ಕಾಂಗ್ರೆಸ್ ವಕ್ತಾರೆ ಪ್ರಿಯಾಂಕ ಶಿವಸೇನೆಗೆ ಮುಂಬೈ, ಏ. 19: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ವಕ್ತಾರೆ ಪ್ರಿಯಾಂಕಾ ಚತುರ್ವೇದಿ ಅವರು ಪಕ್ಷ ತೊರೆದ ಬೆನ್ನಲ್ಲೇ ಶಿವಸೇನೆ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಈ ಹಿಂದೆ ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ ಕಾಂಗ್ರೆಸ್ ಕಾರ್ಯಕರ್ತರ ಅಮಾನತನ್ನು ತೆರವುಗೊಳಿಸಿದ್ದಕ್ಕೆ ಅಸಮಾಧಾನಗೊಂಡಿದ್ದ ಪ್ರಿಯಾಂಕ ಈ ಬಗ್ಗೆ ಟ್ವೀಟ್ ಮಾಡಿ ಪಕ್ಷದ ಮುಜುಗರಕ್ಕೆ ಕಾರಣವಾಗಿದ್ದರು. ಅಲ್ಲದೆ ಕಾಂಗ್ರೆಸ್ ಕಷ್ಟಪಟ್ಟು ದುಡಿಯುವವರ ಬದಲು ಕೊಳಕು ಗೂಂಡಾಗಳಿಗೆ ಪಕ್ಷ ಆದ್ಯತೆ ನೀಡುತ್ತಿದೆ ಎಂದು ಕಿಡಿಕಾರಿದ್ದರು. ಇದೀಗ ಲೋಕಸಭಾ ಚುನಾವಣೆ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ತೊರೆದ ಪ್ರಿಯಾಂಕ ಚತುರ್ವೇದಿ ಶಿವಸೇನೆ ಸೇರಿದ್ದಾರೆ. ಇಂದು ಮುಂಬೈನಲ್ಲಿನ ಠಾಕ್ರೆ ನಿವಾಸ ಮಾತೋಶ್ರೀಗೆ ಭೇಟಿ ನೀಡಿದ್ದ ಪ್ರಿಯಾಂಕ ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದರು. ಬಳಿಕ ತಾವು ಶಿವಸೇನೆ ಪಕ್ಷಕ್ಕೆ ಸೇರ್ಪಡೆಯಾಗಿರುವ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ರಜನಿಕಾಂತ್

ಚೆನ್ನೈ, ಏ. 19: ಅಭಿಮಾನಿಗಳಿಗೆ ನಿರಾಸೆಗೊಳಿಸದೆ, ಮುಂದಿನ ತಮಿಳುನಾಡು ವಿಧಾನಸಭೆಗೆ ಸ್ಪರ್ಧಿಸುವದು ಖಚಿತ ಎಂದು ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರು ಶುಕ್ರವಾರ ಹೇಳಿದ್ದಾರೆ. ತಮ್ಮ ಹೊಸ ‘ದರ್ಬಾರ್’ ಚಲನಚಿತ್ರ ಚಿತ್ರೀಕರಣಕ್ಕಾಗಿ ಮುಂಬೈಗೆ ತೆರಳುವ ಮುನ್ನ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮಿಳುನಾಡು ವಿಧಾನಸಭೆಗೆ ಚುನಾವಣೆ ಯಾವುದೇ ಸಮಯದಲ್ಲಿ ಘೋಷಿಸಿದರೂ ತಾವು ರಚಿಸಲಿರುವ ಪಕ್ಷ ಎಲ್ಲ 234 ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ ಎಂದರು. ರಾಜಕಾರಣಕ್ಕೆ ತಾವು ಪ್ರವೇಶಿಸುವುದಕ್ಕೆ ಉತ್ಸಾಹದಿಂದ ಕಾಯುತ್ತಿರುವ ಅಭಿಮಾನಿಗಳನ್ನು ನಿರಾಸೆ ಪಡಿಸುವದಿಲ್ಲ ಎಂದು ಅವರು ಹೇಳಿದ್ದಾರೆ. ರಾಜ್ಯದಲ್ಲಿ ನಿನ್ನೆ ನಡೆದ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನಲ್ಲಿ ಶೇ. 71.87 ರಷ್ಟು ಮತದಾನವಾಗಿರುವದು ಉತ್ತಮ ಬೆಳವಣಿಗೆಯಾಗಿದೆ ಎಂದು ರಜನಿಕಾಂತ್ ಬಣ್ಣಿಸಿದ್ದಾರೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮೇ 23 ರಂದು ಫಲಿತಾಂಶ ಹೊರಬಿದ್ದ ನಂತರ ಗೊತ್ತಾಗುತ್ತದೆ ಎಂದಿದ್ದಾರೆ. ಅರಿಯಲೂರ್‍ನಲ್ಲಿ ನಡೆದ ಕೋಮು ಘರ್ಷಣೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಹಿಂದಿನ ಚುನಾವಣೆಗಳಲ್ಲಿ ನಡೆದಿದ್ದ ಘರ್ಷಣೆಗಳಿಗೆ ಹೋಲಿಸಿದರೆ, ಈ ಚುನಾವಣೆಗಳಲ್ಲಿ ಹಿಂಸಾಚಾರಗಳ ಪ್ರಮಾಣ ಕಡಿಮೆಯಾಗಿದೆ. ಚುನಾವಣಾ ಆಯೋಗ ಈ ಬಾರಿ ಉತ್ತಮ ಕೆಲಸ ಮಾಡಿದೆ ಎಂದರು.

