ವೀರಾಜಪೇಟೆ, ಏ.15: ದೇಶಾದ್ಯಂತ ಕಾರ್ಮಿಕರಾಗಿ ದುಡಿಯುತ್ತಿರುವ ಅಸಂಖ್ಯಾತ ಕಾರ್ಮಿಕರಿಗೆ ಅವರ ಮೂಲ ಸೌಲಭ್ಯಗಳೊಂದಿಗೆ ಅವರಿಗೆ ಸೂಕ್ತ ರಕ್ಷಣೆ ನೀಡಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ರಾಜ್ಯ ಅಸಂಘಟಿತ ಕಾರ್ಮಿಕರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ: ಶಾಂತವೀರ ನಾಯ್ಕ್ ಆರೋಪಿಸಿದರು.
ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕಾಂಗ್ರೆಸ್ ಪಕ್ಷದ ಪ್ರಧಾನಿಯಾಗಿದ್ದ ಸಮಯದಲ್ಲಿ ಮನಮೋಹನ್ ಸಿಂಗ್ ಅವರು ಕಾರ್ಮಿಕರ ಬಗ್ಗೆ ಒಲವು ತೋರಿಸಿ ಅವರಿಗೆ ಮೂಲಸೌಲಭ್ಯದೊಂದಿಗೆ ಆರ್ಥಿಕವಾಗಿ ಮುಂದುವರೆಯಲು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದ್ದರು. ಕಾರ್ಮಿಕರು ನೆಮ್ಮದಿಯಿಂದ ಜೀವನ ಸುಧಾರಣೆಗೆ ಅವಕಾಶ ಮಾಡಿಕೊಟ್ಟಿದ್ದರು. ಬಿಜೆಪಿ ಸರಕಾರ ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸದೆ ಈಗ ಅವರ ಮತಕ್ಕಾಗಿ ಹವಣಿಸುತ್ತಿದೆ ಎಂದು ದೂರಿದರು.
ಜೆ.ಡಿ.ಎಸ್. ಮಾಜಿ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಮಾತನಾಡಿ ಪ್ರಕೃತಿ ವಿಕೋಪದಿಂದ ಹಲವು ಮಂದಿ ಆಸ್ತಿ ಪಾಸ್ತಿ ಕಳೆದುಕೊಂಡು ಬೀದಿ ಪಾಲಾದಾಗಲೂ ಪ್ರಧಾನಿಯವರನ್ನು ಭೇಟಿ ಮಾಡಿ ವೈಮಾನಿಕ ಸಮೀಕ್ಷೆಯ ವರದಿ ಮೇಲೆ ಪರಿಹಾರ ವಿತರಿಸಲು ಸಂಸದರು ವಿಫಲಗೊಂಡಿದ್ದಾರೆ. ಸಂತ್ರಸ್ತರಿಗೆ ಕೇಂದ್ರ ಸರಕಾರದಿಂದ ಚಿಕ್ಕಾಸು ನೀಡದೆ ವಂಚಿಸಿದ್ದಾರೆ ಎಂದು ಪ್ರತಾಪ್ ಸಿಂಹ ಬಗ್ಗೆ ಆರೋಪಿಸಿದರು.
ಗೋಷ್ಠಿಯಲ್ಲಿ ರಾಜ್ಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಇ. ಅಫ್ಜಲ್, ಜಿಲ್ಲಾ ಸಮಿತಿ ಅಧ್ಯಕ್ಷ ಎನ್. ನರೇಂದ್ರ ಕಾಮತ್, ಉಪಾಧ್ಯಕ್ಷ ಬಿ.ಎಸ್.ಸತೀಶ್, ವೀರಾಜಪೇಟೆ ಬ್ಲಾಕ್ ಉಪಾಧ್ಯಕ್ಷ ಮುಜಾಹಿದ್ ರೆಹಮಾನ್ ತಾಹ, ಕಾರ್ಯದರ್ಶಿ ತಬ್ಸೀರ್ ಅಹಮ್ಮದ್, ಯುವಕ ಕಾಂಗ್ರೆಸ್ ಅಧ್ಯಕ್ಷ ರಕ್ಷಿತ್ ಚಂಗಪ್ಪ., ಪಟ್ಟಣ ಪಂಚಾಯಿತಿ ಸದಸ್ಯರುಗಳಾದ ಡಿ.ಪಿ.ರಾಜೇಶ್, ಪಟ್ಟಡ ರಂಜಿ ಪೂಣಚ್ಚ ಮತ್ತಿತರರು ಹಾಜರಿದ್ದರು.