*ಗೋಣಿಕೊಪ್ಪಲು, ಏ. 20: 129ನೇ ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಅಮ್ಮತ್ತಿ ಡಾ. ಬಿ.ಆರ್. ಅಂಬೇಡ್ಕರ್ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಮತ್ತು ಜಿಲ್ಲಾ ಫುಟ್‍ಬಾಲ್ ಸಂಸ್ಥೆ ಆಶ್ರಯದಲ್ಲಿ ರಾಜ್ಯ ಮಟ್ಟದ ಮುಕ್ತ 7 ಮಂದಿಯ ಕಾಲ್ಚೆಂಡು ಪಂದ್ಯಾಟ ನಡೆಯಲಿದೆ ಎಂದು ಬಿ.ಆರ್. ಅಂಬೇಡ್ಕರ್ ಸ್ಪೋಟ್ರ್ಸ್ ಅಂಡ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಅರುಣ್ ಮಾಹಿತಿ ನೀಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಮ್ಮತ್ತಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ತಾ. 26ರಿಂದ 28ರ ವರೆಗೆ 3 ದಿನಗಳ ಕಾಲ ಕಾಲ್ಚೆಂಡು ಪಂದ್ಯಾಟ ನಡೆಯಲಿದೆ ಈ ಪಂದ್ಯಾಟಕ್ಕೆ ಇದೀಗಾಗಲೇ ಬಹಳಷ್ಟು ತಂಡಗಳು ಹೆಸರು ನೊಂದಾಯಿಸಿಕೊಂಡಿದ್ದು ಮತ್ತಷ್ಟು ತಂಡಗಳು ಬರುವ ನಿರೀಕ್ಷೆಯಿದೆ. ಆಸಕ್ತ ತಂಡಗಳು ತಾ. 22ರೊಳಗೆ ಹೆಸರು ನೊಂದಾಯಿಸಿಕೊಳ್ಳುವಂತೆ ತಿಳಿಸಿದ್ದಾರೆ.

ವಿಜೇತ ತಂಡಗಳಿಗೆ ಆಕರ್ಷಕ ಪಾರಿತೋಷಕ ಹಾಗೂ ನಗದು ಬಹುಮಾನ ನೀಡಲಾಗುವದು. ಪ್ರಥಮ ಸ್ಥಾನಕ್ಕೆ ಮೂವತ್ತು ಸಾವಿರ, ದ್ವಿತೀಯ ಸ್ಥಾನಕ್ಕೆ ಇಪ್ಪತ್ತು ಸಾವಿರ ನಗದು ಬಹುಮಾನ ನೀಡಲಾಗುವದು.

ವಿಶೇಷ ಪಂದ್ಯಾವಳಿಯಲ್ಲಿ ಲಯನ್ಸ್ ಕಳತ್ಮಾಡು ಮತ್ತು ಮರಗೋಡು ಮಹಿಳಾ ವಿಭಾಗದ ತಂಡಗಳು ಭಾಗವಹಿಸಿ ಪಂದ್ಯಾಟದ ಆಕರ್ಷಣೆಯನ್ನು ಹೆಚ್ಚಿಸಲಿದ್ದಾರೆ.

ಅಲ್ಲದೆ ನಲವತ್ತು ವರ್ಷ ವಯಸ್ಸಿನ ಪುರುಷರ ಹಿರಿಯ ವಿಭಾಗದಲ್ಲಿ ಅಮ್ಮತ್ತಿ ಮತ್ತು ಸುಂಟಿಕೊಪ್ಪದ ತಂಡಗಳು ಭಾಗವಹಿಸಲಿವೆ.

ವಿಶೇಷವಾಗಿ ನಡೆಯುವ ಮಹಿಳೆಯರ ವಿಭಾಗದ ಪಂದ್ಯಾಟಕ್ಕೆ ಚೆನ್ನಯ್ಯನಕೋಟೆ ಗಣಪತಿ ಉತ್ಸವ ಅಧ್ಯಕ್ಷ ಹೆಚ್.ಆರ್. ಪವಿತ್ರ ಪೆÇ್ರತ್ಸಾಹಕರ ಬಹುಮಾನ ಹಾಗೂ ನಗದನ್ನು ನೀಡಿ ಪಂದ್ಯಾಟ ತಂಡವನ್ನು ನಿರ್ವಹಿಸಲಿದ್ದಾರೆ. ಹೆಚ್ಚಿನ ಮಾಹಿತಿಗೆ : 9449747742, 9482644300, ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವಂತೆ ತಿಳಿಸಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಸತೀಶ್, ಕಾರ್ಯದರ್ಶಿ ಹೆಚ್.ಜಿ. ಮದು ಹಾಗೂ ಸದಸ್ಯ ಅಕಿಲೇಶ್ ಉಪಸ್ಥಿತರಿದ್ದರು.