ಅಲ್ ಅಮೀನ್ ಕೊಡಗು ಜಿಲ್ಲಾ ಸಮಿತಿ ಈ ಹೆಸರು ಇಂದು ಜಿಲ್ಲೆಯಾದ್ಯಂತ ಚಿರಪರಿಚಿತ. ವಿಶ್ವಾಸಾರ್ಹ ಎಂಬ ಅರ್ಥ ಕೊಡುವ ಈ ಸಂಸ್ಥೆಯು ಕೊಡಗಿನ ಮುಸ್ಲಿಂ ಸಮಾಜದ ಬಡ ಹಾಗೂ ಅನಾಥ ಕನ್ಯೆಯರ ವಿವಾಹವನ್ನು ಕಳೆದ ಹದಿಮೂರು ವರ್ಷಗಳಿಂದ ಉಚಿತವಾಗಿಯೇ ನಡೆಸಿ ಕೊಡುತ್ತಾ ಬರುತ್ತಿದ್ದು, ಈ ವರೆಗೆ ಮುನ್ನೂರಕ್ಕೂ ಅಧಿಕ ಅರ್ಹ ಹೆಣ್ಣುಮಕ್ಕಳ ವಿವಾಹವನ್ನು ನಡೆಸಿ ಕೊಟ್ಟ ಕೀರ್ತಿಗೆ ಪಾತ್ರವಾಗಿದೆ. ಆಯ್ಕೆಯ ಹೆಣ್ಣು ತೀರಾ ಬಡ ಕುಟುಂಬದ್ದಾಗಿದ್ದು, 18 ವರ್ಷ ತುಂಬಿರಬೇಕು. ವರನಿಗೆ 21 ವರ್ಷ ತುಂಬಿದ್ದು ವಧುವಿನ ಕಡೆಯವರೇ ಆಯ್ಕೆ ಮಾಡಿಕೊಂಡಿರಬೇಕು ಎಂಬ ನಿಬಂಧನೆಗಳೊಂದಿಗೆ ಆಯ್ಕೆಗೊಂಡ ವಧುವಿಗೆ ಸಮಿತಿಯು 5 ಪವನ್ ಚಿನ್ನಾಭರಣ, ವಧೂ-ವರರಿಬ್ಬರಿಗೂ ಹೊಡ ಉಡುಪು ನೀಡುತ್ತಿದ್ದು, ವಿವಾಹ ಸಮಾರಂಭಕ್ಕೆ ಆಗಮಿಸಿದ ಎಲ್ಲ ಅತಿಥಿಗಳಿಗೂ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಮಾಡುತ್ತಿದೆ. ಹೀಗಾಗಿ ಒಂದು ವಿವಾಹಕ್ಕೆ ಅಂದಾಜು 2 ಲಕ್ಷ ರೂಪಾಯಿ ವೆಚ್ಚ ತಗಲುತ್ತಿದ್ದು, ಪ್ರತಿವರ್ಷ 25 ಕನ್ಯೆಯರ ವಿವಾಹ ನಡೆಸಿ ಕೊಡುವ ಗುರಿಯನ್ನು ಹೊಂದಲಾಗಿದೆ. ಸಮಿತಿಯು ಈ ಬೃಹತ್ ಮೊತ್ತವನ್ನು ಭರಿಸಲು ಜಿಲ್ಲೆಯ

ಕೊಡುಗೈದಾನಿಗಳ ಮನೆಗಳಿಗೆ ಪ್ರತಿ ವರ್ಷ ಭೇಟಿ ಕೊಡುವ ಸಮಿತಿಯ ಕಾರ್ಯಕರ್ತರು ಹಗಲಿರುಳೆನ್ನದೆ ಶ್ರಮಪಡುತ್ತಾರೆ. ಸಮಿತಿಯ ಕಾರ್ಯಕರ್ತರು ದಾನಿಗಳನ್ನು ಸಂಪರ್ಕಿಸುವ ಸಂದರ್ಭ ಸಣ್ಣ ಮೊತ್ತದಿಂದ ಮೊದಲ್ಗೊಂಡು ಓರ್ವ ಹೆಣ್ಣಿನ ವಿವಾಹದ ಪೂರ್ಣ ವೆಚ್ಚ ನೀಡುವ ಮೂಲಕ ಸಹಕರಿಸುವ ದಾನಿಗಳೂ ಇದ್ದಾರೆ.

