ಕೂಡಿಗೆ, ಏ. 24: ಸಮೀಪದ ಕೂಡುಮಂಗಳೂರು ಮತ್ತು ಮುಳ್ಳುಸೋಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿನ್ನೆ ರಾತ್ರಿ ಸುರಿದ ಭಾರೀ ಗಾಳಿ ಮತ್ತು ಮಳೆಗೆ ಈ ಭಾಗದ 25ಕ್ಕೂ ಹೆಚ್ಚು ಮನೆಗಳ ಸಿಮೆಂಟ್ ಶೀಟ್ಗಳು ಹಾಗೂ ಹೆಂಚುಗಳು ಹಾರಿ ಹೋಗಿವೆ.ಮುಳ್ಳುಸೋಗೆ ಗ್ರಾಮ ಪಂಚಾಯ್ತಿ ಗುಮ್ಮನಕೊಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹೆಂಚುಗಳು ನೆಲಕ್ಕುರುಳಿದ್ದು, ಭಾರೀ ನಷ್ಟವುಂಟಾಗಿದೆ. ನಾಗಮ್ಮನ ಮಂಟಿಯಲ್ಲಿ ನಾಲ್ಕು ಮನೆಗಳು, ಕೂಡುಮಂಗಳೂರು ಗ್ರಾಮ ಪಂಚಾಯಿತಿಯ ಕೂಡ್ಲೂರು ಗ್ರಾಮದ ರಾಜಪ್ಪ, ಮರಿಯಪ್ಪ, ಶ್ರೀನಿವಾಸ್, ಸುಂದರ್ ಅವರ ಮನೆಗಳು, ಬಸವೇಶ್ವರ ಬಡಾವಣೆಯ ತಮ್ಮಯ್ಯ, ಶಂಷುದ್ದೀನ್, ಮಂಗಳ ಅವರ ಮನೆಗಳ ಮೇಲ್ಛಾವಣಿ, ನವಗ್ರಾಮದ ಶ್ರೀನಿವಾಸ, ಕಿರಣ್, ಸ್ವಾಮಿನಾಯಕ, ರಾಜ ಅಯ್ಯರ್ ಮತ್ತು ವೀರಭೂಮಿ ಮಂಟಿಯಲ್ಲಿ ನಾಲ್ಕು ಮನೆಗಳ ಮೇಲ್ಛಾವಣಿ ಹಾರಿಹೋಗಿದ್ದು, ಭಾರೀ ನಷ್ಟವುಂಟಾಗಿದೆ. ಮನೆಯಲ್ಲಿದ್ದ ಪರಿಕರಗಳು,
(ಮೊದಲ ಪುಟದಿಂದ) ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ದಿನಸಿ ವಸ್ತುಗಳಿಗೆ ಹಾನಿಯಾಗಿವೆ.
ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾನಿಯಾಗಿರುವ ಮನೆಗಳ ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯಿಷಾ ಅವರು ಭೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದುಕೊಂಡಿದ್ದಾರೆ.
ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾನಿಯಾಗಿರುವ ಶಾಲೆಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಾಜಶೇಖರ್, ಜಿಲ್ಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಪಿ.ಎಸ್. ಮಚ್ಚಾಡೋ, ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜಯ್ಯ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುಶಾಲನಗರ ಹೋಬಳಿ ಕಂದಾಯ ನಿರೀಕ್ಷಕ ಮಧುಸೂದನ್, ಗ್ರಾಮಲೆಕ್ಕಿಗ ಗೌತಮ್, ಸಚಿನ್ ಅವರು ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿ ಮೇಲಾಧಿಕಾರಿಗಳ ಗಮನಕ್ಕೆ ತಂದು ಮಾಹಿತಿ ನೀಡಿದ್ದಾರೆ.