ಸೋಮವಾರಪೇಟೆ, ಏ. 21: ಇಲ್ಲಿನ ಅಕ್ಕಮಹಾದೇವಿ ಮಂಟಪದಲ್ಲಿ ವೀರಶೈವ ಸಮಾಜದ ಅಕ್ಕನ ಬಳಗದ ವತಿಯಿಂದ ಅಕ್ಕಮಹಾದೇವಿ ಜಯಂತಿ ಹಾಗೂ ಮಹಿಳಾ ದಿನಾಚರಣೆ ಕಾರ್ಯಕ್ರಮ ನಡೆಯಿತು.

ಮುಖ್ಯ ಅತಿಥಿಯಾಗಿದ್ದ ನ್ಯಾಯದಹಳ್ಳ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಮಂಜುಳಾ ಮಣಿ ಮಾತನಾಡಿ, ದಾರ್ಶನಿಕರ ಆದರ್ಶಗಳನ್ನು ತಿಳಿದು ಅದನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವ ದರೊಂದಿಗೆ ನಮ್ಮ ಮಕ್ಕಳಿಗೂ ತಿಳಿಹೇಳಬೇಕಾದ ಅಗತ್ಯವಿದೆ ಎಂದರು.

12ನೇ ಶತಮಾನದಲ್ಲಿ ವಚನಕಾರರು ವಚನಗಳ ಮೂಲಕ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಮೂಲಕ ಸಮಾಜ ಸುಧಾರಣೆಗೆ ಮುಂದಾದರು. ಅವರಲ್ಲಿ ಅಕ್ಕಮಹಾದೇವಿಯೂ ಒಬ್ಬರಾಗಿದ್ದಾರೆ. ಮಹಿಳಾ ಬರಹಗಾರರಲ್ಲಿ ಮೊದಲಿಗರಾಗಿರುವ ಇವರ ಆದರ್ಶಗುಣಗಳನ್ನು ಎಲ್ಲ ಮಹಿಳೆಯರು ಅರಿಯಬೇಕಿದೆ ಎಂದರು.

ವಿರಕ್ತ ಮಠದ ಮಠಾಧೀಶರಾದ ಶ್ರೀ ವಿಶ್ವೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಳಗದ ಅಧ್ಯಕ್ಷೆ ಜಲಜಾ ಶೇಖರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷೆ ಉಮಾ ರುದ್ರಪ್ರಸಾದ್, ವೀರಶೈವ ಸಮಾಜದ ಶೇಟ್ರು ತೇಜಸ್ವಿ, ಕಾರ್ಯದರ್ಶಿ ಜೆ.ಸಿ. ಶೇಖರ್ ಉಪಸ್ಥಿತರಿದ್ದರು.