ಕುಶಾಲನಗರ, ಏ. 14: ಕೊಡಗು ಕ್ರೀಡಾ ಕ್ಷೇತ್ರದಲ್ಲಿ ಹಾಕಿ, ಕ್ರಿಕೆಟ್, ಬ್ಯಾಡ್ಮಿಂಟನ್, ಅಥ್ಲೆಟಿಕ್ಸ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಜಿಲ್ಲೆಯ ಹಲವು ಪ್ರತಿಭೆಗಳು ರಾಷ್ಟ್ರೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆ ಹಾಗೂ ಸಾಮಥ್ರ್ಯ ತೋರುತ್ತಿರುವ ನಡುವೆ ಇದೀಗ ಜಿಲ್ಲೆಯ ಯುವಕನೊಬ್ಬ ಗ್ರಾಮೀಣ ಕ್ರೀಡೆಯಾದ ಕಬಡ್ಡಿಯಲ್ಲಿ ತನ್ನ ಸಾಮಥ್ರ್ಯ ತೋರುವದರೊಂದಿಗೆ ರೂ. 10 ಲಕ್ಷ ಬಿಡ್‍ಗೆ ಬೆಂಗಾಲ್ ವಾರಿಯರ್ಸ್ ತಂಡಕ್ಕೆ ಸೇರ್ಪಡೆ ಗೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ.
ದೇಶದ ಪ್ರತಿಷ್ಠಿತ ಪ್ರೋ ಕಬಡ್ಡಿ ಲೀಗ್‍ಗೆ ಕರ್ನಾಟಕದಿಂದ ಮೂವರು ಆಯ್ಕೆಯಾಗಿದ್ದು ಕುಶಾಲನಗರದ ಯುವಕ ಎ.ಆರ್. ಅವಿನಾಶ್ (27) ಮುಂಬೈನಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ 7ನೇ ಆವೃತಿಯ ಲೀಗ್‍ಗೆ ಆಯ್ಕೆಯಾಗಿದ್ದಾನೆ.
ಮಂಡ್ಯದ ರಾಕೇಶ್, ತುಮಕೂರಿನ ಪವನ್ ಸೇರಿದಂತೆ ರಾಜ್ಯದಿಂದ ಮೂರು ಜನ ಈ ಬಾರಿಯ ಲೀಗ್‍ಗೆ ಆಯ್ಕೆಯಾಗಿದ್ದಾರೆ. ಕುಶಾಲನಗರದ ಗ್ರಾಮೀಣ ಪ್ರದೇಶವಾದ ಮುಳ್ಳುಸೋಗೆಯ ರಾಜೇಗೌಡ, ಪುಷ್ಪ ದಂಪತಿಗಳ ಪುತ್ರನಾಗಿರುವ ಎ.ಆರ್. ಅವಿನಾಶ್ ಚಿಕ್ಕಂದಿನಿಂದಲೇ ಕಬಡ್ಡಿ ಕ್ರೀಡೆ ಬಗ್ಗೆ ಆಸಕ್ತಿ ಹೊಂದಿದ್ದರು. ಕುಶಾಲನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಬಡ್ಡಿ ಕ್ರೀಡೆಯಲ್ಲಿ ತನ್ನನ್ನು ತೊಡಗಿಸಿಕೊಂಡು ಸ್ಥಳೀಯ ಜ್ಞಾನ ಭಾರತಿ ಸ್ಪೋಟ್ರ್ಸ್ ಕ್ಲಬ್‍ನಲ್ಲಿ ತರಬೇತಿ ಪಡೆದಿದ್ದಾರೆ. ಜ್ಞಾನ ಭಾರತಿ ಸ್ಪೋಟ್ರ್ಸ್ ಕ್ಲಬ್‍ನ ದೈಹಿಕ ಶಿಕ್ಷಕ ಉತ್ತಪ್ಪ ಅವರ ಶಿಷ್ಯನಾಗಿ ಇತ್ತೀಚೆಗೆ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು.
ಅವಿನಾಶ್ ಕಬಡ್ಡಿಯಲ್ಲಿ ಕೆಲವು ಸಮಯ ಕಾಲ ಮುಂಬೈನಲ್ಲಿ ವಿಶೇಷ ತರಬೇತಿ ಕೂಡ ಪಡೆದಿದ್ದರು. ತನ್ನ ಹಿರಿಯರು ಕೂಡ ತನಗೆ ಪ್ರೋತ್ಸಾಹ ನೀಡಿದ್ದು ದೈಹಿಕ ಸಾಮಥ್ರ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ತುಂಬಾ ಶ್ರಮಿಸಿರುವದಾಗಿ ಅವಿನಾಶ್ ತಮ್ಮ ಆಯ್ಕೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ರಾಷ್ಟ್ರಮಟ್ಟದ ಪ್ರೋ ಕಬಡ್ಡಿ ಸೆಲೆಕ್ಷನ್ ಕ್ಯಾಂಪ್‍ಗೆ ಹೋಗುವ ಮುನ್ನ ತಾನು ಹೆಚ್ಚಿನ ತೂಕ ಹೊಂದಿದ್ದೆ. ಇದೀಗ 30 ಕೆಜಿಯಷ್ಟು ತೂಕ ಇಳಿಸಿಕೊಂಡಿದ್ದೇನೆ ಎಂದು ಅವಿನಾಶ್ ‘ಶಕ್ತಿ’ಯೊಂದಿಗೆ ತಿಳಿಸಿದ್ದಾರೆ.
ರಾಜ್ಯದಿಂದ ಅವಿನಾಶ್ ರೂ. 10 ಲಕ್ಷಕ್ಕೆ ಬೆಂಗಾಲ್ ವಾರಿಯರ್ಸ್ ಪಾಲಾದರೆ, ರೈಡರ್ ರಾಕೇಶ್ 6 ಲಕ್ಷಕ್ಕೆ ತೆಲುಗು ಟೈಟಾನ್ಸ್, ಡಿಫೆಂಡರ್ ಪವನ್ 7.26 ಲಕ್ಷಕ್ಕೆ ಜೈಪುರ ಪಿಂಕ್ ಪ್ಯಾಂಥರ್ಸ್‍ಗೆ ಸೇರ್ಪಡೆಗೊಂಡಿದ್ದಾರೆ. ಕಳೆದ ಆವೃತಿಯಲ್ಲಿ ಆಡಿದ್ದ ಕರ್ನಾಟಕದ ಬಿ.ಆನಂದ್, ವಿಠಲ್ ಮೇಠಿ, ನಿತಿನ್ ಕುಮಾರ್, ಹರೀಶ್ ನಾಯಕ್, ದರ್ಶನ್ ಸಹಿತ ಹಲವು ಆಟಗಾರರು ಈ ಬಾರಿ ಹರಾಜಾಗದೆ ಉಳಿದಿದ್ದು ವಿಶೇಷ ಎನ್ನಬಹುದು. -ಸಿಂಚು