ವಾಯುಸೇನೆ ದಾಳಿಯನ್ನು ಪ್ರಶ್ನಿಸಿದ ಸಿಎಂ

ಹುಬ್ಬಳ್ಳಿ, ಏ. 19: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮತ್ತೆ ಭಾರತೀಯ ವಾಯುಸೇನೆಯ ದಾಳಿಯನ್ನೇ ಪ್ರಶ್ನಿಸುವಂತಹ ಮಾತುಗಳನ್ನು ಆಡಿದ್ದಾರೆ. 2014ರಲ್ಲಿ ಸಂಪೂರ್ಣ ಬಹುಮತ ಮತ್ತು ಬೆಂಬಲದೊಂದಿಗೆ ಬಿಜೆಪಿ ನೇತೃತ್ವದ ಸರ್ಕಾರ ಆಡಳಿತಕ್ಕೆ ಬಂದಿತ್ತು. ಇಂದಿರಾಗಾಂಧಿಯವರ ನಂತರ ಸಂಪೂರ್ಣ ಸ್ವಾತಂತ್ರ್ಯ ಮೋದಿಯವರಿಗೆ ಸಿಕ್ಕಿದ್ದು, ಅವರೇಕೆ ಸದ್ವಿನಿಯೋಗ ಮಾಡಿಕೊಳ್ಳಲಿಲ್ಲ. ಕಳೆದ 5 ವರ್ಷಗಳಲ್ಲಿ ದೇಶದ ಮತ್ತು ಈ ರಾಜ್ಯದ ಜನತೆಗೆ ಏನೇನು ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಅವರಲ್ಲೇನು ಇಲ್ಲ. ಅದಕ್ಕೆ ನಮ್ಮ ಮೇಲೆ ವೃಥಾ ಆರೋಪ ಮಾಡಿ ಮತದಾರರ ಗಮನ ಬೇರೆಡೆ ಸೆಳೆಯಲು ಯತ್ನಿಸುತ್ತಿದ್ದಾರೆ. ಹುತಾತ್ಮ ಯೋಧರ ಹೆಸರಿನಲ್ಲಿ, ಸೇನೆಯ ಹೆಸರಿನಲ್ಲಿ ಮತ ಕೇಳುತ್ತಿದ್ದಾರೆ. ಪಾಕಿಸ್ತಾನದ ಬಾಲಾಕೋಟ್ ಬಗ್ಗೆ ಇಲ್ಲಿ ಕುಳಿತ ಜನರಿಗೇನು ಗೊತ್ತಿಲ್ಲ. ಅಲ್ಲಿ ಯಾವದೋ ಕಾಡಿನಲ್ಲಿ ಬಾಂಬ್ ಹಾಕಿ ಬಂದಿದ್ದಾರೆ. ನಮಗೆ ಗೊತ್ತಿಲ್ಲ ಎಂದು ಹೇಳುವ ಮೂಲಕ ಸೇನೆಯ ದಾಳಿಯನ್ನೇ ಪ್ರಶ್ನಿಸಿದ್ದಾರೆ.

