ಮಡಿಕೇರಿ, ಏ. 14: ನಗರದ ಶ್ರೀ ರಾಮೋತ್ಸವ ಸಮಿತಿಯ ಆಶ್ರಯದಲ್ಲಿ ವರ್ಷಂಪ್ರತಿಯಂತೆ ನಡೆಯುವ ರಾಮೋತ್ಸವ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಪೂಜೆಗಳು ಇಂದು ಹನುಮಂತೋತ್ಸವದ ವಿಶೇಷ ಪೂಜೆಯೊಂದಿಗೆ ಸಮಾರೋಪಗೊಂಡಿತು. ಶ್ರೀ ಓಂಕಾರೇಶ್ವರ ದೇವಾಲಯ ಬಳಿಯ ಓಂಕಾರ ಸದನದಲ್ಲಿ ತಾ. 6 ರಿಂದ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಧಾರ್ಮಿಕ ಪೂಜಾದಿಗಳು ಮುಂದುವರೆದಿವೆ.

1894 ರಿಂದ ನಗರದ ಶ್ರೀ ಆಂಜನೇಯ ಗುಡಿ ಆವರಣದಲ್ಲಿ ಮುಂದುವರೆಸಿಕೊಂಡು ಬಂದಿರುವ ರಾಮೋತ್ಸವ ಪ್ರಸಕ್ತ 124 ವಸಂತಗಳನ್ನು ಪೂರೈಸುವದರೊಂದಿಗೆ, ಬರುವ ವರ್ಷ 125ನೇ ಸಂಭ್ರಮಾಚರಣೆಗೆ ತಯಾರಿಯಲ್ಲಿದೆ. ಪ್ರಸಕ್ತ ಕಾರ್ಯಕ್ರಮದಲ್ಲಿ ತಾ. 6 ರಂದು ಬೆಂಗಳೂರಿನ ಅಶಿತಾ ಅಶೋಕ್ ಹಾಗೂ ಕಾವ್ಯ ಮನೋಜ್‍ರಿಂದ ನೃತ್ಯರೂಪಕ, ತಾ. 7 ರಂದು ಚೆನ್ನೈನ ಸಂಗೀತಾ ವಿದುಷಿ ಪದ್ಮ ಮುರುಳಿ ಅವರಿಂದ ಕರ್ನಾಟಕ ಸಂಗೀತ, ತಾ. 8 ರಂದು ಮಡಿಕೇರಿಯ ರಾಮಾಂಜನೇಯ ಭಜನಾ ಮಂಡಳಿಯಿಂದ ಭಜನೆ ನೆರವೇರಿತು.

ಅಲ್ಲದೆ ತಾ. 9 ರಂದು ಮೈಸೂರಿನ ವಸಂತಲಕ್ಷ್ಮಿ ಅವರಿಂದ ಹರಿಕಥೆ, ತಾ. 10 ರಂದು ಬೆಂಗಳೂರಿನ ಶ್ರೀ ಕಾಂತಂ ನಾಗೇಂದ್ರ ಶಾಸ್ತ್ರಿ ಕರ್ನಾಟಕ ಸಂಗೀತ, ತಾ. 12 ರಂದು ಮೈಸೂರಿನ ಆರ್.ಕೆ. ಪದ್ಮನಾಭ ಅವರಿಂದ ವಾದ್ಯವೃಂದದೊಂದಿಗೆ, ಇಂದು ಶ್ರೀ ರಾಮನವಮಿ ಪ್ರಯುಕ್ತ ಗಣಹೋಮ ಸಹಿತ ವಿಶೇಷ ಪೂಜೆ ನೆರವೇರಿತು. ಅಲ್ಲದೆ ನಗರದ ಶಿವಶಕ್ತಿ ಮಹಿಳಾ ಬಳಗದಿಂದ ವಿಷ್ಣು ಸಹಸ್ರನಾಮ ಪಾರಾಯಣ, ರಾಮರಕ್ಷಾ ಸ್ತ್ರೋತ್ರದೊಂದಿಗೆ, ಮಹಾಪೂಜೆ ಜರುಗಿತು. ಸಂಜೆ ಪುತ್ತೂರು ಶ್ರೀ ಆಂಜನೇಯ ಮಹಿಳಾ ವೃಂದದಿಂದ ತಾಳೆಮದ್ದಳೆ ಪ್ರದರ್ಶನಗೊಂಡಿತು.

