ಸಿದ್ದಾಪುರ, ಏ21: ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧೆ ಮಾಡುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಬಂದೋಬಸ್ತ್ ಕಾರಣದಿಂದ; ನಕ್ಸಲ್ ನಿಗ್ರಹ ದಳದ ವತಿಯಿಂದ ನಿರಂತರ ಕೋಂಬಿಂಗ್ ನಡೆಸಲಾಗುತ್ತಿದೆ.

ಕಳೆದ ಕೆಲವು ತಿಂಗಳುಗಳ ಹಿಂದೆ ವಯನಾಡು ಜಿಲ್ಲೆಯ ವೈತ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ಹಾಗೂ ನಕ್ಸಲರ ನಡುವೆ ಗುಂಡಿನ ಚಕಮಕಿ ನಡೆದಿತ್ತು. ಕೇರಳ ರಾಜ್ಯದ ವಯನಾಡು, ಕಣ್ಣೂರು ಜಿಲ್ಲೆಯಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಾಗಿದ್ದು, ಚುನಾವಣೆಗೆ ಹೆಚ್ಚು ಭದ್ರತೆಯನ್ನು ನೀಡಲಾಗಿದೆ. ವಯನಾಡು ಕ್ಷೇತ್ರದಲ್ಲಿ ರಾಹುಲ್ ಗಾಂಧಿ ಸ್ಪಧೆರ್ü ಮತ್ತು ಪ್ರಿಯಾಂಕ ಗಾಂಧಿ ಸೇರಿದಂತೆ ಹಲವು ಮುಖಂಡರು ಪ್ರಚಾರಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆಯನ್ನು ಕಲ್ಪಿಸಲಾಗಿದೆ. ನಕ್ಸಲರು ಆಹಾರಕ್ಕಾಗಿ ಕೇರಳ ರಾಜ್ಯ ಗಡಿ ಜಿಲ್ಲೆಯಾದ ಕೊಡಗಿನ ಗಡಿಭಾಗದ ಅರಣ್ಯ ವ್ಯಾಪ್ತಿಗೆ ಬರುವ ಸಾಧ್ಯತೆ ಇದೆ ಎಂಬ ಕಾರಣಕ್ಕೆ ಕೋಂಬಿಂಗ್ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಕೇರಳ ರಾಜ್ಯ ಹಾಗೂ ಕೊಡಗು ಜಿಲ್ಲೆಯ ಗಡಿ ಪ್ರದೇಶ ಬ್ರಹ್ಮಗಿರಿ ವನ್ಯಧಾಮ , ಮಾಕುಟ್ಟ, ನಾಲಡಿ, ಬಿರುನಾಣಿ, ಕರಿಕೆ, ತಿರುನ್ನೆಲ್ಲಿ ವನ್ಯಧಾಮ ಸೇರಿದಂತೆ ವಿವಿಧ ಬಾಗದಲ್ಲಿ ಎ.ಡಿ.ಜಿ.ಪಿ ಪ್ರತಾಪ್ ರೆಡ್ಡಿ ಮಾರ್ಗದರ್ಶನದಲ್ಲಿ ಕೋಂಬಿಂಗ್ ಕಾರ್ಯಾಚರಣೆ ಮಾಡಲಾಗುತ್ತಿದೆ. ನಕ್ಸಲ್ ನಿಗ್ರಹ ದಳದಿಂದ ಮೂರು ತಂಡವನ್ನು ರಚಿಸಲಾಗಿದೆ. ಗಡಿ ಭಾಗದ ಅರಣ್ಯದಂಚಿನ ಗಿರಿಜನ ಕಾಲೋನಿಗಳಿಗೆ ನಕ್ಸಲ್ ನಿಗ್ರಹದಳ ಭೇಟಿ ನೀಡಿ; ನಕ್ಸಲ್ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವವರ ಚಲನವಲನ ಕಂಡಲ್ಲಿ ಮಾಹಿತಿ ನೀಡುವಂತೆ ಅರಿವು ಮೂಡಿಸುತ್ತಿದ್ದಾರೆ.

ಜಿಲ್ಲೆಯ ನಾಯಿಕ್ಕಲ್ಲು ಕಾಲೋನಿ, ಬಿರುನಾಣಿ, ನೀಟ್‍ಕುಂದ್ ಗ್ರಾಮಸ್ಥರಿಗೆ ಧೈರ್ಯ ತುಂಬಲು ‘ಜನಸಂಪರ್ಕ ಸಭೆ’ಯನ್ನು ಮಾಡಲಾಗಿದೆ. ಕೇರಳ ರಾಜ್ಯದಲ್ಲಿ ತಾ.23 ರಂದು ಚುನಾವಣೆ ನಡೆಯಲಿದ್ದು, ಕೇರಳದಿಂದ ಕೊಡಗು ಜಿಲ್ಲೆಯ ಮೂಲಕ ಚಿಕ್ಕಮಗಳೂರು ಭಾಗಕ್ಕೆ ನಕ್ಸಲರು ತೆರಳುವ ಸಾಧ್ಯತೆ ಇರುವ ಕಾರಣ ಮುನ್ನೆಚ್ಚರಿಕಾ ಕ್ರಮವಾಗಿ ಕೋಂಬಿಂಗ್ ಮಾಡಲಾಗುತ್ತಿದೆ. ಕೋಂಬಿಂಗ್ ಕಾರ್ಯಾಚರಣೆಯ ನೇತೃತ್ವವನ್ನು ಎಸ್.ಪಿ ಅರುಣಾಕ್ಷಗಿರಿ ವಹಿಸಿದ್ದಾರೆ ಎಂದು ಮೂಲಗಳಿಂದ ಗೊತ್ತಾಗಿದೆ. - ವಾಸು