ಅಲ್ ಅಮೀನ್ ಸಂಸ್ಥೆಯ ಜನ ಪರ ಕಾರ್ಯಕ್ರಮ ಕಂಡು ವಿವಾಹ ಸಮಾರಂಭಕ್ಕೆ ಆರ್ಥಿಕ ನೆರವು ನೀಡಿದ ಹಿಂದೂ ಬಾಂಧವರು ಕೂಡ ಇದ್ದಾರೆ. ಈ ಹಿಂದೆ ಜಿಲ್ಲೆಯಲ್ಲಿ ಒಂದೇ ದಿನ ಒಂದೇ ವೇದಿಕೆಯಲ್ಲಿ ಸಮಾಜದ 42 ಕನ್ಯೆಯರ ವಿವಾಹವನ್ನು ಮಾಡಿಕೊಡುವ ಮೂಲಕ ಜಿಲ್ಲೆಯಲ್ಲಿ ದಾಖಲೆ ಸೃಷ್ಟಿಸಿದ ಕೀರ್ತಿಗೂ ಅಲ್ ಅಮೀನ್ ಪಾತ್ರವಾಗಿದೆ. ಹೆಣ್ಣುಹೆತ್ತ ಬಡ ಕುಟುಂಬವು ತನ್ನ ಮಕ್ಕಳ ವಿವಾಹ ನಡೆಸಿ ಕೊಡಲು ಬವಣೆ ಪಡುತ್ತಿರುವುದನ್ನು ಕಂಡು ಮನನೊಂದು ಇದಕ್ಕೊಂದು ಪರಿಹಾರ ಮಾರ್ಗವನ್ನು ಕಂಡು ಹಿಡಿಯಬೇಕೆಂದು ನಿರ್ಧರಿಸಿದ ಮಡಿಕೇರಿ ರಾಣೀಪೇಟೆಯ ಕೂರ್ಗ್ ಸ್ಟೀಲ್ ಇಂಡಸ್ಟೀಸ್‍ನ ಮಾಲೀಕ ಎನ್. ಎ. ಅಬ್ದುಲ್ ಲತೀಫ್ ಹಾಜಿ ಅವರು ಕೆಲವು ಸಮಾನ ಮನಸ್ಕರನ್ನು ಸೇರಿಸಿಕೊಂಡು ರಚನೆ ಮಾಡಿದ ಸಂಸ್ಥೆಯೇ ‘ಅಲ್‍ಅಮೀನ್ ಕೊಡಗು ಜಿಲ್ಲಾ ಸಮಿತಿ’

ಇದೀಗ 13ನೇ ವರ್ಷಕ್ಕೆ ಪದಾರ್ಪಣೆ ಮಾಡಿರುವ ಸಂಸ್ಥೆ ಈ ಬಾರಿ ತಾ.21ರಂದು (ನಾಳೆ) 25ಕನ್ಯೆಯರ ವಿವಾಹ ಕಾರ್ಯವನ್ನು ಹಮ್ಮಿಕೊಂಡಿದೆ. ಈ ವಿವಾಹ ಸಮಾರಂಭ ನಾಳೆ ಮಡಿಕೇರಿಯ ಕಾವೇರಿ ಹಾಲ್‍ನಲ್ಲಿ ನಡೆಯಲಿದೆ. ಅಲ್‍ಅಮೀನ್ ಸಮಿತಿಯ ಜನೋಪಯೋಗಿ ಕಾರ್ಯ ಕ್ರಮಗಳನ್ನು ಗಮನಿಸಿದ ಕಾವೇರಿ ಹಾಲ್‍ನ ಮಾಲೀಕ ಪೊನ್ನಚೆಟ್ಟೀರ ದಿ. ಅರುಣ್‍ಕಾರ್ಯಪ್ಪ ಅವರು ಸಮಿತಿ ನಡೆಸುವ ಬಡವರ ವಿವಾಹಕ್ಕೆ ಕಾವೇರಿ ಹಾಲ್ ಅನ್ನು ಉಚಿತವಾಗಿ ನೀಡಿ ಸಹಕರಿಸಿದ್ದಾರೆ. ಮಾಜಿ ಶಾಸಕ ಸುಂಟಿಕೊಪ್ಪದ ಕೆ.ಎಂ. ಇಬ್ರಾಹಿಂ ಅವರು ಮಹಾಪೋಷಕರಾಗಿರುವ ಅಲ್‍ಅಮೀನ್ ಸಂಸ್ಥೆಯ ಅಧ್ಯಕ್ಷರಾಗಿ ನಿವೃತ್ತ ಉಪತಹಶೀಲ್ದಾರ್ ಎಫ್.ಎ. ಮೊಹಮದ್ ಹಾಜಿ ಅವರು ಕಾರ್ಯನಿರ್ವಹಿಸುತ್ತಿದ್ದಾರೆ. ಕೆ.ಎಂ. ಇಬ್ರಾಹಿಂ ಅವರ ಮಾರ್ಗದರ್ಶನದಲ್ಲಿ ಸಮಿತಿಯು ಕಾರ್ಯಚರಿಸುತ್ತಾ ಬರುತ್ತಿದ್ದು, ಲತೀಫ್ ಹಾಜಿ ಅವರ ನಿರಂತರ ಪರಿಶ್ರಮ ಹಾಗೂ ಬಡ ಬಗ್ಗರ ಮೇಲಿನ ಕಾಳಜಿ ಜಿಲ್ಲೆಯ ನೂರಾರು ಕುಟುಂಬಗಳ ಹೆಣ್ಣು ಮಕ್ಕಳಿಗೆ ಮಾಂಗಲ್ಯ ಭಾಗ್ಯವನ್ನು ಕಲ್ಪಿಸಿ ಕೊಡುವಲ್ಲಿ ಯಶಸ್ವಿಯಾಗಿದೆ.

ಅಲ್ ಅಮೀನ್ ಸಮಿತಿಯು ಭವಿಷ್ಯದಲ್ಲಿ ಮುಸ್ಲಿಂ ಸಮುದಾಯದ ಬಡ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವು ನೀಡುವುದು, ಪ್ರತಿಭಾವಂತ ಮಕ್ಕಳಿಗೆ ನಗದು ಬಹುಮಾನಗಳನ್ನು ನೀಡಿ ಪ್ರೋತ್ಸಾಹಿಸುವುದು, ಉಚಿತ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರಗಳನ್ನು ನಡೆಸುವ ಮೂಲಕ ಸಾರ್ವಜನಿಕರಿಗೆ ನೆರವಾಗಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಎಫ್.ಎ. ಮೊಹಮದ್ ಹಾಜಿ ತಿಳಿಸಿದ್ದಾರೆ.

?ಯಮ್ಮಿ