ಇಂದು ಸಮಾರೋಪ ಕಾರ್ಯಕ್ರಮದಲ್ಲಿ ಮಡಿಕೇರಿಯ ಜಯಲಕ್ಷ್ಮೀ ರಮೇಶ್ ಸಂಗೀತಾ, ಭಾರತೀಯ ವಿದ್ಯಾಭವನ ಮಕ್ಕಳಿಂದ ಭಜನೆ, ಬೆಂಗಳೂರಿನ ಎನ್.ಕೆ. ಮೋಹನ್ ಕುಮಾರ್ ಅವರಿಂದ ಸಂಜೆಯ ಹರಿಕಥೆಯೊಂದಿಗೆ ವಾರ್ಷಿಕ ರಾಮೋತ್ಸವ ಮುಕ್ತಾಯಗೊಂಡಿತು.

ರಾಮನವಮಿ ಶೋಭಾಯಾತ್ರೆ

ಸೋಮವಾರಪೇಟೆ: ಶ್ರೀರಾಮ ನವಮಿ ಅಂಗವಾಗಿ ಇಲ್ಲಿನ ಶ್ರೀ ಆಂಜನೇಯ ಸ್ವಾಮಿ ದೇವಾಲಯ ವತಿಯಿಂದ ಆಯೋಜಿಸಲಾಗಿದ್ದ ಅಲಂಕೃತ ಮಂಟಪಗಳ ಶೋಭಾಯಾತ್ರೆ ಪಟ್ಟಣದಲ್ಲಿ ಅದ್ಧೂರಿಯಾಗಿ ನಡೆಯಿತು. ಸಾವಿರಾರು ಮಂದಿ ಶೋಭಾಯಾತ್ರೆಯಲ್ಲಿ ಭಾಗವಹಿಸುವ ಮೂಲಕ ಶ್ರೀರಾಮನ ಪರ ಜೈಕಾರ ಕೂಗಿದರು. ರಾಮನ ವಿಗ್ರಹವನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಜಾನಪದ ಕಲಾತಂಡಗಳಾದ ಡೊಳ್ಳುಕುಣಿತ, ಸುಗ್ಗಿ ಕುಣಿತ, ಚಂಡೆ ವಾದ್ಯಗಳೊಂದಿಗೆ ಅದ್ಧೂರಿಯಾಗಿ ಶೋಭಾಯಾತ್ರೆ ನಡೆಯಿತು.

ಆಂಜನೇಯ ದೇವಾಲಯ ಸಮಿತಿ, ಬಜೆಗುಂಡಿ, ಕರ್ಕಳ್ಳಿ, ಹಾನಗಲ್ಲು, ಕಾನ್ವೆಂಟ್‍ಬಾಣೆ, ಗೌಡಸಮಾಜ ರಸ್ತೆ, ಆಲೇಕಟ್ಟೆ ರಸ್ತೆ, ರೇಂಜರ್ ಬ್ಲಾಕ್, ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಪೇಟೆ ರಾಮ ಸಮಿತಿ ವತಿಯಿಂದ ವಿವಿಧ ಕಲಾಕೃತಿ, ಸ್ತಬ್ಧಚಿತ್ರಗಳು, ಶ್ರೀರಾಮ, ಸೀತಾರಾಮ, ಆಂಜನೇಯ ಮೂರ್ತಿಗಳ ವಿಗ್ರಹಗಳನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು.

ಶ್ರೀರಾಮ ನವಮಿ ಆಚರಣಾ ಸಮಿತಿಯ ಸುಭಾಷ್, ಸಿ.ಪಿ. ಗೋಪಾಲ್, ಪೇಟೆ ರಾಮ ಸಮಿತಿಯ ಸುಜಿತ್, ಶರತ್, ರಮೇಶ್ ಸೇರಿದಂತೆ ಸಾವಿರಾರು ಮಂದಿ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದರು. ಸೋಮವಾರಪೇಟೆ, ಸುಂಟಿಕೊಪ್ಪ, ಕುಶಾಲನಗರ ಠಾಣೆಗಳಿಂದ ಅಗತ್ಯ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು.

