ಶ್ರೀಮಂಗಲ, ಏ. 21: ಮಡಿಕೇರಿಯ ತಿರಿಬೊಳ್‍ಚ ಕೊಡವ ಸಂಘಟನೆಯ ವತಿಯಿಂದ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಇತ್ತೀಚೆಗೆ ‘ಕೊಡವ ಮಂಗಲತ್ ನೀರ್ ಎಡ್‍ಪಲ್ಲಿ ಮೂಡಿನ ತಡ್‍ತಿತ್ ಆಡುವೊ’ (ಗಂಗಾಪೂಜೆ) ವಿಚಾರದ ಕುರಿತು ವಿಶೇಷ ಜನಜಾಗೃತಿ ಕಾರ್ಯಕ್ರಮ ಹಾಗೂ ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮೂಲ ಸಂಸ್ಕøತಿಯ ಬದಲಾವಣೆಯಿಂದ ಆಗುತ್ತಿರುವ ವ್ಯತಿರಿಕ್ತ ಪರಿಣಾಮ, ಮದುವೆ ಸಂದರ್ಭದಲ್ಲಿ ಮದ್ಯ ಬಳಕೆ ಹೆಚ್ಚಾಗುತ್ತಿರುವದು, ಮತ್ತಿತರ ಅಂಶಗಳ ಬಗ್ಗೆ ಪ್ರಮುಖರು ಆತಂಕ ವ್ಯಕ್ತಪಡಿಸಿ ಮೂಲ ಪದ್ಧತಿಗೆ ಧಕ್ಕೆಯಾಗಬಾರದು. ಈ ನಿಟ್ಟಿನಲ್ಲಿ ಜಾಗೃತಿ ಮೂಡಿಸುವದರ ಮೂಲಕ ಸುಧಾರಣೆ ತರುವದು ಅಗತ್ಯವಾಗಿದೆ ಎಂಬ ಅಭಿಪ್ರಾಯವನ್ನು ಹಂಚಿಕೊಂಡರು.

ತಿರಿಬೊಳ್‍ಚ ಸಂಘದ ಅಧ್ಯಕ್ಷೆ ಕೊಡವ ಅಕಾಡೆಮಿಯ ಮಾಜಿ ಅಧ್ಯಕ್ಷೆಯಾಗಿರುವ ಉಳ್ಳಿಯಡ ಡಾಟಿ ಪೂವಯ್ಯ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.

ಕೊಡವ ಮದುವೆ ಪದ್ಧತಿಯಲ್ಲಿ ಗಂಗಾಪೂಜೆ ಪದ್ಧತಿ ಹಲವು ದಶಕದಿಂದ ಬದಲಾವಣೆಗೊಂಡಿದ್ದು, ಇದು ಮೂಲ ಪದ್ಧತಿಗೆ ವಿರುದ್ಧವಾಗಿದೆ. ಕೆಲವರು ತಮ್ಮ ಅನುಕೂಲಕ್ಕಾಗಿ ಬದಲಾವಣೆ ಮಾಡಿಕೊಂಡ ಪದ್ಧತಿಯೇ ಈಗಲೂ ನಡೆಯುತ್ತಿದ್ದು, ಇದರ ಬಗ್ಗೆ ಜನಾಂಗದಲ್ಲಿ ಅರಿವು ಮೂಡಿಸಿ ಸುಧಾರಣೆ ತರುವದು ಅಗತ್ಯವಾಗಿದೆ ಎಂದು ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಳ್ಳಿಯಡ ಪೂವಯ್ಯ ಅವರು ಹೇಳಿದರು.

ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್‍ಬೋಪಯ್ಯ ಅವರು ಮಾತನಾಡಿ, ಕೊಡವ ಸಮುದಾಯದ ಮದುವೆಯಲ್ಲಿ ಗಂಗಾಪೂಜೆ ಸಂದರ್ಭ ವಧುವನ್ನು ತಡೆದು ಕುಣಿಯುವ ಹಕ್ಕು ವಧುವಿನ ಮೈದುನ ಮತ್ತು ವರನ ಚಿಕ್ಕಪ್ಪ ಹಾಗೂ ದೊಡ್ಡಪ್ಪ ಅವರ ಮಕ್ಕಳಿಗೆ ಮಾತ್ರ ಇರುತ್ತದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಯಾವದೇ ಸಂಬಂಧ ಇಲ್ಲದವರು ಸಹ ಸಮಯ ಮಿತಿ ಇಲ್ಲದೆ ಕುಣಿಯುವದು ಕಂಡು ಬರುತ್ತಿದ್ದು, ಇದು ವಧುವಿಗೆ ಕಿರುಕುಳವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೊಡವ ಸಂಸ್ಕøತಿಗೆ ಕಳಂಕ ತರುತ್ತಿರುವ ಇಂತಹ ಆಚರಣೆಗಳ ಬಗ್ಗೆ ಕೊಡವ ಸಮಾಜ ಹಾಗೂ ಸಮಾಜದ ಮುಖಂಡರು ಕಾರ್ಯ ಪ್ರವೃತ್ತರಾಗಬೇಕು ಎಂದು ಅವರು ಹೇಳಿದರು. ತಿರಿಬೊಳಚ ಕೊಡವÀ ಸಂಘದ ಸ್ಥಾಪಕ ಅಧ್ಯಕ್ಷೆ ಉಳ್ಳಿಯಡ ಡಾಟಿ ಪೂವಯ್ಯ ಕೊಡವ ಸಂಸ್ಕøತಿಯ ವಿಶೇಷತೆಯ ಭಾಗವಾದ ಮದುವೆಯಲ್ಲಿ ಪದ್ಧತಿ ಆಚಾರ-ವಿಚಾರಗಳು ಮೂಲ ಸಂಸ್ಕøತಿಗೆ ಧಕ್ಕೆ ತರುತ್ತಿದ್ದು, ಇವುಗಳ ಬಗ್ಗೆ ಜಾಗೃತಿ ಮೂಡಿಸಿ ಸುಧಾರಣೆ ತರುವದು ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಮೂಲ ಸಂಸ್ಕøತಿಯ ಮಹತ್ವ ಹಾಗೂ ಈ ಬಗ್ಗೆ ಸುಧಾರಣೆ ಮಾಡಲು ಜಾಗೃತಿ ಮೂಡಿಸಲು ಸಂಘದಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೇಳಿದರು. ಈ ಸಂದರ್ಭ ವಿಚಾರ ಮಂಡಿಸಿದ ಉಪನ್ಯಾಸಕಿ ಚೋಕಿರ ಅನಿತಾ ದೇವಯ್ಯ ಅವರು ನೀರ್ ಎಡ್‍ಪೊ ಸಂದರ್ಭದಲ್ಲಿ ಆಗುತ್ತಿರುವ ಬದಲಾವಣೆ ಹಾಗೂ ಮೂಲ ಪದ್ಧತಿಯ ಮಹತ್ವದ ಕುರಿತು ಬೆಳಕು ಚೆಲ್ಲಿದರು.

ವೇದಿಕೆಯಲ್ಲಿ ಮುಖ್ಯ ಅಥಿತಿಯಾಗಿ ಅಕಾಡೆಮಿ ಸದಸ್ಯೆ ಹಂಚೆಟ್ಟಿರ ಫ್ಯಾನ್ಸಿಮುತ್ತಣ್ಣ, ಬೆಂಗಳೂರು ಕೊಡವ ಸಮಾಜದ ಮಾಜಿ ಕಾರ್ಯದರ್ಶಿ ಕುಕ್ಕೇರ ಜಯಚಿಣ್ಣಪ್ಪ, ಚೋಕಿರ ಅನಿತಾದೇವಯ್ಯ ಹಾಜರಿದ್ದರು. ರಾಜೀವ್ ಬೋಪಯ್ಯ ಸ್ವಾಗತಿಸಿ, ಕೂಪದಿರ ಜೂನವಿಜಯ್ ಮತ್ತು ಬೊಟ್ಟೊಳಂಡ ನಿವ್ಯದೇವಯ್ಯ ಪ್ರಾರ್ಥಿಸಿ, ವಂದಿಸಿದರು.