ಹಾರ್ದಿಕ್ ಪಟೇಲ್‍ಗೆ ಕಪಾಳಮೋಕ್ಷ

ನವದೆಹಲಿ, ಏ. 19: ಲೋಕಸಭೆ ಚುನಾವಣೆ ಹಿನ್ನೆಲೆ ನಡೆಯುತ್ತಿದ್ದ ಕಾಂಗ್ರೆಸ್‍ನ ಜನಾಕ್ರೋಶ ಸಭೆಯಲ್ಲೇ ಕಾರ್ಯಕರ್ತನೊಬ್ಬ ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್‍ಗೆ ಕಪಾಳಮೋಕ್ಷ ಮಾಡಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದು ಈ ವೀಡಿಯೋ ಇದೀಗ ವೈರಲ್ ಆಗಿದೆ. ಗುಜರಾತ್‍ನ ಸುರೇಂದ್ರ ನಗರದಲ್ಲಿ ನಡೆದ ಜನಾಕ್ರೋಶ ರ್ಯಾಲಿಯಲ್ಲಿ ಪಾಟಿದಾರ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದಂತೆ ಕಾರ್ಯಕರ್ತನೊಬ್ಬ ಬಂದು ಕಪಾಳಮೋಕ್ಷ ಮಾಡಿದ್ದಾನೆ. ಕಾರ್ಯಕರ್ತ ತನ್ನ ಬಳಿ ಧನ್ಯವಾದ ಅರ್ಪಿಸಲು ಬರುತ್ತಿದ್ದಾನೆ ಎಂದು ಹಾರ್ದಿಕ್ ಪಟೇಲ್ ಭಾವಿಸಿದ್ದ ಆದರೆ ಕಾರ್ಯಕರ್ತ ದಿಢೀರ್ ಅಂತಾ ಬಂದು ಕಪಾಳಕ್ಕೆ ಬಾರಿಸಿದ್ದಾನೆ. ಈ ವೇಳೆ ವೇದಿಕೆ ಮೇಲಿದ್ದ ಕಾಂಗ್ರೆಸ್ ಮುಖಂಡರು ಗಲಿಬಿಲಿಕೊಂಡರು.

ಮತದಾರರ ಹೆಸರು ನಾಪತ್ತೆ : ತನಿಖೆಗೆ ಆಗ್ರಹ

ಬೆಂಗಳೂರು, ಏ. 19: ರಾಜ್ಯದಲ್ಲಿ ಗುರುವಾರ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಲಕ್ಷಾಂತರ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿ ಹಾಕಿದ್ದು, ಈ ಬಗ್ಗೆ ಚುನಾವಣಾ ಆಯೋಗ ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ನಾಯಕ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್ ಒತ್ತಾಯಿಸಿದ್ದಾರೆ. ಅದರಲ್ಲೂ ಪ್ರಮುಖವಾಗಿ ಬೆಂಗಳೂರು ನಗರದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಮತದಾರರ ಹೆಸರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ. ಪ್ರತಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕನಿಷ್ಟ 50 ರಿಂದ 60 ಸಾವಿರ ಮತದಾರರ ಹೆಸರನ್ನು ಅಳಿಸಿ ಹಾಕಲಾಗಿದೆ. ಕೆಲವೆಡೆ ಹೆಂಡತಿ, ಮತ್ತೆ ಕೆಲವೆಡೆ ಗಂಡನ ಹೆಸರನ್ನು ಡಿಲೀಟ್ ಮಾಡಿದ್ದಾರೆ. ಆಡಳಿತಾರೂಢ ಮೈತ್ರಿ ಸರ್ಕಾರದ ಒತ್ತಡಕ್ಕೆ ಮಣಿದು ಬಿಬಿಎಂಪಿ ಅಧಿಕಾರಿಗಳು ಏಕಾಏಕಿ ಹೆಸರು ಅಳಿಸಿಹಾಕಿದ್ದಾರೆ ಎಂದು ಆರೋಪಿಸಿದರು. ಚುನಾವಣೆಯಲ್ಲಿ ಮತ ಚಲಾಯಿಸಲು ಅಮೇರಿಕಾದಿಂದ ಬಂದಿದ್ದವರಿಗೆ ನಿರಾಶೆಯಾಗಿದೆ. ರಾಜ್ಯ ಮತ್ತು ದೇಶದ ವಿವಿಧ ಭಾಗಗಳಿಂದ ಮತಹಾಕಲು ಬಂದವರು ಮತದಾನ ಮಾಡದಿದ್ದರೆ ಹೇಗೆ?. ಇದರಲ್ಲಿ ಅಧಿಕಾರಿಗಳ ಕೈವಾಡವಿದ್ದು, ಇದಕ್ಕೆ ಕಾರಣರಾದವರ ಮೇಲೆ ಕ್ರಮ ತೆಗೆದುಕೊಳ್ಳುಬೇಕು. ಹೆಸರು ತೆಗೆಸುವ ಮುನ್ನ ನೋಟೀಸ್ ನೀಡಬೇಕಿತ್ತು. ಯಾರೂ ಕೂಡ ತಮ್ಮ ಹೆಸರನ್ನು ತೆಗೆದುಹಾಕಿ ಎಂದು ಕೇಳಿಲ್ಲ. ಹೀಗಿರುವಾಗ ಯಾಕೆ ಡಿಲೀಟ್ ಮಾಡಲಾಗಿದೆ ಎಂಬ ಬಗ್ಗೆ ಚುನಾವಣಾಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದರು.

