ಸಿದ್ದಾಪುರ, ಏ. 20: ತ್ಯಾಗತ್ತೂರು ಗ್ರಾಮದಲ್ಲಿ ಬೀಡುಬಿಟ್ಟಿದ್ದ ಕಾಡಾನೆಗಳ ಹಿಂಡನ್ನು ಕಾಡಿಗಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ಮರಿ ಆನೆ ಸೇರಿ ಒಟ್ಟು 20 ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಕಾಫಿ ತೋಟಗಳಲ್ಲಿ ದಾಂಧಲೆ ನಡೆಸುತ್ತಿತ್ತು. ರಾತ್ರಿ ವೇಳೆಯಲ್ಲಿ ಕಾಡಾನೆ ಹಿಂಡು ಮನೆಗಳ ಬಳಿಗೆ ತೆರಳಿ ಬಾಳೆ ಸೇರಿದಂತೆ ಬೆಳೆಗಳನ್ನು ನಾಶಮಾಡುತ್ತಿದ್ದು, ಭಯಭೀತರಾದ ಗ್ರಾಮಸ್ಥರು ಅರಣ್ಯ ಇಲಾಖೆಗೆ ದೂರು ನೀಡಿದ್ದರು.ಕೂಡಲೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ ಸಿಬ್ಬಂದಿ, ಆರ್.ಎಫ್.ಓ ಅರುಣ್ ನೇತೃತ್ವದ ತಂಡ ಕಾಡಾನೆ ಕಾರ್ಯಾಚರಣೆ ನಡೆಸಿ, ಪಟಾಕಿ ಸಿಡಿಸಿ 20 ಕಾಡಾನೆಗಳ ಹಿಂಡನ್ನು ಕಾಡಿಗಟ್ಟಿದ್ದಾರೆ. ಕಾರ್ಯಾಚರಣೆಯ ಸಂದರ್ಭ ಎರಡು ಬಾರಿ ಸಲಗವೊಂದು ಅರಣ್ಯ ಇಲಾಖೆಯ ಸಿಬ್ಬಂದಿಯ ಮೇಲೆ ದಾಳಿಗೆ ಯತ್ನಿಸಿದ್ದು, ಅದೃಷ್ಟವಶಾತ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾಡಾನೆಗಳ ಹಿಂಡಿನಲ್ಲಿ ಒಂಟಿ ಸಲಗ ಸೇರಿದಂತೆ 5 ಮರಿ ಆನೆಗಳು ಇದ್ದು, ಕಾಡಾನೆಗಳ ಹಿಂಡನ್ನು ದುಬಾರೆ ಮೀಸಲು ಅರಣ್ಯ ಪ್ರದೇಶಕ್ಕೆ ಅಟ್ಟಲಾಗಿದೆ.

ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ವಿಲಾಸ್, ಅರಣ್ಯ ರಕ್ಷಕ ಚರಣ್, ವೀಕ್ಷಕ ಜಗದೀಶ್, ಸಿಬ್ಬಂದಿ ಧರ್ಮಪಾಲ್, ವಾಸುದೇವ, ಆಲ್ಬರ್ಟ್, ಅಪ್ಪಸ್ವಾಮಿ ಭಾಗವಹಿಸಿದ್ದರು.

(ಮೊದಲ ಪುಟದಿಂದ)

ಮತ್ತೆ ಕಾಡಾನೆ ಹಾವಳಿ

ಕಳೆದ ಕೆಲವು ದಿನಗಳಿಂದ ಕಾಡಾನೆ ಹಾವಳಿ ಕಡಿಮೆ ಇದ್ದ ಸಿದ್ದಾಪುರ ವ್ಯಾಪ್ತಿಯಲ್ಲಿ ಮತ್ತೆ ಕಾಡಾನೆ ಹಾವಳಿ ಹೆಚ್ಚಾಗಿದೆ. ಸಿದ್ದಾಪುರದ ಕರಡಿಕಾಡು, ಟೀಕ್‍ವುಡ್ ತೋಟ, ಬೀಟಿಕಾಡು ಸೇರಿದಂತೆ ಹಲವು ಪ್ರದೇಶದಲ್ಲಿ ಕಾಡಾನೆ ಹಿಂಡು ಬೀಡುಬಿಟ್ಟಿದ್ದು, ದಾಂಧಲೆ ನಡೆಸುತ್ತಿರುವ ಬಗ್ಗೆ ತೋಟದ ಮಾಲೀಕರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಕರಡಿಗೋಡುವಿಗೆ ತೆರಳುವ ರಸ್ತೆ ಬದಿಯಲ್ಲಿ ಒಂಟಿ ಸಲಗವೊಂದನ್ನು ಬೈಕ್ ಸವಾರ ನೋಡಿ, ಗಾಬರಿಗೊಂಡು ತೆರಳಿದ ಘಟನೆಯೂ ನಡೆದಿದೆ. ಕಾಡಾನೆಗಳನ್ನು ಕೂಡಲೇ ಕಾಡಿಗಟ್ಟಬೇಕೆಂದು ಬೆಳೆಗಾರರು ಹಾಗೂ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

-ಎ.ಎನ್. ವಾಸು