ಇಲ್ಲಿನ ಶ್ರೀರಾಮ ಮಂದಿರದಲ್ಲಿ ರಾಮ ನವಮಿ ಅಂಗವಾಗಿ ವಿಶೇಷ ಪೂಜೆಗಳು ನಡೆದವು. ದೇವಾಲಯದ ಪ್ರಧಾನ ಅರ್ಚಕ ಮೋಹನ್‍ಮೂರ್ತಿ ಅವರ ಪೌರೋಹಿತ್ಯದಲ್ಲಿ ಪೂಜಾ ಕೈಂಕರ್ಯಗಳು ನೆರವೇರಿದವು. ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಪಟ್ಟಣದ ಪ್ರಮುಖ ಮಾರ್ಗದಲ್ಲಿ ಮೆರವಣಿಗೆ ನಡೆಸಲಾಯಿತು. ಭಕ್ತಾದಿಗಳಿಗೆ ಪಾನಕ, ಮಜ್ಜಿಗೆ, ಕೋಸಂಬರಿ ವಿತರಿಸಲಾಯಿತು. ದೇವಾಲಯ ಸಮಿತಿ ಅಧ್ಯಕ್ಷ ರಾಮ್‍ಶೆಟ್ಟಿ, ಪ್ರಮುಖರಾದ ಬಿ.ಕೆ. ಉದಯಕುಮಾರ್, ರೇವಣ್ಣ, ಸತ್ಯ, ರಾಂ ಪ್ರಸಾದ್, ರಮೇಶ್, ಅರುಣ್‍ಕುಮಾರ್, ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕುಶಾಲನಗರ: ಕುಶಾಲನಗರದ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಶ್ರೀರಾಮ ಸೇವಾ ಸಮಿತಿ ವತಿಯಿಂದ 21ನೇ ವರ್ಷದ ಶ್ರೀ ರಾಮೋತ್ಸವಕ್ಕೆ ಚಾಲನೆ ನೀಡಲಾಯಿತು.

ರಥಬೀದಿಯಲ್ಲಿರುವ ಬ್ರಾಹ್ಮಣದ ಕ್ಷೇಮಾಭಿವೃದ್ಧಿ ಸಂಘದ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣಪತಿ ಪೂಜೆ, ನವಗ್ರಹ ಮೃತ್ಯುಂಜಯ ಪೂಜೆ, ಅಭಿಷೇಕ, ರಾಮಾಯಣ ಪಾರಾಯಣ, ರಾಮತಾರಕ ಜಪ, ಮಹಾಮಂಗಳಾರತಿ, ಅಷ್ಟವಧಾನ ಸೇವೆ ನಂತರ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಕೆ.ಕೆ.ಸುಬ್ಬರಾಮು ನೇತೃತ್ವದಲ್ಲಿ ಪೂಜಾ ವಿಧಿ-ವಿಧಾನಗಳು ಜರುಗಿದವು.

ಶ್ರೀರಾಮ ಸೇವಾ ಸಮಿತಿ ಅಧ್ಯಕ್ಷ ಕೆ.ಎಸ್.ರಾಜಶೇಖರ್, ಕಾರ್ಯದರ್ಶಿ ಎಸ್.ಅನಿಲ್, ಖಜಾಂಚಿ ಸುಬ್ರಮಣ್ಯ ಭಟ್, ನಿರ್ದೇಶಕರಾದ ಗೋಪಾಲಕೃಷ್ಣ, ರಮಾ ವಿಜಯೇಂದ್ರ, ರಜನಿ ಪ್ರದೀಪ್, ವಿಜಯೇಂದ್ರ ಮತ್ತಿತರರು ಇದ್ದರು.

