ಮಡಿಕೇರಿ, ಏ. 20: ಒಂದಲ್ಲಾ ಒಂದು ವಿಶೇಷತೆಗಳ ಆಗರವಾಗಿರುವ ಕೊಡಗು ಜಿಲ್ಲೆಯಲ್ಲಿ ಮತ್ತೂ ಒಂದು ವಿಶೇಷವಿದೆ. ಇದೊಂದು ಧಾರ್ಮಿಕವಾದ ಪುರಾತನ ಕಾಲದಿಂದಲೂ ಶ್ರದ್ಧಾ - ಭಕ್ತಿಯಿಂದ ನಡೆದುಕೊಂಡು ಬರುತ್ತಿರುವ ಆಚರಣೆ. ಇದರಲ್ಲಿ ಬಗೆ ಬಗೆಯ ವೇಷಧಾರಿಗಳಿರುತ್ತಾರೆ. ವಿವಿಧ ರೀತಿಯ ಹಾಡು - ನೃತ್ಯಗಳ ಸಂಗಮವಿರುತ್ತದೆ. ಇವೆಲ್ಲವುಗಳಿಗಿಂತ ಮುಖ್ಯವಾಗಿ ಇದರ ಹಿಂದಿರುವದು ಧಾರ್ಮಿಕತೆಯ ಸಂಕೇತ. ಈ ಮೂಲಕ ವಿವಿಧ ಕಟ್ಟುಪಾಡಿಗೆ ಒಳಪಟ್ಟು ವಿವಿಧ ದೇವನೆಲೆಗಳಿಗೆ ಸಂಬಂಧಿಸಿದಂತೆ ಅನಾದಿ ಕಾಲದಿಂದ ನಡೆದುಕೊಂಡು ಬರುತ್ತಿರುವ ಜನಪದೀಯ ಸಂಸ್ಕøತಿ - ಪದ್ಧತಿಯೇ ಈ ವಿಶಿಷ್ಟವಾದ ‘ಬೋಡ್ ನಮ್ಮೆ’ (ಬೋಡು ಹಬ್ಬ) ಎಂಬದಾಗಿದೆ.ಇದು ಕಂಡು ಬರುವದು, ಆಚರಣೆಯಲ್ಲಿರುವದು, ದಕ್ಷಿಣ ಕೊಡಗಿನ ಹಲವೆಡೆಗಳಲ್ಲಿ ಮಾತ್ರ. ಇತ್ತೀಚಿನ ವರ್ಷಗಳಲ್ಲಿ ಇದಕ್ಕೆ ಒಂದಷ್ಟು ಆಧುನಿಕತೆಯ ಸ್ಪರ್ಶ ಕಂಡು ಬರುತ್ತಿದೆಯಾದರೂ ಮೂಲ ಸಂಸ್ಕøತಿಗೆ ಧಕ್ಕೆಯಾಗಿಲ್ಲ. ಹಿಂದಿನ ವರ್ಷಗಳಂತೆಯೇ ವಿಶಿಷ್ಟವಾದ ನಂಬಿಕೆಗಳು, ಹಿಂದಿನ ವರ್ಷಗಳಂತೆಯೇ ವಿಶಿಷ್ಟವಾದ ನಂಬಿಕೆಗಳು, ಹರಕೆಗಳು, ಪದ್ಧತಿಯ ಪಾಲನೆ ಪ್ರಸ್ತುತದ ವರ್ಷಗಳಲ್ಲಿ ಇನ್ನಷ್ಟು ಗಟ್ಟಿಯಾಗುತ್ತಿರುವದು ಗಮನಾರ್ಹವಾಗಿದೆ.