ಕಾರ್ಯಾಗಾರದಲ್ಲಿ ವ್ಯಕ್ತಗೊಂಡ ಬೆಂಬಲ

ಕೊಡವ ಮದುವೆ ಇತರೆ ಸಮಾರಂಭಗಳಲ್ಲಿ ಮದ್ಯ ಬಳಕೆಯಿಂದ ಆರ್ಥಿಕವಾಗಿ ನಷ್ಟವಾಗುತ್ತಿದ್ದು, ಇದು ಜನಾಂಗದ ಹಿತಾಸಕ್ತಿಗೆ ಧಕ್ಕೆ ಉಂಟು ಮಾಡುತ್ತಿದೆ. ಇದರೊಂದಿಗೆ ಉಳ್ಳವರು, ಇಲ್ಲದವರ ನಡುವೆ ಪ್ರತಿಷ್ಟೆಯಾಗಿ ಪರಿಣಮಿಸಿದೆ. ಗಂಗಾಪೂಜೆ ಸಂದರ್ಭ ಸಮಯದ ಮಿತಿ ಇಲ್ಲದೇ ಸಮಾರಂಭ ನಡೆಯುವಂತಾಗಿ ಕೊಡವ ಜನಾಂಗದ ವಿಶಿಷ್ಟ ಸಂಸ್ಕøತಿಗೆ ಕಳಂಕ ತರುತ್ತಿದೆ. ಆದ್ದರಿಂದ ಮದ್ಯ ಬಳಕೆಯನ್ನು ಮದುವೆ ಸಮಾರಂಭದಲ್ಲಿ ನಿರ್ಬಂಧಿಸಿ, ದುಂದು ವೆಚ್ಚಕ್ಕೆ ಕಡಿವಾಣ ಹಾಕಿ, ಸರಳವಾಗಿ ಆಚರಿಸುವ ನಿಟ್ಟಿನಲ್ಲಿ ಜನಾಂಗದವರು ಗಂಭೀರವಾಗಿ ಚಿಂತಿಸುವ ಬಗ್ಗೆ ಕಾರ್ಯಾಗಾರದಲ್ಲಿ ವ್ಯಾಪಕ ಅಭಿಪ್ರಾಯ ವ್ಯಕ್ತವಾಯಿತು.

ಉಪನ್ಯಾಸಕ ಚೊಟ್ಟೆಯಂಡಮಾಡ ವಿಶ್ವನಾಥ್ ಅವರು ಮಾತನಾಡಿ, ಕೊಡವ ಮದುವೆಯಲ್ಲಿ ಗಂಗಾಪೂಜೆ ಸಂದರ್ಭ ಮದ್ಯ ಬಳಕೆ ನಿರ್ಬಂಧಿಸಿರುವ ಅಮ್ಮತ್ತಿ ಕೊಡವ ಸಮಾಜದ ಕ್ರಮ ಸ್ವಾಗತಾರ್ಹವಾಗಿದೆ. ಅದೇ ರೀತಿ ಗಂಗಾ ಪೂಜೆ ಸಂದರ್ಭ ಮದ್ಯ ಬಳಕೆ ಅಥವಾ ಸಂಪೂರ್ಣ ಮದುವೆಗೆ ಮದ್ಯ ನಿರ್ಬಂಧಿಸುವ ಬಗ್ಗೆ ಸಮಾಜಗಳು ಕೈಗೊಳ್ಳುವ ತೀರ್ಮಾನಕ್ಕೆ ಬದ್ಧವಾಗಿರುವ ಬದಲು ಈ ಬಗ್ಗೆ ವೈಯಕ್ತಿಕವಾಗಿ ಮದುವೆ ನಡೆಸುವ ಗಂಡು, ಹೆಣ್ಣಿನ ಕಡೆಯವರ ಜನಾಂಗದ ಹಿತಾದೃಷ್ಟಿಯಿಂದ ತೀರ್ಮಾನ ಕೈಗೊಳ್ಳಬೇಕು. ಸಮಾಜದ ಮೇಲೆ ಹೇರಿಕೆ ಮಾಡುವ ಬದಲು ನಾವೇ ಪರಿವರ್ತನೆಯಾಗಬೇಕು ಮದ್ಯ ಬಳಕೆ ನಿಲ್ಲಿಸುವ ಬಗ್ಗೆ ಚಿಂತನೆ ನಡೆಸಬೇಕು ಎಂದು ಹೇಳಿದರು.

ಪೊನ್ನಂಪೇಟೆ ಕೊಡವ ಸಮಾಜದ ನಿರ್ದೇಶಕ ಚೆಪ್ಪುಡೀರ ರಾಕೇಶ್‍ದೇವಯ್ಯ ಮಾತನಾಡಿ, ತನ್ನ ಮಕ್ಕಳ ಮದುವೆಗೆ ಗಂಗಾ ಪೂಜೆ ಸಂದರ್ಭ ಮದ್ಯ ಬಳಸದೇ ನಡೆಸುತ್ತೇನೆ. ಬೇರೆಯವರು ಮಾಡಲಿ ಎಂದು ಹೇಳುವ ಬದಲು ಆ ಜವಾಬ್ದಾರಿಯನ್ನು ಸಮಾಜದ ಒಳಿತಿಗಾಗಿ ನಾವೇ ವಹಿಸಿಕೊಳ್ಳಬೇಕಾಗಿದೆ ಎಂದು ಘೋಷಿಸಿದರು.

