಾರ ನೆರವೇರಿಸುತ್ತಿದ್ದರು. ಬದಲಾದ ಕಾಲಮಾನದಲ್ಲಿ ಕ್ಷೇತ್ರ ಅಭಿವೃದ್ಧಿ ಹೊಂದುತ್ತಿದೆ ಎಂದು ರಾರೈಸಿದರು.
ತಪೋವನ ಮಠಾಧೀಶ ಮಹಾಂತ ಶಿವಲಿಂಗ ಸ್ವಾಮೀಜಿ, ಬೆಟ್ಟದಪುರ ಮಠದ ಚೆನ್ನಬಸವ ದೇಶಿಕೇಂದ್ರ ಸ್ವಾಮೀಜಿ, ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ, ತೊರೆನೂರು ಮಠದ ಮಲ್ಲೇಶ ಸ್ವಾಮೀಜಿ, ಬಸವಪಟ್ಟಣದ ತೋಟದಾರ್ಯ ಸಂಸ್ಥಾನ ಮಠದ ಸ್ವತಂತ್ರ ಬಸವಲಿಂಗ ಶಿವಯೋಗಿ ಸ್ವಾಮೀಜಿ, ಕಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ, ಪಿರಿಯಾಪಟ್ಟಣ ಶಾಸಕ ಕೆ. ಮಹದೇವ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್, ತಪೋವನ ಕ್ಷೇತ್ರ ಅಭಿವೃದ್ಧಿ ಸೇವಾ ಮಂಡಳಿಯ ಪದಾಧಿಕಾರಿಗಳು, ಸದಸ್ಯರು ಹಾಜರಿದ್ದರು.
ಮಡಿಕೇರಿ: ತಾ. 27 ರಂದು ಮಡಿಕೇರಿಯ ಶ್ರೀ ಆಂಜನೇಯ ದೇವಸ್ಥಾನದಲ್ಲಿ 3ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ನೀಲೇಶ್ವರ ಪದ್ಮನಾಭ ತಂತ್ರಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 8 ಗಂಟೆಗೆ ಗಣಹೋಮದೊಂದಿಗೆ ಕಲಶಾಭಿಷೇಕ ಮತ್ತು ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ಕಾರ್ಯಕ್ರಮ ನಡೆಯಲಿದೆ. ಸಂಜೆ 6 ಗಂಟೆಯಿಂದ ಪುತ್ತೂರಿನ ಧೀಶಕ್ತಿ ಮಹಿಳಾ ಯಕ್ಷಕೂಟದಿಂದ ಶಿವಭಕ್ತ ವೀರಮಣಿ ಎಂಬ ಯಕ್ಷಗಾನ ತಾಳಮದ್ದಲೆ ಕಾರ್ಯಕ್ರಮ ಏರ್ಪಡಿಸಲಾಗಿದೆ.