ಮಡಿಕೇರಿ, ಏ.14: ಪ್ರಕೃತ್ತಿ ವಿಕೋಪದಿಂದ ಸಂಕಷ್ಟ ಎದುರಿಸಿದ ಕೊಡಗಿನ ಗ್ರಾಮೀಣ ಪ್ರದೇಶದ ಜನತೆ, ಸಂಘಸಂಸ್ಥೆಗಳ ನೆರವಿನೊಂದಿಗೆ ಮತ್ತೆ ಸ್ವಾವಲಂಭಿ ಜೀವನಕ್ಕೆ ಮರಳುತ್ತಾರೆ ಎಂಬ ವಿಶ್ವಾಸವನ್ನು ದಕ್ಷಿಣ ಕನ್ನಡ ಕನ್ನಡಿಗರ ಸಂಘದ ಅಧ್ಯಕ್ಷ ರಾಮಚಂದ್ರ ಉಪಾಧ್ಯಾಯ ವ್ಯಕ್ತಪಡಿಸಿದ್ದಾರೆ.

ಮಡಿಕೇರಿಯ ಶಿಶುಕಲ್ಯಾಣ ಸಂಸ್ಥೆಯ ಮುಂಬದಿ ಭಾರತೀಯ ವಿದ್ಯಾಭವನದ ಪ್ರಾಜೆಕ್ಟ್ ಕೂರ್ಗ್‍ನ ಯಶಸ್ವಿನಿ ಯೋಜನೆಯಡಿ ಕಾಲೂರು ಗ್ರಾಮದ ಮಹಿಳೆಯರು ತಯಾರಿಸಿದ ಮಸಾಲ ಪದಾರ್ಥಗಳ ಎರಡನೇ ಮಾರಾಟ ಮಳಿಗೆಯನ್ನು ಉದ್ಘಾಟಿಸಿ ಮಾತನಾಡಿದ ರಾಮಚಂದ್ರ ಉಪಾಧ್ಯಾಯ, ಕಾಲೂರು ಗ್ರಾಮದ ಛಲವಂತ ಮಹಿಳೆಯರು ತಯಾರಿಸಿದ ಉತ್ಪನ್ನಗಳು ದೇಶದ ಇತರ ಹೆಸರಾಂತ ಉತ್ಪನ್ನಗಳಿಗೆ ಸರಿಸಮನಾಗಿ ಖ್ಯಾತವಾಗಲಿ ಎಂದು ಹಾರೈಸಿದರು. ವೈಜ್ಞಾನಿಕ ಮತ್ತು ಅತ್ಯಾಧುನಿಕ ರೀತಿಯಲ್ಲಿ ಉತ್ಪನ್ನಗಳ ತಯಾರಿಕೆಗೆ ಸಹಕಾರ ನೀಡುವದಾಗಿಯೂ ಭರವಸೆ ನೀಡಿದ ರಾಮಚಂದ್ರ ಉಪಾಧ್ಯಾಯ, ಭಾರತೀಯ ವಿದ್ಯಾಭವನವು ಸಾಂಸ್ಕøತಿಕ ಚಟುವಟಿಕೆಗಳೊಂದಿಗೆ ಸಾಮಾಜಿಕ ಕಳಕಳಿಯ ಯೋಜನೆ ರೂಪಿಸುತ್ತದೆ ಎಂಬುದನ್ನು ಕೊಡಗಿನ ಕೇಂದ್ರ ನಿರೂಪಿಸಿದೆ ಎಂದು ಶ್ಲಾಘಿಸಿದರು.

ಭಾರತೀಯ ವಿದ್ಯಾಭವನದ ಕೊಡಗು ಕೇಂದ್ರದ ಅಧ್ಯಕ್ಷ ಕೆ.ಎಸ್.ದೇವಯ್ಯ ಮಾತನಾಡಿ, ಜಲಪ್ರಳಯದಿಂದ ಸಂಕಷ್ಟಕ್ಕೀಡಾಗಿದ್ದ ಕಾಲೂರಿನಲ್ಲಿ ಬದಲಾವಣೆಯ ಗಾಳಿಬೀಸುತ್ತಿದ್ದು ಇಲ್ಲಿನ ಮಹಿಳೆಯರು ಸ್ವಾವಲಂಭಿಗಳಾಗಬೇಕೆಂಬ ಧೋರಣೆಯಿಂದ ಹಠತೊಟ್ಟು ಸಾಧನೆಯ ಹಾದಿಯಲ್ಲಿ ಮುನ್ನಡೆದದ್ದು ಶ್ಲಾಘನೀಯ ಎಂದರು. ಊಹೆಗೂ ನಿಲುಕದಂಥ ಜಲಪ್ರಳಯವು ಹಲವರ ಜೀವ ಬಲಿ ಪಡೆದಿರುವದು ಮಾತ್ರವಲ್ಲ, ಅನೇಕರು ಬದುಕಿಯೂ ಸಾಯುತ್ತಿರುವಂಥ ಸ್ಥಿತಿಗೆ ತಂದೊಡ್ಡಿದೆ ಎಂದು ವಿಷಾಧಿಸಿ ಯಾವದೇ ಸಂಕಷ್ಟವಿದ್ದರೂ ಭಾರತೀಯ ವಿದ್ಯಾಭವನ ಸೇರಿದಂತೆ ಅನೇಕ ಸಂಘಸಂಸ್ಥೆಗಳು ಅಂಥವರ ನೆರವಿಗೆ ಮುಂದಾಗಲಿದೆ ಎಂದು ಭರವಸೆ ನೀಡಿದರು. ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ, ಕಾಲೂರಿನ ಮಹಿಳೆಯರ ಜೀವನ ಸ್ಥಿತಿ ಸುಧಾರಣೆಗೆ ಈ ಯೋಜನೆ ನೆರವಾಗಿರುವದು ಶ್ಲಾಘನೀಯ ಎಂದರು. ಯಶಸ್ವಿ ಯೋಜನೆಯ ಸದಸ್ಯೆ ಕಾಲೂರಿನ ಜಮುನಾ ವಂದಿಸಿದರು.

