ಮಡಿಕೇರಿ, ಏ. 17: ದಕ್ಷಿಣ ಕೊಡಗಿನ ಗಡಿ ಭಾಗವಾಗಿರುವ ನೆರೆಯ ಕೇರಳ ರಾಜ್ಯದ ಒತ್ತಿನಲ್ಲಿ ಬರುವ ಕುಟ್ಟದಲ್ಲಿ ‘ಕುಟ್ಟ ಜಾತ್ರೆ’ ಎಂದೇ ಪ್ರತೀತಿ ಪಡೆದಿರುವ ಸಾವಿರಾರು ಭಕ್ತಾದಿಗಳನ್ನು ಜಾತಿ - ಮತ - ಭೇದವಿಲ್ಲದೆ ಸೆಳೆಯುವ ಶ್ರೀ ಕಾಳಿ (ಕರ್‍ಂಗಾಳಿ) ದೇವರ ಉತ್ಸವಕ್ಕೆ ತಾ. 16ರಿಂದ ವಿದ್ಯುಕ್ತ ಚಾಲನೆ ದೊರೆತಿದೆ. ಈ ಜಾತ್ರೆಗೆ ಕುಟ್ಟ ವಿಭಾಗ ಸೇರಿದಂತೆ ಸುತ್ತಮುತ್ತಲಿನ ಗ್ರಾಮ ವ್ಯಾಪ್ತಿಯಲ್ಲಿ ವಿಶೇಷ ಮಹತ್ವವಿದೆಯಾದರೂ ಇದು ಹೆಚ್ಚು ಪ್ರಚಾರವನ್ನು ಪಡೆದಿಲ್ಲ. ಕುಟ್ಟ ಸುತ್ತಮುತ್ತಲಿನ ಸಮಸ್ತ ಗ್ರಾಮಸ್ಥರು ಸೇರಿದಂತೆ ನೆರೆಯ ಗ್ರಾಮಗಳ ಭಕ್ತಾದಿಗಳು ಈ ಜಾತ್ರೆಯ ಸಂದರ್ಭ ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಕಾಳಿಯನ್ನು ಆರಾಧಿಸುವದು ವಿಶೇಷ. ಕುಟ್ಟ ಪಟ್ಟಣದ ಸನಿಹದ ನಾಥಂಗಲ್‍ನಲ್ಲಿ ಕರ್‍ಂಗಾಳಿ ದೇವ ನೆಲೆಯಿದ್ದು, ತಾ. 16ರಂದು ಶುದ್ಧ ಕಳಸದ ಮೂಲಕ ಈ ವರ್ಷದ ಕೈಂಕರ್ಯಗಳು ಆರಂಭಗೊಂಡಿವೆ. ಅಲ್ಲಿನ ಒಕ್ಕಲಿಗರ ಅಶೋಕ್ (ಮೊದಲ ಪುಟದಿಂದ) ಎಂಬವರ ಉಸ್ತುವಾರಿಯಲ್ಲಿ ಈ ದೇವತಾ ಕಾರ್ಯಗಳು ನಡೆದುಕೊಂಡು ಬರುತ್ತಿದ್ದು, ಮೇ 1ರ ತನಕ ಮುಂದುವರಿಯಲಿದೆ ಎಂದು ಸ್ಥಳೀಯ ಹಿರಿಯರಾದ ಮಾಚಿಮಾಡ ಸಿ. ಸುಬ್ಬಯ್ಯ ಅವರು ಮಾಹಿತಿ ನೀಡಿದ್ದಾರೆ. ಕೇರಳದಿಂದ ಆಗಮಿಸುವ ತಂಡ ಈ ಉತ್ಸವವನ್ನು ನಡೆಸುವದು ವಾಡಿಕೆ. ಏ.28ರವರೆಗೆ ಊರಿನವರ ಬೊಳ್ಳಾಟ, ತಾ. 29ರಂದು ದೇವರ ಬೊಳ್ಳಾಟ ಜರುಗಲಿದೆ.
ತಾ.30ರಂದು ಸಂಜೆ ಆದ ಬಳಿಕ ದೇವರ ವಿಗ್ರಹದೊಂದಿಗೆ ಸುಮಾರು 4 ಕಿ.ಮೀ. ದೂರದಲ್ಲಿರುವ ಪೂಜೆಕಲ್ಲುವಿನಲ್ಲಿರುವ ಗುಡಿಗೆ ಒಡ್ಡೋಲಗ, ಚಂಡೆ ವಾದ್ಯದೊಂದಿಗೆ ತೆರಳಿ ಅಲ್ಲಿ ಪೂಜೆ ಹಾಗೂ ಸ್ನಾನ ನಡೆಯಲಿದೆ. ಬಳಿಕ ಇದೇ ಮಾರ್ಗವಾಗಿ ದೇವಾಲಯವನ್ನು ತಲಪಲಾಗುವದು. ಅಂದು ರಾತ್ರಿಯಿಡೀ ವಿವಿಧ ತೆರೆಗಳು ಜರುಗುತ್ತವೆ.
ಮೇ 1ರಂದು ಬೆಳಿಗ್ಗೆ ಬಿದಿರಿನಿಂದ ಮಾಡಿದ ಸುಮಾರು 30 ಅಡಿ ಎತ್ತರದ ಬೃಹತ್ ಮುಡಿ ಕಾರ್ಯ ನಡೆಯುತ್ತದೆ. ಈ ಸಂದರ್ಭ ಸ್ಥಳೀಯ ನಿವಾಸಿಗಳು, ತವರುಮನೆ ಹುಡುಗಿಯರೂ ಆಗಮಿಸಿ ಹರಕೆ- ಕಾಣಿಕೆ ಒಪ್ಪಿಸುತ್ತಾರೆ. ಸ್ಥಳೀಯರೊಂದಿಗೆ ಮುಸಲ್ಮಾನ ಜನಾಂಗದವರೂ ಆಗಮಿಸಿ ಭಂಡಾರ ಹಾಕುವದೂ ಇಲ್ಲಿನ ಒಂದು ವಿಶೇಷತೆಯಾಗಿದೆ ಎಂದು ಸುಬ್ಬಯ್ಯ ಅವರು ಮಾಹಿತಿ ನೀಡಿದ್ದಾರೆ.
ಕುಟ್ಟಜಾತ್ರೆ ಬಂತೆಂದರೆ ಈ ವಿಭಾಗದಲ್ಲಿ ಕಾರ್ಮಿಕ ವರ್ಗದವರಿಗೂ ಹೆಚ್ಚಿನ ಬೇಡಿಕೆ- ಮುಂಗಡ ಹಣ, ಕಾರ್ಮಿಕರು ಒಂದು ಮನೆಯಿಂದ ಮತ್ತೊಂದು ಮನೆಗೆ ತೆರಳುವದು ಇಂತಹ ವಿಚಾರಗಳು ಕೂಡ ಇಲ್ಲಿ ಸಾಮಾನ್ಯ.