ವಿವಿಧ ದೇವನೆಲೆಗಳಲ್ಲಿ ಆಯಾ ವ್ಯಾಪ್ತಿಯ ಕಟ್ಟು ಕಟ್ಟಳೆಯಂತೆ ಕೆಲವೆಡೆ ವಾರ್ಷಿಕವಾಗಿ ಇನ್ನು ಹಲವೆಡೆ ಮೂರು ವರ್ಷಗಳಿಗೊಮ್ಮೆ ಈ ಆಚರಣೆ, ಹಬ್ಬ ಮುಂದುವರಿದುಕೊಂಡು ಬರುತ್ತಿದೆ. ಇದರಲ್ಲಿ ವೇಷಧಾರಿಗಳಿರುತ್ತಾರೆ, ಹಾಡುಗಾರರು ಇರುತ್ತಾರೆ. ಜಾತಿ ರಹಿತವಾದ ಪದ್ಧತಿಯ ಪರಿಪಾಲನೆಯೂ ಇದೆ. ಕೇವಲ ದೇವಸ್ಥಾನ ನೆಲೆಗಳಲ್ಲಿ ಮಾತ್ರವಲ್ಲ ಮನೆ ಮನೆಗಳಿಗೂ ತೆರಳಲಾಗುತ್ತದೆ. ವ್ರತಧಾರಿಗಳನ್ನು ಕಾಲು ತೊಳೆದು, ಮನೆಯೊಳಗೆ ಬರಮಾಡಿಕೊಳ್ಳುವದು, ಆಯಾ ಮನೆಗಳ ನೆಲ್ಲಕ್ಕಿ ನಡುಬಾಡೆಯಲ್ಲಿ ವಿಶೇಷ ಪ್ರಾರ್ಥನೆ, ಕೊಂಬ್‍ಕೊಟ್ಟ್ ವಾಲಗ, ದುಡಿಕೊಟ್ಟ್‍ಪಾಟ್‍ನಂತಹ ವೈವಿಧ್ಯತೆಗಳೂ ಈ ಬೋಡ್‍ನಮ್ಮೆ (ಬೇಡು ಹಬ್ಬ)ಯ ವಿಶೇಷತೆಗಳು.
ಈ ಸಂಭ್ರಮಾಚರಣೆಗಳ ನಡುವೆ ವಿಶೇಷವಾದ ಅತಿಥಿ ಸತ್ಕಾರಗಳು, ಭೂರೀ ಭೋಜನಗಳು ಹಲವೆಡೆ ಕಂಡ ಬರುತ್ತವೆ. ಕೊಡಗಿನಿಂದ ಹೊರ ಭಾಗದಲ್ಲಿ ನೆಲೆಸಿರುವ ಜನರೂ ತಮ್ಮ ತಮ್ಮ ಊರುಗಳಲ್ಲಿನ
(ಮೊದಲ ಪುಟದಿಂದ) ಹಬ್ಬಕ್ಕೆ ಸಂಸಾರ ಸಹಿತವಾಗಿ ಆಗಮಿಸುತ್ತಾರೆ. ದೇಶದ ಇತರೆಡೆ- ವಿದೇಶಗಳಲ್ಲಿರುವವರೂ ಬಿಡುವು ಮಾಡಿಕೊಂಡು ಬರುತ್ತಾರೆ. ಪರಸ್ಪರ ನೆಂಟರಿಷ್ಟರಾಗಿ ಅಲ್ಲಲ್ಲಿ ತೆರಳುವ ವಾಡಿಕೆಯೂ ಇದೆ. ಕೊಡವರು ಸೇರಿದಂತೆ ಇಲ್ಲಿನ ಮೂಲನಿವಾಸಿ ಜನಾಂಗದವರಲ್ಲಿ ಈ ಆಚರಣೆ ಕಂಡು ಬರುತ್ತದೆ.
ಬಿದಿರು - ಬೆತ್ತದಿಂದ ಮಾಡಿದ ಕುದುರೆ, ಆನೆಯನ್ನು ಹೊರುವ ವ್ರತಧಾರಿಗಳು, ಹುಲಿವೇಷ, ಬಂಡ್‍ಕಳಿ (ಕೆಸರು), ಚೂಳೆಕಳಿ, ಕುರುಬಕಳಿ, ವಡ್ಡ - ತಿಮ್ಮ, ಮಾಪಳೆ ಮಾರ, ಕೊರಂಬಕೊಡೆ, ಜೋಗಿ, ಹುಲ್ಲಿನ ಭೂತ, ಸೊಪ್ಪಿನಿಂದ - ಕೆಸರಿನಿಂದ ಆವೃತ್ತವಾದವರು ಈ ರೀತಿಯಲ್ಲಿ ಬಗೆ ಬಗೆಯ ಸನ್ನಿವೇಶಗಳು ಈ ಬೋಡ್‍ನಮ್ಮೆಯಲ್ಲಿ ಕಂಡು ಬರುತ್ತವೆ.
ಲೇಲುಳಿ ಲೇಲುಳಿ ಲೇಲುಳೆಲೆಲ್ಲಾ ತಾಲಿಲೆಲ್ಲೇಲಾ ಎಂಬಿತ್ಯಾದಿ ಹಾಡುಗಳು, ಒಡ್ಡೋಲಗ, ದುಡಿಕೊಟ್ಟ್ ಪಾಟ್‍ಲ್ ಸಹಿತವಾಗಿ ದೇವರ ಸ್ತುತಿ, ನೃತ್ಯಗಳು ಗಮನ ಸೆಳೆಯುತ್ತವೆ. ಆದರೆ ಇವು ಯಾವದೂ ಕೇವಲ ಸಂಭ್ರಮಕ್ಕೆ ಮಾತ್ರವಲ್ಲ ನಂಬಿಕೆಯ ಪ್ರತೀಕದೊಂದಿಗೆ ಸಂಸ್ಕøತಿಯ ಪರಿಪಾಲನೆ ಎಂಬದು ವಿಶೇಷವಾದದ್ದು.