ಕಾಫಿ ರಾಷ್ಟ್ರೀಯ ಪಾನೀಯ ಸಂಚಾಲಕ ಮಾಚಿಮಾಡ ರವೀಂದ್ರ ಅವರು ಮಾತನಾಡಿ, ಮೊದಲು ನಾನು ಪರಿವರ್ತನೆಯಾಗಬೇಕು ನಂತರ ನನ್ನ ಮನೆ, ಊರು, ಸಮಾಜ ಬದಲಾವಣೆಯಾಗಬೇಕು. ಕೊಡವ ಮದುವೆ ಸಮಾರಂಭಗಳು ಸಂಸ್ಕøತಿಯಲ್ಲಿ ಶ್ರೀಮಂತವಾಗಿರಲಿ ಆದರೆ ದುಬಾರಿಯಾಗದೇ ಖರ್ಚು ವೆಚ್ಚ ಸರಳವಾಗಿರಲಿ. ಮದುವೆ ಆಮಂತ್ರಣವನ್ನು ತುಂಬಾ ಆಪ್ತ ವರ್ಗಕ್ಕೆ ಮಾತ್ರ ನೀಡುವದು ಸೂಕ್ತ ಎಂದರು. ಕೊಣಿಯಂಡ ಕಾವ್ಯ ಸೋಮಯ್ಯ ಮಾತನಾಡಿ ಮದ್ಯ ಬಳಕೆ ಇತಿಮಿತಿಯಲ್ಲಿರುವದು ಒಳಿತು ಎಂದು ಹೇಳಿದರು.

ಯುಕೋ ಸಂಚಾಲಕ ಕೊಕ್ಕಲೆಮಾಡ ಮಂಜುಚಿಣ್ಣಪ್ಪ ಅವರು ಮಾತನಾಡಿ, ಕೊಡವ ಸಂಸ್ಕøತಿಯನ್ನು ಅರ್ಥ ಮಾಡಿಕೊಂಡು ಸುಧಾರಣೆ ಮಾಡುವದು ಅವಶ್ಯ. ಈ ಹಿಂದೆ ಮನೆಗಳಲ್ಲಿಯೇ ಮದುವೆ ಸಮಾರಂಭಗಳು ನಡೆಯುತ್ತಿದ್ದಾಗ ಅಪಚಾರಗಳು ನಡೆಯುತ್ತಿರಲಿಲ್ಲ. ಮಂಟಪಗಳಲ್ಲಿ ಮದುವೆ ಸಮಾರಂಭ ನಡೆಯುತ್ತಿದ್ದದಂತೆ ಮೂಲ ಸಂಸ್ಕøತಿಗೆ ಧಕ್ಕೆ ಉಂಟಾಗುತ್ತಿದೆ ಎಂದು ಹೇಳಿದರು.

ಮುಕ್ಕಾಟಿರ ಕಾವೇರಮ್ಮ, ಬೊಳ್ಳಿಮಾಡ ಧನು, ಕಾಳಿಮಾಡ ವಾಸು, ಕೋದೆಂಗಡ ಯಮುನ ನರೇಂದ್ರ, ಬಾಚಿಮಾಡ ಶಂಕರಿ, ಮಾಚಿಮಾಡ ಡಾಲಿ, ಕಾಳಿಮಾಡ ಮೋಟಯ್ಯ, ಅಜ್ಜಮಾಡ ಕುಶಾಲಪ್ಪ, ಕೆಂಜಂಗಡ ರೋಶನ್‍ನಾಣಯ್ಯ, ಚೆಟ್ರುಮಾಡ ಕಾಶಿತಮ್ಮಯ್ಯ, ಕಾಟಿಮಾಡ ಜಿಮ್ಮಿ ಅಯ್ಯಣ್ಣ, ಕುಲ್ಲೇಟೀರ ಪ್ರವಿಮೊಣ್ಣಪ್ಪ, ಚಕ್ಕೇರ ವಾಣಿ, ಚೆಟ್ಟಂಗಡ ಗೀತಾವಸಂತ್, ಸುಳ್ಳಿಮಾಡ ಶಿಲ್ಪಅಪ್ಪಣ್ಣ ಅವರು ತಮ್ಮ ಅಭಿಪ್ರಾಯದಲ್ಲಿ ಕೊಡವ ಮದುವೆಯಲ್ಲಿ ಮದ್ಯ ಬಳಕೆ ನಿರ್ಬಂಧಿಸುವ ಮೂಲಕ ಜನಾಂಗದ ಹಿತಾಸಕ್ತಿ ಕಾಪಾಡಲು ಸಾಧ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.