ಸೋಮವಾರಪೇಟೆ, ಏ. 24: ಪಟ್ಟಣದಲ್ಲಿ ಸಂತೆ ದಿನವಾದ ಸೋಮವಾರದಂದು ವಾಹನ ಸಂಚಾರ, ನಿಲುಗಡೆಯಲ್ಲಿ ಅವ್ಯವಸ್ಥೆಗಳು ಕಂಡುಬರುತ್ತಿದ್ದು, ಪಾದಚಾರಿಗಳು, ಇತರ ವಾಹನ ಸವಾರರು ಪರದಾಡುವ ಸನ್ನಿವೇಶ ಸೃಷ್ಟಿಯಾಗುತ್ತಲೇ ಇವೆ.
ಪಟ್ಟಣದ ಪೊಲೀಸರು ಸೇರಿದಂತೆ ಗೃಹ ರಕ್ಷಕದಳದ ಸಿಬ್ಬಂದಿಗಳು ಸುಗಮ ಸಂಚಾರ, ವ್ಯವಸ್ಥಿತ ವಾಹನ ನಿಲುಗಡೆಗೆ ಶಕ್ತಿಮೀರಿ ಪ್ರಯತ್ನಿಸುತ್ತಿದ್ದರೂ ಕೆಲವೊಮ್ಮೆ ಅವ್ಯವಸ್ಥೆಗಳು ಕಂಡುಬರುತ್ತಲೇ ಇವೆ. ಸಂತೆ ದಿನವಾದ ಸೋಮವಾರದಂದು ಎಲ್ಲೆಂದರಲ್ಲಿ ವಾಹನ ನಿಲುಗಡೆಗೊಳಿಸುತ್ತಿರುವದರಿಂದ ಸಂಚಾರ ವ್ಯವಸ್ಥೆಯಲ್ಲಿ ಅಸ್ತವ್ಯಸ್ಥವಾಗುತ್ತಿದೆ.
ಇಲ್ಲಿನ ಕ್ಲಬ್ರಸ್ತೆ, ಸಿ.ಕೆ. ಸುಬ್ಬಯ್ಯ ರಸ್ತೆ, ಮುಖ್ಯರಸ್ತೆ, ತ್ಯಾಗರಾಜ ರಸ್ತೆಗಳಲ್ಲಿ ಏಕಮುಖ ಸಂಚಾರವಿದ್ದರೆ, ಮಡಿಕೇರಿ ರಸ್ತೆ, ಮಹದೇಶ್ವರ ಬಡಾವಣೆ ರಸ್ತೆ, ತಾಲೂಕು ಪಂಚಾಯಿತಿಯ ಮುಂಭಾಗದ ರಸ್ತೆ, ಮಹಾತ್ಮಾಗಾಂಧಿ ವೃತ್ತದಿಂದ ಆನೆಕೆರೆ ರಸ್ತೆಗಳಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಹೊರಭಾಗದಿಂದ ಆಗಮಿಸುವ ಹಲವಷ್ಟು ವಾಹನಗಳು ಪಟ್ಟಣದೊಳಗೆ ಆಗಮಿಸದೇ ಮಡಿಕೇರಿ ರಸ್ತೆ ಮೂಲಕ ಶನಿವಾರಸಂತೆ, ಕೊಣನೂರು, ಮಡಿಕೇರಿ ಭಾಗಗಳಿಗೆ ತೆರಳುತ್ತವೆ. ಈ ರಸ್ತೆಯಲ್ಲಿ ಎರಡೂ ಬದಿಯಲ್ಲಿ ವಾಹನಗಳನ್ನು ನಿಲ್ಲಿಸುತ್ತಿರುವದರಿಂದ ಸಾರ್ವಜನಿಕರ ವಾಹನಗಳ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿದೆ. ಸಂತೆ ದಿನದಂದು ಈ ರಸ್ತೆಯ ಒಂದು ಬದಿಯಲ್ಲಿ ಮಾತ್ರ ವಾಹನಗಳ ನಿಲುಗಡೆಗೆ ಅವಕಾಶ ಕಲ್ಪಿಸಬೇಕೆಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.