ಕುಂದ್‍ತ್ ಬೊಟ್ಟ್‍ಲ್ ನೇಂದ ಕುದುರೆ
ಸಾಧಾರಣವಾಗಿ ತಲಕಾವೇರಿ ತೀರ್ಥೋದ್ಭವದ ಬಳಿಕ ದಕ್ಷಿಣ ಕೊಡಗಿನ ಕುಂದಬೆಟ್ಟದಲ್ಲಿನ ಈಶ್ವರ ದೇವಾಲಯದಿಂದ ಈ ಆಚರಣೆ ಪ್ರಾರಂಭಗೊಳ್ಳುತ್ತವೆ. ಜನಪದೀಯವಾಗಿ ಕುಂದ್‍ತ್ ಬೊಟ್ಟ್‍ಲ್ ನೇಂದ ಕುದುರೆ ಪಾರಣಮಾನಿಲ್ ಅಳ್‍ಂಜ ಕುದುರೆ ಎಂಬ ಜನಪದೀಯವಾಗಿ ಬಂದಿರುವ ಹಾಡಿನಂತೆ ಅಕ್ಟೋಬರ್‍ನಿಂದ ಜೂನ್ 2ರ ತನಕದ ಅವಧಿಯಲ್ಲಿ ಅಲ್ಲಲ್ಲಿ ಈ ಆಚರಣೆಗಳು ನಡೆದುಕೊಂಡು ಬರುತ್ತವೆ.
ಕುಂದದ ಬಳಿಕ, ಹಳ್ಳಿಗಟ್ಟುವಿನ ಭದ್ರಕಾಳಿ ಗುಂಡಿಯತ್ ಅಯ್ಯಪ್ಪ ದೇವರ ಕೋಟ, ನಲ್ಲೂರು, ಕಿರುಗೂರು, ಕುತ್ತ್‍ನಾಡ್ (ಬಿ.ಶೆಟ್ಟಿಗೇರಿ) ಚೆಂಬೆಬೆಳ್ಳೂರು, ಕಾವಾಡಿ, ಬಿಳುಗುಂದ, ಐಮಂಗಲ, ಬೆಕ್ಕೆಸೊಡ್ಲೂರು, ಈಚೂರು, ಹುದೂರು, ಬೆಸಗೂರು, ಕೊಟ್ಟಗೇರಿ ಸೇರಿದಂತೆ ಇನ್ನು ಹಲವೆಡೆಗಳಲ್ಲಿ ಅಲ್ಲಲ್ಲಿನ ಸಂಪ್ರದಾಯಕ್ಕೆ ಒಳಪಟ್ಟು ಈ ಹಬ್ಬಾಚರಣೆ ಪರಂಪರಾಗತವಾಗಿ ಮುಂದುವರಿದುಕೊಂಡು ಬರುತ್ತಿದೆ. ವಿವಿಧ ದೇವಾಲಯಗಳು - ಊರುಗಳಿಗೆ ಸಂಬಂಧಿಸಿದಂತೆ ಒಂದೊಂದು ರೀತಿಯ ಇತಿಹಾಸವೂ ಇದೆ.
ಇನ್ನು ದೇವರಪುರ, ಹೆಬ್ಬಾಲೆಯಲ್ಲಿ ಈ ಬೇಡು ಹಬ್ಬ ಮತ್ತೊಂದು ವಿಶೇಷ ರೀತಿಯಲ್ಲಿ ಆಚರಿಸಲ್ಪಡುತ್ತದೆ. ಇಲ್ಲಿ ಇದಕ್ಕೆ ಬೈಗುಳದ ಹಬ್ಬ ಎಂದೇ ಪ್ರತೀತಿಯಿದ್ದು, ದೇವರನ್ನೇ ಬೈದು ಬಳಿಕ ಪೂಜಿಸುವದು ಕೂಡ ಒಂದು ವಿಶಿಷ್ಟತೆಯಾಗಿದೆ. ಈಗಾಗಲೇ ಈ ಹಬ್ಬಗಳು ಅಲ್ಲಲ್ಲಿ ಜರುಗಿದ್ದು, ಇನ್ನು ಹಲವೆಡೆಗಳಲ್ಲಿ ನಿಗದಿತ ದಿನಗಳಂದು ಆಚರಿಸಲ್ಪಡುತ್ತದೆ.