ಗೋಣಿಕೊಪ್ಪ ವರದಿ, ಎ. 21 : ಕೊಡಗು ಹಿಂದು ಮಲಯಾಳಿ ಸಮಾಜ ಆಯೋಜಿಸಿದ್ದ ಕೊಡಗು ಹಿಂದೂ ಫುಟ್ಬಾಲ್ ಕಪ್‍ನ್ನು ಒಂಟಿಯಂಗಡಿ ಮಾತೃಭೂಮಿ ಟೈಗರ್ಸ್ ತಂಡ ಗೆದ್ದುಕೊಳ್ಳುವ ಮೂಲಕ ಹಿಂದೂ ಫುಟ್ಬಾಲ್ ಕಪ್ ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿದೆ. ಫೈನಲ್‍ನಲ್ಲಿ ಸೋಲುನು ಭವಿಸಿದ ಪಾಲಿಬೆಟ್ಟ ರೋಜರ್ ತಂಡವು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಭಾನುವಾರ ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಫೈನಲ್ ಹಣಾಹಣಿಯಲ್ಲಿ ಮಾತೃಭೂಮಿ ತಂಡವು ಕೊನೆಯ ನಿಮಿಷದಲ್ಲಿ 1 ಗೋಲು ಬಾರಿಸಿ ಗೆಲವು ಪಡೆದುಕೊಂಡಿತು. ಮಾತೃಭೂಮಿ ಪರ ರತೀಶ್ ಆಟಗಾರ ಬಾರಿಸಿದ ಏಕೈಕ ಗೋಲು ಚಾಂಪಿಯನ್‍ಗಿರಿ ದಕ್ಕಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ಉಭಯ ತಂಡಗಳು ಉತ್ತಮ ಆಟ ಪ್ರದರ್ಶಿಸಿತು.

ಸೆಮಿ ಫೈನಲ್‍ನಲ್ಲಿ ಪಾಲಿಬೆಟ್ಟ ರೋಜರ್ ತಂಡವು ಸುಂಟಿಕೊಪ್ಪ ಮಿಡ್‍ಸಿಟಿ ತಂಡವನ್ನು 1-0 ಗೋಲುಗಳ ಅಂತರದಲ್ಲಿ ಸೋಲಿಸಿತು. ಮತ್ತೊಂದು ಸೆಮಿಯಲ್ಲಿ ಒಂಟಿ ಯಂಗಡಿ ಮಾತೃಭೂಮಿ ಟೈಗರ್ಸ್ ತಂಡವು ಮರಗೋಡು ವೈಷ್ಣವಿ ತಂಡವನ್ನು 1-0 ಗೋಲು ಗಳಿಂದ ಮಣಿಸಿ ಫೈನಲ್ ಪ್ರವೇಶ ಪಡೆದುಕೊಂಡಿತು.

ಬೆಸ್ಟ್ ಅಪ್ ಕಮಿಂಗ್ ಟೀಂ ಪ್ರಶಸ್ತಿಯನ್ನು ಜೋಡುಬೀಟಿ ಶಾಜಿ ತಂಡ ಪಡೆದುಕೊಂಡಿತು. ಬೆಸ್ಟ್ ಗೋಲ್ ಕೀಪರ್ ಆಗಿ ರೋಜರ್ ತಂಡ ಮಹಾದೇವ್, ಬೆಸ್ಟ್ ಫಾರ್ವರ್ಡ್ ಆಗಿ ಮಿಡ್‍ಸಿಟಿ ತಂಡದ ದಿವಾಕರ್, ಶಿಸ್ತುಬದ್ಧ ತಂಡವಾಗಿ ಮರಗೋಡು ವೈಷ್ಣವಿ ತಂಡ, ಉತ್ತಮ ಆಟಗಾರ ಪ್ರಶಸ್ತಿಯನ್ನು ರೋಜರ್ ತಂಡ ವಿನೋದ್, ಹೆಚ್ಚು ಗೋಲು ಬಾರಿಸಿದ ಆಟಗಾರನಾಗಿ ವೈಷ್ಣವಿ ತಂಡದ ಆಟಗಾರ ಹೇಮಂತ್ ಪ್ರಶಸ್ತಿ ಪಡೆದುಕೊಂಡರು. ತೀರ್ಪುಗಾರರಾಗಿ ರಾಜುರೈ, ರಾಘವೇಂದ್ರ, ಶೇಷಪ್ಪ, ತಾಂತ್ರಿಕ ವರ್ಗ ಸಮಿತಿ ಸಂಚಾಲಕರಾಗಿ ವಿನೋದ್ ಕಾರ್ಯನಿರ್ವಹಿಸಿದರು.

ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಫುಟ್‍ಭಾಲ್ ಕ್ರೀಡಾಪಟುಗಳಿದ್ದರೂ ಅವರನ್ನು ಪರಿಗಣಿಸಲಾಗುತ್ತಿಲ್ಲ. ಆದ್ದರಿಂದ ಕೊಡಗಿನಲ್ಲಿ ಫುಟ್ಭಾಲ್ ಅಕಾಡೆಮಿ ಸ್ಥಾಪನೆಗೆ ಒಂದಾಗಿ ಹೋರಾಟ ಮಾಡುವದಾಗಿ ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಸಿ. ಕೆ. ಬೋಪಣ್ಣ ಹೇಳಿದರು.

ಪೊನ್ನಂಪೇಟೆ ಪಟ್ಟಣದ ಸಹಕಾರ ಬ್ಯಾಂಕ್ ಉಪಾಧ್ಯಕ್ಷ ಕೋಳೇರ ದಯಾ ಚೆಂಗಪ್ಪ ಮಾತನಾಡಿ, ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಫುಟ್ಭಾಲ್ ಅಕಾಡೆಮಿ ಅವಶ್ಯ ಎಂದರು. ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ, ಸಂಘದಲ್ಲಿ ರಾಜಕೀಯ ಬೆರೆಸಬಾರದು ಎಂದರು.

ಸನ್ಮಾನ

ಕ್ರೀಡಾಕೂಟದ ಪ್ರಯುಕ್ತ ಹಲವು ಸಾಧಕರುಗಳನ್ನು ಸನ್ಮಾನಿಸಲಾಯಿತು. ಹಿರಿಯ ಅಂತರಾಷ್ಟ್ರೀಯ ಓಟಗಾರ ಪೆಮ್ಮಂಡ ಎಂ. ಅಪ್ಪಯ್ಯ, ಶೌರ್ಯಚಕ್ರ ಪ್ರಶಸ್ತಿ ವಿಜೇತ ಯೋಧ ಎಚ್. ಎನ್. ಮಹೇಶ್, ಮಾಧ್ಯಮ ಕ್ಷೇತ್ರದಲ್ಲಿ ಜಿಲ್ಲಾ ಪ್ರಶಸ್ತಿ ವಿಜೇತರುಗಳಾದ ಸಣ್ಣುವಂಡ ಕಿಶೋರ್ ನಾಚಪ್ಪ, ಎಚ್. ಕೆ. ಜಗದೀಶ್, ಯುವ ಕ್ರೀಡಾ ಸಾಧಕರು ಗಳಾದ ಟಿ. ಬಿ. ಅಶ್ವಿನಿ ಹಾಗೂ ಕೆ. ಎಸ್. ಐಶ್ವರ್ಯ ಅವರುಗಳು ಸನ್ಮಾನ ಸ್ವೀಕರಿಸಿದರು.

ಮಲಯಾಳಿ ಸಮಾಜ ಅಧ್ಯಕ್ಷ ಪಿ. ಎಸ್. ಶರತ್‍ಕಾಂತ್, ಗೌರವ ಅಧ್ಯಕ್ಷ ಪಿ. ಭಾಸ್ಕರನ್, ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಚೊಟ್ಟೆಕ್ ಮಾಡ ರಾಜೀವ್ ಬೋಪಯ್ಯ, ಉದ್ಯಮಿ ಪ್ರಕಾಶ್, ಕಾಫಿ ಬೆಳೆಗಾರ ಕೆ. ವೈ. ಸಮ್‍ಜಿತ್, ದಾನಿಗಳಾದ ಪ್ರಭಾಕರನ್, ಕೆ. ಡಿ. ಸುನಿಲ್, ಪುಷ್ಪಾ ಪುರುಷೋತ್ತಮ್, ಪಿ. ಎಸ್. ಸಂಜೀವ, ಕಾಫಿ ಬೆಳೆಗಾರ ಎಸ್. ಟಿ. ಸುರೇಂದ್ರ ಬಹುಮಾನ ವಿತರಣೆ ಮಾಡಿದರು. ಸಮಾಜದ ಪ್ರಧಾನ ಕಾರ್ಯದರ್ಶಿ ವಿ. ವಿ. ಅರುಣ್ ಕುಮಾರ್, ಖಜಾಂಜಿ ಸುಬ್ರಮಣಿ, ಪ್ರಮುಖರುಗಳಾದ ಕೆ. ಬಿ. ಸಂಜೀವ್ ಉಪಸ್ಥಿತರಿದ್ದರು. ಜ್ಯೋತಿ ಅರುಣ್ ನಿರೂಪಿಸಿದರು. -ಸುದ್ದಿಪುತ್ರ