ಬೆಂಕಿ ಹಚ್ಚಿ ಯುವತಿಯ ಹತ್ಯೆ

ಢಾಕಾ, ಏ. 19: ತನಗೆ ಶಾಲೆಯ ಮುಖ್ಯೋಪಾಧ್ಯಾಯ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರು ನೀಡಿದ ಯುವತಿಯನ್ನು ಬೆಂಕಿಯಿಂದ ಸುಟ್ಟು ಕೊಂದುಹಾಕಿದ ಬೆಚ್ಚಿಬೀಳಿಸುವ ಘಟನೆ ಮುಸ್ಲಿಂ ರಾಷ್ಟ್ರ ಬಾಂಗ್ಲಾದೇಶದಲ್ಲಿ ನಡೆದಿದೆ. 19 ವರ್ಷದ ನುಸ್ರತ್ ಜಹಾನ್ ರಫಿಯ ಸಾವು ಕಳೆದ ವಾರ ದಕ್ಷಿಣ ಏಷ್ಯಾದಲ್ಲಿ ವ್ಯಾಪಕ ಖಂಡನೆಗೆ ಕಾರಣವಾಗಿತ್ತು. ಸಾವಿನ ಹಿಂದೆ ಭಾಗಿಯಾದ ಎಲ್ಲರನ್ನೂ ಶಿಕ್ಷಿಸುವದಾಗಿ ಪ್ರಧಾನ ಮಂತ್ರಿ ಭರವಸೆ ನೀಡಿದ್ದರು. ತನ್ನ ವಿರುದ್ಧ ಪೆÇಲೀಸರಿಗೆ ನೀಡಿದ್ದ ಲೈಂಗಿಕ ಕಿರುಕುಳ ದೂರನ್ನು ಹಿಂತೆಗೆದುಕೊಳ್ಳುವಂತೆ ನುಸ್ರತ್ ರಫಿ ವಿರುದ್ಧ ಶಿಕ್ಷಕ ಮತ್ತು ಆತನ ಬೆಂಬಲಿಗರು ಒತ್ತಡ ಹೇರಿದ್ದರು. ಆದರೆ ನುಸ್ರತ್ ನಿರಾಕರಿಸಿದಾಗ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಸುಟ್ಟುಹಾಕಲಾಗಿದೆ. ಘಟನೆಗೆ ಸಂಬಂಧಪಟ್ಟಂತೆ ಇಂದು ಬಂಧಿತರಾಗಿರುವ 17 ಮಂದಿ ಪೆÇಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ಪ್ರಾಂಶುಪಾಲರ ಆದೇಶದ ಮೇರೆಗೆ ಆಕೆಯನ್ನು ಕೊಂದಿರುವದಾಗಿ ತಪೆÇ್ಪಪ್ಪಿಕೊಂಡಿದ್ದಾರೆ ಎಂದು ಪೆÇಲೀಸರು ಹೇಳಿದ್ದಾರೆ.

ವಿದ್ಯಾರ್ಥಿನಿ ಮಧು ಆತ್ಮಹತ್ಯೆಯಲ್ಲ ಕೊಲೆ

ರಾಯಚೂರು, ಏ. 19: ಇತ್ತೀಚೆಗೆ ರಾಯಚೂರಿನಲ್ಲಿ ನಡೆದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಆತ್ಮಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ದೊರೆತಿದ್ದು, ಇದು ಆತ್ಮಹತ್ಯೆಯಲ್ಲ ಬದಲಿಗೆ ಅತ್ಯಾಚಾರ ಮತ್ತು ಕೊಲೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ನಗರದ ಮಾಣಿಕಪ್ರಭು ದೇವಸ್ಥಾನದ ಹಿಂಭಾಗದ ಬೆಟ್ಟದ ಪ್ರದೇಶದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಸಾವಿನ ಪ್ರಕರಣ ಈಗ ಹೊಸ ಟ್ವಿಸ್ಟ್ ಪಡೆದಿದೆ. ನೇತಾಜಿ ನಗರ ಪೆÇಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಎಂದು ದಾಖಲಾಗಿದ್ದ ಪ್ರಕರಣ ಈಗ ಅತ್ಯಾಚಾರವೆಸಗಿ, ಕೊಲೆ ಎಂದು ದಾಖಲಾಗಿದೆ. ಮೃತ ವಿದ್ಯಾರ್ಥಿನಿ ಮಧು ತಾಯಿ ರೇಣುಕಾದೇವಿ ನೀಡಿದ ದೂರಿನ ಮೇರೆಗೆ ಪೆÇಲೀಸರು ಅತ್ಯಾಚಾರ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.