ರಾಮೋತ್ಸವ ಅಂಗವಾಗಿ ತಾ. 13 ರಿಂದ 23 ರ ತನಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಇಂದು ಸಂಜೆ 6.30 ಕ್ಕೆ ಮಂಕುತಿಮ್ಮನ ಕಗ್ಗ ಆಧಾರಿತ ಜಾದೂ ಪ್ರದರ್ಶನವನ್ನು ದೂರದರ್ಶನ ಕಲಾವಿದ ಎಂ.ಡಿ.ಕೌಶಿಕ್ ನಡೆಸಿಕೊಟ್ಟರು. 15 ರಂದು ಸಂಜೆ 6.30 ಕ್ಕೆ ಯಕ್ಷಗಾನ ತಾಳಮದ್ದಲೆ, ಕರ್ಣಾವಸಾನ ಪ್ರಸಂಗ ನಡೆಯಲಿದೆ. 16 ರಂದು ಸಂಜೆ ವಿಪ್ರ ಬಾಂಧವರಿಂದ ಮಾತು ಮಂಥನ ಕಾರ್ಯಕ್ರಮ, 17 ರಂದು ಸೀತಾಕಲ್ಯಾಣ ಮಹೋತ್ಸವ, ಸಂಜೆ 6.30 ಕ್ಕೆ ಭರತನಾಟ್ಯ ಕಾರ್ಯಕ್ರಮ ಜರುಗಲಿದೆ. 18 ಕ್ಕೆ ರಸಪ್ರಶ್ನೆ ಕಾರ್ಯಕ್ರಮ, 19 ಕ್ಕೆ ಶ್ರೀ ಸತ್ಯನಾರಾಯಣ ಪೂಜೆ,ಸಂಜೆ ಆಧ್ಯಾತ್ಮ ಮತ್ತು ವಿಜ್ಞಾನ ವಿಷಯದ ಬಗ್ಗೆ ಚಿಕ್ಕ ಅಳುವಾರ ವಿಶ್ವವಿದ್ಯಾಲಯದ ಪ್ರೊ.ಡಾ.ಚಂದ್ರಶೇಖರ್ ಜೋಷಿ ಅವರಿಂದ ಉಪನ್ಯಾಸ ಕಾರ್ಯಕ್ರಮ, ಏ.20 ರಂದು ಬ್ರಾಹ್ಮಣ ಅಂತರ್‍ದೃಷ್ಟಿ-ಬಾಹ್ಯನೋಟ ವಿಷಯದ ಮೇಲೆ ಉ.ರಾ.ನಾಗೇಶ್ ಉಪನ್ಯಾಸ ಏರ್ಪಡಿಸಲಾಗಿದೆ. 21 ರಂದು ಡಾ.ಉದಯಕುಮಾರ್ ಅವರಿಂದ ಆರೋಗ್ಯದಲ್ಲಿ ಆಯುರ್ವೇದ ಉಪನ್ಯಾಸ ಮತ್ತು ಪ್ರಶ್ನಾವಳಿ ಕಾರ್ಯಕ್ರಮ ಜರುಗಲಿದೆ. 22 ರಂದು ಶ್ರೀರಾಮ ಪಟ್ಟಾಭಿಷೇಕ ಕಾರ್ಯಕ್ರಮ ನಡೆಯಲಿದೆ. 23 ರಂದು ಸಮಾರೋಪ ಸಮಾರಂಭ ನಡೆಯಲಿದ್ದು ಅಂದು ಹನುಮಂತೋತ್ಸವ ಕಾರ್ಯಕ್ರಮ ಜರುಗಲಿದೆ ಎಂದು ಶ್ರೀರಾಮ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.

ರಾಮದೇವರಿಗೆ ಅಲಂಕಾರ

ಶನಿವಾರಸಂತೆ : ಶನಿವಾರಸಂತೆಯ ರಾಮ ಮಂದಿರದಲ್ಲಿ ರಾಮನವಮಿ ಪ್ರಯುಕ್ತ ದೇವರಿಗೆ ತುಳಸಿ ಹಾಗೂ ವಿಳ್ಯದೆಲೆ ಅಲಂಕಾರ ಮಾಡಲಾಗಿತ್ತು. ಅರ್ಚಕ ಎನ್.ಕೆ. ನಾಗೇಶ್ ಭಟ್ ಪೂಜಾ ಕೈಂಕರ್ಯ ನೆರವೇರಿಸಿದರು. ಭಕ್ತರಿಗೆ ಪ್ರಸಾದ ವಿನಿಯೋಗವಾಯಿತು. ಸೇವಾ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.