ದಕ್ಷಿಣ ಕನ್ನಡ ಕನ್ನಡಿಗರ ಸಂಘದ ಕಾರ್ಯದರ್ಶಿ ವೈ. ಜಯಂತ್ ರಾವ್, ನಿರ್ದೇಶಕರಾದ ಕೆ.ಎಸ್.ಅಡಿಗ, ಹರಿದಾಸ ಉಪಾಧ್ಯಾಯ, ಪೂರ್ಣಿಮಾ ರಾಮಚಂದ್ರ,ಭಾರತೀಯ ವಿದ್ಯಾಭವನ ಕೊಡಗು ಕೇಂದ್ರದ ಉಪಾಧ್ಯಕ್ಷ ಕೆ.ಪಿ. ಉತ್ತಪ್ಪ, ಕಾಲೂರು ಗ್ರಾಮದ ಭಗವತಿ ದೇವಾಲಯದ ಪ್ರಧಾನ ಅರ್ಚಕ ನಾಗೇಶ್ ಕಾಲೂರು, ಪ್ರಾಜೆಕ್ಟ್ ಕೂರ್ಗ್ ಸಂಚಾಲಕ ಬಾಲಾಜಿಕಶ್ಯಪ್, ನಿರ್ದೇಶಕರಾದ ನಯನಾ ಕಶ್ಯಪ್, ರಮೇಶ್ ಹೊಳ್ಳ, ಅನಿಲ್ ಎಚ್.ಟಿ., ಎಂ.ಇ.ಚಿಣ್ಣಪ್ಪ, ಓಂಕಾರೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಜಗದೀಶ್, ಕೊಡಗು ಹೊಟೇಲ್, ರೆಸ್ಟೋರೆಂಟ್ ರೆಸಾರ್ಟ್ ಅಸೋಸಿಯೇಷನ್ ಖಚಾಂಜಿ ಭಾಸ್ಕರ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

180 ದಿನಗಳಲ್ಲಿ ಎರಡನೇ ಮಳಿಗೆ

ಪ್ರಾಜೆಕ್ಟ್ ಕೂರ್ಗ್ ವತಿಯಿಂದ ಮಡಿಕೇರಿಯಲ್ಲಿ ಕೇವಲ 180 ದಿನಗಳಲ್ಲಿ ಪ್ರಾರಂಭವಾದ ದಾಖಲೆಯ ಎರಡನೇ ಮಳಿಗೆ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದ ಬಳಿಯ ಬಾಲಭವನದ ಮುಂಭಾಗದಲ್ಲಿ ತೆರೆಯಲ್ಪಟ್ಟಿದ್ದು, ಮೊದಲನೇ ಮಳಿಗೆ ರಾಜಾಸೀಟ್ ಮುಂಬದಿಯಿದೆ. ಜಲಪ್ರಳಯಕ್ಕೊಳಗಾದ ಕಾಲೂರು ಗ್ರಾಮದ ಮಹಿಳೆಯರು ಸೂಕ್ತ ತರಬೇತಿ ಪಡೆದು ತಯಾರಿಸಿದ ಮಸಾಲೆ ಪದಾರ್ಥಗಳು, ಚಾಕೋಲೇಟ್, ಅಕ್ಕಿಪುಡಿ ಸೇರಿದಂತೆ ವಿವಿಧ ದಿನಬಳಕೆಯ ಉತ್ಪನ್ನಗಳು ಈ ಮಳಿಗೆಯಲ್ಲಿ ಮಾರಲ್ಪಡುತ್ತಿದೆ. ಈ ಉತ್ಪನ್ನಗಳ ಮೂಲಕ ಕಾಲೂರುಗ್ರಾಮದ ಮಹಿಳೆಯರು ಸ್ವಾವಲಂಭಿ ಜೀವನ ಕಟ್ಟಿಕೊಳ್ಳಲು ಭಾರತೀಯ ವಿದ್ಯಾಭವನದ ಪ್ರಾಜೆಕ್ಟ್ ಕೂರ್ಗ್ ಸಹಕಾರಿಯಾಗಿದೆ.