ಮಡಿಕೇರಿ, ಏ. 19: ಮುಂಬರಲಿರುವ ಆಸ್ಟ್ರೇಲಿಯಾ ಪ್ರವಾಸ ಹಾಗೂ ಒಲಂಪಿಕ್ಸ್ ಅರ್ಹತಾ ಸುತ್ತಿನ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲಿರುವ ಭಾರತ ಹಾಕಿ ತಂಡದ ಆಯ್ಕೆಗಾಗಿ ಹಾಕಿ ಇಂಡಿಯಾ ವತಿಯಿಂದ ಬೆಂಗಳೂರಿಮನ ಸಾಯಿ ಕೇಂದ್ರದಲ್ಲಿ ಶಿಬಿರ ನಡೆಯುತ್ತಿದೆ. ಈ ಶಿಬಿರದಲ್ಲಿ ಪ್ರಸ್ತುತ 60 ಸಂಭವನೀಯ ಆಟಗಾರರಿದ್ದು, ಇವರ ಪೈಕಿ ಕೊಡಗು ಜಿಲ್ಲೆಯ ಐವರು ಸೇರಿದ್ದಾರೆ.ಆಟಗಾರರಾದ ಎಸ್.ವಿ. ಸುನಿಲ್, ಆಭರಣ್ ಸುದೇವ್, ಕೆ.ಪಿ. ಸೋಮಯ್ಯ, ಕೆ.ಟಿ. ಕಾರ್ಯಪ್ಪ ಹಾಗೂ ಐ.ಎ. ಪೂವಣ್ಣ ಅವರು ಶಿಬಿರದಲ್ಲಿದ್ದು, 60 ಆಟಗಾರರ ಪೈಕಿ 33 ಮಂದಿಯನ್ನು ತಾ. 21 ರಂದು ಅಂತಿಮಗೊಳಿಸಲಿರುವದಾಗಿ ಹಾಕಿ ಕರ್ನಾಟಕದ ಕಾರ್ಯದರ್ಶಿ ಡಾ. ಅಂಜಪರವಂಡ ಬಿ. ಸುಬ್ಬಯ್ಯ ಅವರು ತಿಳಿಸಿದ್ದಾರೆ. ರಾಷ್ಟ್ರೀಯ ಮಹಿಳಾ ತಂಡದ ಶಿಬಿರದಲ್ಲಿ ಜಿಲ್ಲೆಯ ಆಟಗಾರ್ತಿ ಮಲ್ಲಮಾಡ ಲೀಲಾವತಿ ಅವರಿದ್ದರೆ, ಜೂನಿಯರ್ ವಿಭಾಗದಲ್ಲಿ ಸೂರ್ಯ ಎನ್.ಎಂ., ಪೂವಣ್ಣ ಸಿ.ಬಿ. ಹಾಗೂ ಹೆಚ್. ತ್ರಿಶೂಲ್ ಗಣಪತಿ ಅವರುಗಳು ಅವಕಾಶ ಪಡೆದಿದ್ದು, ಇವರ ಪೈಕಿ ಸೂರ್ಯ ಅಂತಿಮ 33ರ ಪಟ್ಟಿಯಲ್ಲಿ ಸೇರ್ಪಡೆ ಗೊಂಡಿರುವದಾಗಿಯೂ ಸುಬ್ಬಯ್ಯ ಮಾಹಿತಿ ನೀಡಿದ್ದಾರೆ.