ಮಡಿಕೇರಿ ಏ.14 : ಯುವಜನ ಸೇವಾ ಇಲಾಖೆ ಅಧೀನದಲ್ಲಿರುವ ಜಿಲ್ಲಾ ಕ್ರೀಡಾಂಗಣದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಇಲಾಖೆ ಹಾಗೂ ಜಿಲ್ಲಾಡಳಿತ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿರುವ ಕೂರ್ಗ್ ಟೇಬಲ್ ಟೆನ್ನಿಸ್ ಅಸೋಸಿಯೇಷನ್, ವಾಂಡರರ್ಸ್ ಕ್ಲಬ್ ಮತ್ತು ಜಿಲ್ಲಾ ಕ್ರೀಡಾಂಗಣ ಹಿತರಕ್ಷಣಾ ಸಮಿತಿಯ ಪದಾಧಿಕಾರಿಗಳು ಜಿಲ್ಲಾಡಳಿತ ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೂರ್ಗ್ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ರಚನ್ ಪೊನ್ನಪ್ಪ ಹಾಗೂ ಇತರರು, ಕಳೆದ 25 ವರ್ಷಗಳಿಂದ ಯುವಜನ ಸೇವಾ ಇಲಾಖೆ ಸಹಯೋಗದಲ್ಲಿ ಟೇಬಲ್ ಟೆನ್ನಿಸ್ ಪಂದ್ಯಾವಳಿಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿತ್ತು. ಬೇಸಿಗೆ ರಜೆಯಲ್ಲಿ ಮಕ್ಕಳಿಗೆ ಉಚಿತವಾಗಿ ಶಿಬಿರವನ್ನೂ ನಡೆಸಲಾಗುತ್ತಿತ್ತು. ಆದರೆ ಈ ಬಾರಿ ಆ ಸ್ಥಳದಲ್ಲಿ ಸ್ಕ್ವಾಶ್ ಕೋರ್ಟ್ ನಿರ್ಮಿಸಿರುವದರಿಂದ ಟೇಬಲ್ ಟೆನ್ನಿಸ್ ಆಡಲು ಸ್ಥಳವಿಲ್ಲದಂತಾಗಿದೆ. ಸ್ಕ್ವಾಶ್ ಕೋರ್ಟ್ನಲ್ಲಿ ಪ್ರಸಕ್ತ ಯಾವದೇ ಚಟುವಟಿಕೆಗಳು ನಡೆಯದಿರುವದರಿಂದ ಆ ಸ್ಥಳವನ್ನು ಬಿಟ್ಟುಕೊಡುವಂತೆ ಹಲವು ಬಾರಿ ಇಲಾಖೆಯ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದರೂ ಯಾವದೇ ಸ್ಪಂದನೆ ದೊರಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದೇ ಆವರಣದಲ್ಲಿ ಶಿಕ್ಷಣ ಇಲಾಖೆಗೆ ಸೇರಿದ ಕಟ್ಟಡವೊಂದು ಖಾಲಿ ಬಿದ್ದಿದ್ದು, ಆ ಕಟ್ಟಡವನ್ನು ದುರಸ್ತಿ ಮಾಡಿ ನೀಡಿದಲ್ಲಿ ಟೇಬಲ್ ಟೆನ್ನಿಸ್ ಆಟದ ಜೊತೆಗೆ ಮಕ್ಕಳಿಗೆ ತರಬೇತಿ ನೀಡಲೂ ಅನುಕೂಲವಾಗಲಿದೆ. ಇದೀಗ ಬೇಸಿಗೆ ರಜೆಯ ಸಮಯವಾಗಿರುವದರಿಂದ ಮಕ್ಕಳಿಗೆ ಈಜುಕೊಳದ ಅಗತ್ಯವಿದ್ದರೂ, ಕಳೆದ 8 ತಿಂಗಳುಗಳಿಂದ ಈಜುಕೊಳವನ್ನು ದುರಸ್ತಿಯ ನೆಪದಲ್ಲಿ ಮುಚ್ಚಲಾಗಿದೆ. ಇದರಿಂದಾಗಿ ಮಕ್ಕಳು ಯಾವದೇ ಆಟವಾಡಲು ಸಾಧ್ಯವಾಗದೆ ವಾಪಾಸಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬ್ರಿಟೀಷರ ಕಾಲದಲ್ಲಿ ನಿರ್ಮಾಣವಾಗಿದ್ದ ಪೆವಿಲಿಯನ್ ಕೂಡಾ ಹಾಳಾಗಿದ್ದು, ಅದನ್ನೂ ಇಲಾಖೆ ದುರಸ್ತಿಪಡಿಸಿಲ್ಲ. ಷಟಲ್ ಬ್ಯಾಡ್ಮಿಂಟನ್ಗೆ ಸಂಬಂಧಿಸಿದ ನಾಲ್ಕು ಕೋರ್ಟ್ಗಳಿದ್ದು, ಪ್ರತೀವರ್ಷ ಇದನ್ನು ದುರಸ್ತಿಪಡಿಸಲಾಗುತ್ತಿದ್ದರೂ, ಮಳೆಗಾಲದಲ್ಲಿ ಸೋರುವುದು ಮಾತ್ರ ನಿಂತಿಲ್ಲ. ಕ್ರೀಡಾಂಗಣದಲ್ಲಿ ಶೌಚಾಲಯದ ಕೊರತೆಯೂ ಇದ್ದು, ಸ್ವಚ್ಛ ಭಾರತದ ಪರಿಕಲ್ಪನೆಯನ್ನು ಅಣಕಿಸುವಂತೆ ಕ್ರೀಡಾಂಗಣದ ತುಂಬ ಸಿಗರೇಟ್ ತುಂಡುಗಳು, ಪ್ಲಾಸ್ಟಿಕ್ ಹಾಗೂ ನೀರಿನ ಪ್ಲಾಸ್ಟಿಕ್ ಬಾಟಲಿಗಳು ತುಂಬಿಕೊಂಡಿವೆ. ಇದನ್ನು ಶುಚಿಗೊಳಿಸುವ ಕನಿಷ್ಟ ಪ್ರಯತ್ನಕ್ಕೂ ಇಲಾಖೆ ಮುಂದಾಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಟೇಬಲ್ ಟೆನ್ನಿಸ್ ಆಡಲು ಅವಕಾಶಗಳಿದ್ದರೂ, ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಇದ್ದೂ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರುಗಳು, ಇಲಾಖೆಯಿಂದ ಕಟ್ಟಡ ನಿರ್ಮಿಸಿಕೊಡಲು ಸಾಧ್ಯವಾಗದಿದ್ದರೆ, ಜಾಗ ನೀಡಿದಲ್ಲಿ ನಾವೇ ಸಾರ್ವಜನಿಕರ ಸಹಕಾರದಿಂದ ಕಟ್ಟಡ ನಿರ್ಮಿಸಿ ಟೇಬಲ್ ಟೆನ್ನಿಸ್ ಕ್ರೀಡೆಗೆ ಉತ್ತೇಜನ ನೀಡುವುದಾಗಿಯೂ ತಿಳಿಸಿದರು. ಈ ಸಂಬಂಧ ಜಿಲ್ಲಾಧಿಕಾರಿಗಳು ಖುದ್ದು ಪರಿಶೀಲನೆ ಮಾಡಿ ಆಟವಾಡಲು ಅವಕಾಶ ಮಾಡಿಕೊಡುವಂತೆ ಅವರುಗಳು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ವಾಂಡರರ್ಸ್ ಕ್ಲಬ್ ಅಧ್ಯಕ್ಷ ಬಾಬು ಸೋಮಯ್ಯ, ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಅಧ್ಯಕ್ಷ ವಿ.ಎಸ್.ಮಹಮ್ಮದ್ ಆಸಿಫ್, ಜಿ.ವಿ.ರವಿಕುಮಾರ್, ಹಿರಿಯ ಕ್ರೀಡಾ ತರಬೇತುದಾರ ಲಕ್ಷ್ಮಣ್ ಸಿಂಗ್ ಮಾಸ್ಟರ್ ಉಪಸ್ಥಿತರಿದ್ದರು.